ಮೈಸೂರು: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಭಾರತಿ ಸಂಸ್ಥೆಯ ಸಹಯೋಗದಲ್ಲಿ ನವೆಂಬರ್ 5 ರಿಂದ 8ರವರೆಗೆ ಕೋಲ್ಕತ್ತಾದಲ್ಲಿ 5ನೇ ಭಾರತೀಯ ಅಂತಾ ರಾಷ್ಟ್ರೀಯ ವಿಜ್ಞಾನ ಮೇಳ ಆಯೋಜಿಸಲಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ತಿಳಿಸಿದರು. ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯಕ್ಕೆ ಶನಿವಾರ ಭೇಟಿ ನೀಡಿದ ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವರ್ಷದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಗ್ರಾಮವೊಂದನ್ನು ಆಯೋಜಿಸಲಾಗಿದ್ದು, ಇಲ್ಲಿಗೆ ದೇಶದೆಲ್ಲೆಡೆಯಿಂದ 2,500 ಶಾಲಾ ಮಕ್ಕಳನ್ನು ಆಹ್ವಾನಿಸಲಾಗಿದೆ.
ಪ್ರಧಾನಮಂತ್ರಿ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಪ್ರತಿಯೊಬ್ಬ ಸಂಸದರೂ ತಂತಮ್ಮ ಕ್ಷೇತ್ರದಿಂದ ಐವರು ಶಾಲಾ ಮಕ್ಕಳು ಹಾಗೂ ಓರ್ವ ಶಿಕ್ಷಕರನ್ನು ಈ ವಿಜ್ಞಾನ ಮೇಳಕ್ಕೆ ನಾಮ ನಿರ್ದೇಶನ ಮಾಡಲಿದ್ದಾರೆ. ಸುಮಾರು 1,500 ಯುವ ವಿಜ್ಞಾನಿಗಳು, ಸಂಶೋಧಕರು ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಹೊಸ ಯುಗದ ತಂತ್ರಜ್ಞಾನ, ದಿವ್ಯಾಂಗರಿಗಾಗಿ ವಸ್ತು ಪ್ರದರ್ಶನ, ವಿಜ್ಞಾನ ಸಾಹಿತ್ಯ ಮೇಳ, ಪುಸ್ತಕ ಮೇಳ ಕೂಡ ಆಯೋಜಿಸಲಾಗಿದೆ ಎಂದರು.
ವಿರೋಧ ಪಕ್ಷಗಳ ನಾಯಕರನ್ನೇ ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆಯ ದಾಳಿ ನಡೆಯುತ್ತಿದೆ ಎಂಬುದು ಆಧಾರರಹಿತ ಆರೋಪ. ಸ್ವಾಯತ್ತ ಸಂಸ್ಥೆಗಳಾದ ಐಟಿ, ಇ.ಡಿ, ಸಿಬಿಐನಂತಹ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿವೆ.
-ಡಾ.ಹರ್ಷವರ್ಧನ, ಕೇಂದ್ರ ಸಚಿವ