Advertisement

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ; ಕರ್ನಾಟಕ ಸರ್ಕಾರಕ್ಕೆ ತರಾಟೆ

01:18 PM Apr 08, 2024 | Team Udayavani |

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

Advertisement

ರಾಜ್ಯದ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿರುವ ಕರ್ನಾಟಕ ಹೈಕೋರ್ಟ್​ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

“ನೀವು ದೇಶದ ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದೀರಿ. ಈಗ ನೀವು ಅದನ್ನು ಸಂಕೀರ್ಣಗೊಳಿಸಲು ಬಯಸುತ್ತೀರಿ. ದಯವಿಟ್ಟು ಹಾಗೆ ಮಾಡಬೇಡಿ” ಎಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರದ ವಕೀಲರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ನ್ಯಾಯಪೀಠವು ಈ ತರಗತಿಗಳ ಪರೀಕ್ಷೆಗಳ ಫಲಿತಾಂಶಗಳ ಘೋಷಣೆಗೆ ತಡೆ ನೀಡಿದೆ. ಈ ಹಿಂದೆ ಕರ್ನಾಟಕ ಹೈಕೋರ್ಟ್‌ ನ ನಿರ್ದೇಶನದ ಮೇರೆಗೆ ಕಳೆದ ತಿಂಗಳು ಬೋರ್ಡ್ ಪರೀಕ್ಷೆ ನಡೆಸಲಾಗಿತ್ತು.

5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮಾರ್ಚ್​ 22ರಂದು ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ಎತ್ತಿಹಿಡಿದಿತ್ತು.

Advertisement

ಸದ್ಯ ಯಾವುದೇ ಶಾಲೆಗಳು ಸಹ ಫಲಿತಾಂಶ ಪ್ರಕಟಿಸಬಾರದು. ಮುಂದಿನ ಆದೇಶದವರೆಗೆ ಕಾಯಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮಾರ್ಚ್​ನಲ್ಲಿ ಬೋರ್ಡ್ ಪರೀಕ್ಷೆಗೆ ಅನುಮತಿ ನೀಡಿ ಆದೇಶ ನೀಡಿದ್ದ ಹೈಕೋರ್ಟ್, ಸ್ಥಗಿತಗೊಂಡಿರುವ ಪರೀಕ್ಷೆ ಮುಂದುವರಿಸಲು ಸೂಚನೆ ನೀಡಿತ್ತು. ಅದರಂತೆ ಬಳಿಕ ಶಾಲೆಗಳು ಪರೀಕ್ಷೆಗಳನ್ನು ನಡೆಸಿದ್ದವು. ಇದೀಗ ಫಲಿತಾಂಶ ಪ್ರಕಟವಾಗುವ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next