Advertisement

Bengaluru ನಗರದ ರಸ್ತೆಗಳಲ್ಲಿ 5500 ಗುಂಡಿಗಳು!: ಕೂಡಲೇ ಮುಚ್ಚುವಂತೆ ಆದೇಶ

05:54 PM May 23, 2024 | Team Udayavani |

ಬೆಂಗಳೂರು: ಮುಂಗಾರು ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ನಿವಾರಣೆ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಲು ಸಿಎಂ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಜಿಲ್ಲಾಧಿಕಾರಿಗಳು ಮತ್ತು ಸಿಇಓಗಳ ಜತೆಗೆ ವಿಡಿಯೋ ಸಂವಾದ ನಡೆಸಿದರು. ಸಂವಾದದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು ಮತ್ತು ಉನ್ನತ ಅಧಿಕಾರಿಗಳು ಹಾಜರಿದ್ದರು.

Advertisement

‘ಬೆಂಗಳೂರು ನಗರದಲ್ಲಿ ವಾರ್ಡ್ ರಸ್ತೆಗಳಲ್ಲಿ 5500 ಗುಂಡಿಗಳು ಬಿದ್ದಿದ್ದು, ಅವುಗಳನ್ನು ಮುಚ್ಚಬೇಕು, ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ 557 ಗುಂಡಿಗಳಿವೆ.ಎಲ್ಲವನ್ನೂ ಈ ತಿಂಗಳಿನಲ್ಲೇ ಭರ್ತಿ ಮಾಡಬೇಕು ಎಂದು ಸೂಚಿಸಲಾಗಿದೆ. ಮುಂಗಾರು ಮಳೆಗೂ ಮುನ್ನ ಪ್ರವಾಹ ಉಂಟಾಗಬಾರದೆಂದು ಚುನಾವಣ ಆಯೋಗದಿಂದ ಅನುಮತಿ ಪಡೆದು 7-8 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ’ ಎಂದು ಸಿಎಂ ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.

ಜೂನ್ ತಿಂಗಳಿನಿಂದ ಮುಂಗಾರು ಆರಂಭವಾಗಲಿದೆ. ಮೇ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಹಾಗಾಗಿ ಮಳೆಗಾಲ ಆರಂಭಕ್ಕೆ ಮೊದಲೇ ಸುರಿದ ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ ಎಂಬ ಮಾಹಿತಿ ಆಧರಿಸಿ ಪರಿಸ್ಥಿತಿ ವೀಕ್ಷಣೆಗೆ ಸ್ಥಳಕ್ಕೆ ಭೇಟಿ ನೀಡಿದ್ದೆವು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಯಲಹಂಕಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ 20 ಮನೆಗಳಿಗೆ ನೀರು ನುಗ್ಗಿದೆ ಎಂದು ವರದಿಯಾಗಿತ್ತು. ಯಲಹಂಕ ಕೆರೆಗೆ ನೀರು ಹೋಗುವಂತೆ ಮಾಡಲು ಅರಣ್ಯ ಇಲಾಖೆಯ ಅಧಿಕಾರಿಗಳು, ಬಿಬಿಎಂಪಿಗೆ ನೀರು ಹೋಗಲು ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಸುದ್ದಿಗಾರರಿಗೆ ತಿಳಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ ‘ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕರು ಫೋಟೋ ತೆಗೆದು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲು ವ್ಯವಸ್ಥೆ ಕಲ್ಪಿಸಿದ್ದೇವೆ. ಟ್ರಾಫಿಕ್ ಪೊಲೀಸರು ಕೂಡ ರಸ್ತೆ ಗುಂಡಿ ಗುರುತಿಸಲು ಅವಕಾಶ ಕಲ್ಪಿಸಲಾಗಿದೆ. ತ್ವರಿತವಾಗಿ ಗುಂಡಿ ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷ ನಮ್ಮ ರಾಜ್ಯ ಭೀಕರ ಬರಗಾಲವನ್ನು ಎದುರಿಸಿದ್ದು, ಈ ವರ್ಷ ಉತ್ತಮ ಮಳೆಯ ನಿರೀಕ್ಷೆ ಇದೆ. ಮಳೆ ಬರುವ ಮುನ್ನ ಪೂರ್ವಭಾವಿ ಸಿದ್ಧತೆ ಪರಿಶೀಲಿಸುತ್ತಿದ್ದೇವೆ.ಮಳೆಯಿಂದ ಸಮಸ್ಯೆಗೆ ತುತ್ತಾಗುವ ಪ್ರದೇಶ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದು, ಚರಂಡಿ, ಮಳೆನೀರುಗಾಲುವೆ ಸ್ವಚ್ಛಗೊಳಿಸಲಾಗುವುದು’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next