ಹರಪನಹಳ್ಳಿ: ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಚಿಗಟೇರಿ ಗ್ರಾಮದ ಶಿವನಯ್ಯನಕೆರೆ ಹೂಳೆತ್ತುವ ಕಾಮಗಾರಿ ಶುಕ್ರವಾರ ಪ್ರಾರಂಭಗೊಂಡಿದ್ದು, ಮೊದಲ ದಿನವೇ 556 ಕೂಲಿ ಕಾರ್ಮಿಕರು ಶ್ರಮದಾನ ಮಾಡಿದರು. ಗ್ರಾಪಂ ವ್ಯಾಪ್ತಿಯಲ್ಲಿ 1360 ಕೂಲಿ ಕಾರ್ಮಿಕರು ಉದ್ಯೋಗ ಬಯಸಿ ಅರ್ಜಿಯನ್ನು ಸಲ್ಲಿಸಿದ್ದರು.
ಇದರಲ್ಲಿ 556 ಕೂಲಿ ಕಾರ್ಮಿಕರು ಶ್ರಮದಾನ ಮಾಡುವ ಮೂಲಕ ಕೆರೆಯ ಹೂಳೆತ್ತುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಒಟ್ಟು 24 ಗುಂಪುಗಳು ಹಾಗೂ 24 ಟ್ರಾÂಕ್ಟರ್‌ಗಳು ಕೆರೆಯ ಹೂಳೆತ್ತುವುದು ಹಾಗೂ ಕೆರೆಯ ಹೂಳನ್ನು ಏರಿಯ ಸುತ್ತ ಹಾಗೂ ಹೊಲದ ರಸ್ತೆಗೆ ಹಾಕಲಾಯಿತು.
ಉದ್ಯೋಗ ಖಾತರಿಯಲ್ಲಿ ಒಂದು ವಾರಗಳ ಕಾಲ ಕೆಲಸ ನಡೆಯಲಿದ್ದು, ಆರಂಭದಲ್ಲಿ 556 ಜನ ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದು, ಇನ್ನಷ್ಟು ಕೂಲಿ ಕಾರ್ಮಿಕರು ಹಂತವಾಗಿ ಕೆಲಸ ನಿರ್ವಹಿಸಲಿದ್ದಾರೆ. ಬಿಸಿಲು ಹೆಚ್ಚಿರುವ ಪರಿಣಾಮ ಬೆಳಿಗ್ಗೆ 8ಗಂಟೆ 1.30ರವರೆಗೆ ಕೆಲಸ ನಿರ್ವಹಿಸುತ್ತಿದ್ದು, ಒಬ್ಬರು 1.25ಕ್ಯೂ.ಮೀ.ನಷ್ಟು ಅಂದರೆ 5 ಅಡಿ ಅಗಲ,
ಉದ್ದ ಹಾಗೂ 2 ಅಡಿ ಆಳದಷ್ಟು ಕೆಲಸವನ್ನು ಪೂರೈಸಬೇಕು ಇದರಂತೆ ಒಂದು ವಾರಗಳ ಕಾಲ ದುಡಿಯುವ ಕೈಗಳಿಗೆ ಕೆಲಸ ಸಿಗಲಿದೆ. ಕೆಲಸ ನಡೆಯುವ ಸ್ಥಳಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ರೇವಣ್ಣ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕಿನಲ್ಲಿ ಚಿಗಟೇರಿ, ಬೆಣ್ಣಿಹಳ್ಳಿ, ತೌಡೂರು, ಕಂಚಿಕೇರಿ, ಅರಸನಾಳು, ಸಿಂಗ್ರಿಹಳ್ಳಿ ಸೇರಿದಂತೆ ಒಟ್ಟು 12 ಕಡೆಗಳಲ್ಲಿ ಕೆಲಸ ನಡೆಯುತ್ತಿದೆ. ಇಲ್ಲಿಯವರೆಗೂ 1254 ಜನ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸಿದ್ದಾರೆ. ಒಟ್ಟು 8.41 ಲಕ್ಷ ಮಾನವ ದಿನಗಳು, 35 ಕೋಟಿಗೂ ಹೆಚ್ಚಿನ ಅನುದಾನ ಬಂದಿದ್ದು, ಇದರಲ್ಲಿ ಒಂದುವರೆ ವರ್ಷಕ್ಕೆ ಕೋಟಿ ಹಣವನ್ನು ಪಾವತಿಸಲಾಗಿದೆ.
52 ಸಾವಿರ ಮಾನವ ದಿನಗಳು ಸೃಷ್ಟಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಾಹಿತಿ ಸಲಹೆಗಾರರಾದ ಭಾಗ್ಯಮ್ಮ, ಗ್ರಾಪಂ ಅಧ್ಯಕ್ಷ ರವಿಗೌಡ, ಖಾತ್ರಿ ಯೋಜನೆ ಸಹಾಯಕ ಚಂದ್ರನಾಯ್ಕ, ಪಿಡಿಒ ಯುವರಾಜ್, ಚನ್ನಬಸವಪ್ಪ, ಗ್ರಾಪಂ ಸದಸ್ಯರು ಇತರರಿದ್ದರು.