Advertisement

5ಜಿ ತರಂಗಾಂತರ ಸೇವೆ ಶೀಘ್ರ

11:38 AM Nov 16, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ರಾಷ್ಟ್ರಾದ್ಯಂತ ಖಾಸಗಿ ಟೆಲಿಕಾಂ ಕಂಪನಿಗಳಿಗೆ 5ಜಿ ತರಂಗಾಂತರ ಸೇವೆ ಒದಗಿಸಲು ಕ್ರಮ ಕೈಗೊಂಡಿದೆ ಎಂದು ಕೇಂದ್ರದ ಸಂವಹನ ಸಚಿವ ಮನೋಜ್‌ ಸಿನ್ಹಾ ತಿಳಿಸಿದ್ದಾರೆ.

Advertisement

ಸಂಪಂಗಿರಾಮನಗರದ ದೂರವಾಣಿ ವಿನಿಮಯ ಕೇಂದ್ರದಲ್ಲಿ ನೂತನವಾಗಿ ಅಳವಡಿಸಿರುವ ನ್ಯಾಷನಲ್‌ ಸೆಕ್ಯುರಿಟಿ ಅಶ್ಯೂರೆನ್ಸ್‌ ಸ್ಟಾಂಡರ್‌ ಫೆಸಿಲಿಟಿ, ಎಂಟಿಸಿಟಿಇ ಹಾಗೂ ಸರಳ್‌ ಸಂಚಾರ ಪೋರ್ಟಲ್‌ ಕೇಂದ್ರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, 5ಜಿ ಸೇವೆಗಾಗಿ ಎಲ್ಲ ಖಾಸಗಿ ಟೆಲಿಕಾಂ ಸಂಸ್ಥೆಗಳು ಕಾಯುತ್ತಿವೆ.

ಈ ಬಗ್ಗೆ ಕೇಂದ್ರ ಸರ್ಕಾರ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ ಮೇಳದಲ್ಲೂ ಪ್ರಸ್ತಾಪ ಮಾಡಿದೆ. ಇನ್ನೂ 5ಜಿ ಸೇವೆ ಒದಗಿಸಲು ವಿಳಂಬ ಮಾಡುವುದಿಲ್ಲ ಎಂದು ಹೇಳಿದರು. ಆದಷ್ಟು ಶೀಘ್ರವಾಗಿ ದೇಶಾದ್ಯಂತ‌ ಖಾಸಗಿ ಟೆಲಿಕಾಂ ಕಂಪನಿಗಳಿಗೆ 5ಜಿ ತರಂಗಾಂತರ ಸೇವೆ ಒದಗಿಸಲಾಗುವುದು.

ಭಾರತ್‌ ಸಂಚಾರ್‌ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಗ್ರಾಹಕರಿಂದ 4ಜಿ ಸೇವೆ ಒದಗಿಸುವಂತೆ ಹಲವು ಬಾರಿ ಬೇಡಿಕೆಗಳು ಬಂದಿವೆ. 4ಜಿ ಸೇವೆ ನೀಡಲು ಬಿಎಸ್‌ಎನ್‌ಎಲ್‌ ಕೂಡ ಶ್ರಮಿಸುತ್ತಿದೆ. ಶೀಘ್ರದಲ್ಲೇ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ 4ಜಿ ಸೇವೆ ಬಗ್ಗೆ ಚರ್ಚಿಸಿ, ಬಹುಬೇಗನೆ ಬಿಎಸ್‌ಎನ್‌ಎಲ್‌ ಗ್ರಾಹಕರಿಗೂ 4ಜಿ ಸೇವೆ ಒದಗಿಸಲಾಗುವುದು ಎಂದರು.

ಭಾರತದ ಎಲ್ಲಾ ವ್ಯವಹಾರಗಳು ಡಿಜಿಟಲ್‌ ಇಂಡಿಯಾ ಯೋಜನೆ ಅಡಿಯಲ್ಲಿ ಡಿಜಿಟಲೀಕರಣಗೊಳ್ಳುತ್ತಿದೆ. ಈ ವೇಳೆ ಸೈಬರ್‌ ಅಪರಾಧಗಳು ಮತ್ತು ಆತಂಕ ಹಿಮ್ಮೆಟ್ಟಿಸಿ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಇದಕ್ಕಾಗಿಯೇ ರಾಷ್ಟ್ರೀಯ ಸುರಕ್ಷತಾ ಖಾತರಿ ದೂರಸಂಪರ್ಕ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ ಎಂದರು.

Advertisement

ಮೊಬೈಲ್‌ ಡೇಟಾ ಬಳಕೆಯಲ್ಲಿ ಅಮೆರಿಕ ಮತ್ತು ಚೀನಾ ಮೊದಲೆರಡು ಸ್ಥಾನದಲಿವೆ. ಭಾರತ ನಂತರದ ಸ್ಥಾನದಲ್ಲಿದೆ. ದೇಶಾದ್ಯಂತ ಸುಮಾರು 1.1 ಶತಕೋಟಿ ಜನರು ಮೊಬೈಲ್‌ಗ‌ಳಲ್ಲಿ ಅಂತರ್ಜಾಲ ಬಳಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಮೊಬೈಲ್‌ ಡೇಟಾ ಬಳಕೆಯಲ್ಲಿ ಅಮೆರಿಕ ಹಾಗೂ ಚೀನಾವನ್ನು ಭಾರತ ಹಿಂದಕ್ಕಲಿದೆ ಎಂದು ತಿಳಿಸಿದರು.

ಭಾರತ ಮುಂಚೂಣಿ: ಕೇಂದ್ರ ದೂರ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ಮಾತನಾಡಿ, ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ದೇಶೀಯವಾಗಿ ಮೊಬೈಲ್‌ ಸೇರಿದಂತೆ ದೂರ ಸಂಪರ್ಕ ಜಾಲದ ಸಲಕರಣೆಗಳ ತಯಾರಿಯಲ್ಲಿ ಭಾರತ ಮುಂಚೂಣಿಯಲ್ಲಿದೆ.

ಆದರೆ, ದೇಶೀಯವಾಗಿ ತಯಾರಿಸಿದ ಹಾಗೂ ವಿದೇಶಗಳಿಂದ ಆಮದು ಮಾಡಿಕೊಂಡ ದೂರ ಸಂಪರ್ಕ ಜಾಲದ ಸಲಕರಣೆಗಳನ್ನು ಸರಿಯಾಗಿ ಪರಿಶೀಲಿಸಿ ಪ್ರಮಾಣ ಪತ್ರ ನೀಡುವಂತಹ ವ್ಯವಸ್ಥೆ  ಇರಲಿಲ್ಲ. ಹಾಗಾಗಿ ಬೆಂಗಳೂರಿನಲ್ಲಿ ಎಂಟಿಸಿಟಿಇ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ದೂರ ಸಂಪರ್ಕ ವ್ಯವಸ್ಥೆ ಕಲ್ಪಿಸಲು, ನೋಂದಣಿ ಮತ್ತು ಪರವಾನಗಿ ನೀಡುವ ಪಕ್ರಿಯೆಯನ್ನು ಸರಳವಾಗಿಸಲು ಸರಳ್‌ ಸಂಚಾರ್‌ ಪೋರ್ಟಲ್‌ ವ್ಯವಸ್ಥೆಗೂ ಚಾಲನೆ ನೀಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಎನ್‌.ಬಾಲಕೃಷ್ಣನ್‌, ದೂರ ಸಂಪರ್ಕ ಇಲಾಖೆಯ ಅಧಿಕಾರಿಗಳಾದ ದೇಬತೋಷ್‌ ಮನ್ನಾ, ಜಿ.ನರೇಂದ್ರನಾಥ್‌, ರವಿಶಂಕರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next