Advertisement

560ಕೋಟಿ ವೆಚ್ಚದ ಅನುಭವ ಮಂಟಪ ಶೀಘ್ರ ಕಾರ್ಯಾರಂಭ?

11:07 AM Mar 29, 2022 | Team Udayavani |

ಬೀದರ: ಬಸವಾನುಯಾಯಿಗಳ ಕನಸಿನ, ಬಹು ನಿರೀಕ್ಷಿತ ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣ ಯೋಜನೆಗೆ ಅಗತ್ಯ ಭೂಮಿ ಖರೀದಿಸಿದ್ದು, ಟೆಂಡರ್‌ ಸಹ ಕರೆಯಲಾಗಿದೆ. ಈ ಬೃಹತ್‌ ಕಾಮಗಾರಿ ಬಹುತೇಕ ಏಪ್ರಿಲ್‌ ಅಂತ್ಯಕ್ಕೆ ಆರಂಭವಾಗುವ ಸಾಧ್ಯತೆ ಇದೆ.

Advertisement

ಕಳೆದ ಫೆಬ್ರವರಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಅನುಭವ ಮಂಟಪಕ್ಕಾಗಿ 560 ಕೋಟಿ ರೂ. ಪರಿಷ್ಕೃತ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಜತೆಗೆ ಸಿಎಂ ನೇತೃತ್ವದಲ್ಲಿ ಜಿಲ್ಲೆಯ ಸಚಿವರು ಮತ್ತು ಉನ್ನತ ಅಧಿಕಾರಿಗಳ ಮಹತ್ವದ ಸಭೆ ನಡೆಸಲಾಗಿತ್ತು. ಬಳಿಕ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಎದುರಾಗಿದ್ದ ಎಲ್ಲ ತೊಡಕುಗಳು ನಿವಾರಣೆಗೊಂಡು ಒಂದಿಷ್ಟು ವೇಗ ಸಿಕ್ಕಿತ್ತು. ಈಗ ಟೆಂಡರ್‌ ಆಹ್ವಾನಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಕೆಲಸ ಕಾರ್ಯಾರಂಭಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿದೆ.

ಸಿಎಂ ಆಗಿದ್ದ ಯಡಿಯೂರಪ್ಪ ಅವರು ಕಳೆದ ಜ.6ರಂದು ಅಂತಾರಾಷ್ಟ್ರೀಯ ಮಟ್ಟದ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿ ದೇಶಕ್ಕೆ ಲೋಕಾರ್ಪಣೆ ಮಾಡಿಸುವ ವಾಗ್ಧಾನ ಮಾಡಿದ್ದರು. ಇದಕ್ಕಾಗಿ ಕಳೆದ ಬಜೆಟ್‌ನಲ್ಲಿ 500 ಕೋಟಿ ರೂ. ಪ್ರಕಟಿಸಿ, 200 ಕೋಟಿ ರೂ. ಬಿಡುಗಡೆ ಮಾಡಿದ್ದರು. ಆದರೆ ಒಂದು ವರ್ಷ ಕಳೆದರೂ ಈವರೆಗೆ ಟೆಂಡರ್‌, ಡಿಪಿಆರ್‌ ಸಹ ಆಗದೇ ಯೋಜನೆ ಹಿನ್ನಡೆ ಕಂಡಿತ್ತು.

ಸರ್ಕಾರ ಕಾಗದ ಮೇಲೆ ಅನುಭವ ಮಂಟಪ ನಿರ್ಮಿಸಲು ಹೊರಟಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಈಗ ಪರಿಷ್ಕೃತ ಅಂದಾಜು ಮೊತ್ತ 560 ಕೋಟಿ ರೂ. ಅನುದಾನ ಬಿಡುಗಡೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ (ಬಿಕೆಡಿಬಿ) ಕೈಗೆತ್ತಿಕೊಂಡಿರುವ ಬೃಹತ್‌ ಯೋಜನೆಗೆ ಈಗಾಗಲೇ ಘೋಷಿತ 200 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಟೆಂಡರ್‌ ಪ್ರಕ್ರಿಯೆ ಶುರುವಾಗಿದೆ. ಏ.4ಕ್ಕೆ ಟೆಂಡರ್‌ ಮುಕ್ತಾಯವಾಗಲಿದ್ದು, ಏ.11ಕ್ಕೆ ಫೈನಾನ್ಸಿಯಲ್‌ ಬಿಡ್‌ ತೆರೆಯಲಾಗುತ್ತಿದೆ. ಅನುಭವ ಮಂಟಪಕ್ಕೆ ಅಗತ್ಯವಿರುವ 75 ಎಕರೆ ಭೂಮಿಯನ್ನು ಬಿಕೆಡಿಬಿ ತನ್ನ ಅಧೀನಕ್ಕೆ ಪಡೆದಿದೆ.

Advertisement

ಪ್ರಥಮ ಸಂಸತ್‌ ಎನಿಸಿರುವ ಅನುಭವ ಮಂಟಪ ನಿರ್ಮಾಣದ ಮಹತ್ವಕಾಂಕ್ಷಿ ಕಾರ್ಯ ಯಾವುದೇ ತೊಡಕುಗಳಿಲ್ಲದೆ ನೆರವೇರಬೇಕು. ಶರಣರ ಚಳವಳಿಯ ನೆನಪುಗಳನ್ನು ಮರುಸೃಷ್ಟಿಸುವಂಥ ವಿಶ್ವದ ಶ್ರೇಷ್ಠ ಕೇಂದ್ರ ಬೇಗ ತಲೆ ಎತ್ತಬೇಕೆಂಬುದು ಬಸವ ಅಭಿಮಾನಿಗಳ ಆಶಯ. ಈ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಹೆಜ್ಜೆಯನ್ನಿಡಬೇಕಿದೆ.

75 ಎಕರೆ ಭೂಮಿ ಲಭ್ಯ

ಅಂತಾರಾಷ್ಟ್ರೀಯ ಅನುಭವ ಮಂಟಪ ನಿರ್ಮಾಣಕ್ಕೆ ಒಟ್ಟು 101 ಎಕರೆ ಭೂಮಿ ಅಗತ್ಯವಿದೆ. 33 ಎಕರೆ ಸರ್ಕಾರಿ ಜಮೀನು ಜತೆಗೆ ಅನುಭವ ಮಂಟಪ ಟ್ರಸ್ಟ್‌ ತಮ್ಮ 12 ಎಕರೆ ಜಮೀನನ್ನು ದೇಣಿಗೆಯಾಗಿ ನೀಡಿದೆ. ಇನ್ನೂ 31 ಎಕರೆ ಖಾಸಗಿ ಜಮೀನನ್ನು ಭೂ ಸ್ವಾದೀನ ಪ್ರಕ್ರಿಯೆ ವಿಳಂಬ ಸಾಧ್ಯತೆ ಹಿನ್ನೆಲೆ 10 ಜನ ಮಾಲೀಕರಿಂದ ನೇರವಾಗಿ ಖರೀದಿಸಲಾಗಿದೆ.

ಪ್ರತಿ ಎಕರೆಗೆ 27 ರಿಂದ 29 ಲಕ್ಷ ರೂ.ಗಳಂತೆ ಒಟ್ಟು 12 ಕೋಟಿ ರೂ. ಗಳನ್ನು ಭೂ ಮಾಲೀಕರಿಗೆ ಪಾವತಿಸಲಾಗಿದೆ. ಒಟ್ಟು 75 ಎಕರೆ ಭೂಮಿ ಲಭ್ಯವಾದಂತಾಗಿದೆ. ಯೋಜನೆಯ ಇನ್ನೂ ಬೇಕಾಗಿರುವ 25 ಎಕರೆ ಭೂಮಿ ಬಗ್ಗೆ ಜಿಲ್ಲಾಡಳಿತ ಮತ್ತು ತ್ರಿಪುರಾಂತದ ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠ ನಡುವೆ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಒಂದು ವೇಳೆ ಜಮೀನು ಮಠದ ಪರ ಹೋದರೂ ಜಿಲ್ಲಾಡಳಿತ ಆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು, ಬಳಿಕ ಅಲ್ಲಿ ಉದ್ಯಾನವನ ನಿರ್ಮಿಸಲು ಯೋಜನೆ ರೂಪಿಸಿದೆ.

ಅನುಭವ ಮಂಟಪಕ್ಕೆ ಅಗತ್ಯ ಭೂಮಿ ಖರೀದಿ ಮುಗಿದಿದ್ದು, 574 ಕೋಟಿ ರೂ. ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಸಹ ಶುರುವಾಗಿದೆ. ಈಗ ಮಂಟಪ ನಿರ್ಮಾಣಕ್ಕೆ ಯಾವುದೇ ಅಡೆತಡೆ ಇಲ್ಲ, ಬಹುತೇಕ ಏಪ್ರಿಲ್‌ ಅಂತ್ಯಕ್ಕೆ ಕಾಮಗಾರಿ ಆರಂಭ ಆಗಲಿದೆ. -ಗೋವಿಂದ ರೆಡ್ಡಿ, ಜಿಲ್ಲಾಧಿಕಾರಿ, ಬೀದರ

Advertisement

Udayavani is now on Telegram. Click here to join our channel and stay updated with the latest news.

Next