ಹೊಸದಿಲ್ಲಿ: ಇದು ಕೋವಿಡ್ 19 ಸಂಕಷ್ಟದ ಕಾಲ. ಎಲ್ಲರೂ, ಎಲ್ಲಾ ವೃತ್ತಿಯಲ್ಲೂ ಬದಲಾವಣೆ ಅನಿವಾರ್ಯವಾಗಿರುವ ಸ್ಥಿತಿ.
ನಮ್ಮ ದೇಶದಲ್ಲಿ ಕೋವಿಡ್ 19 ಸಂಕಷ್ಟಕ್ಕೆ ಅತೀ ಹೆಚ್ಚು ತೊಂದರೆಗೊಳಗಾಗಿರುವ ವರ್ಗದಲ್ಲಿ ಶಿಕ್ಷಕ ವರ್ಗವೂ ಸೇರಿದೆ.
ಇಂದು ದೇಶದ ಮಹಾನಗರ ಹಾಗೂ ನಗರ ಪ್ರದೇಶಗಳನ್ನು ಹೊರತುಪಡಿಸಿ ಇನ್ನುಳಿದ ಬಹುತೇಕ ಕಡೆಗಳಲ್ಲಿ ಪಾರಂಪರಿಕ ಶಿಕ್ಷಣ ವ್ಯವಸ್ಥೆಯೇ ನಡೆಯುತ್ತಿದೆ. ಇಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮುಖಾಮುಖಿಯಾಗಿಯೇ ಪಾಠ ಪ್ರವಚನಗಳು ನಡೆಯುತ್ತವೆ.
ಆದರೆ ಯಾವಾಗ ನಮ್ಮಲ್ಲಿ ಕೋವಿಡ್ 19 ಕಾಟ ಪ್ರಾರಂಭವಾಯಿತೋ, ಶಿಕ್ಷಣ ವ್ಯವಸ್ಥೆಯಲ್ಲೂ ಬದಲಾವಣೆ ಅನಿವಾರ್ಯ ಎಂಬ ಸ್ಥಿತಿ ಬಂದೊದಗಿದೆ. ಆನ್ ಲೈನ್ ಪಾಠಕ್ರಮಗಳು ಇದೀಗ ನಿಧಾನವಾಗಿಯಾದರೂ ಬಹುತೇಕ ಕಡೆಗಳಲ್ಲಿ ಜಾರಿಗೊಳ್ಳಲಾರಂಭಿಸಿದೆ.
Related Articles
ಇದರ ಒಳಿತು-ಕೆಡುಕುಗಳು, ಸಾಧಕ-ಬಾಧಕಗಳ ಕುರಿತಾಗಿಯೂ ಚರ್ಚೆ ಜೋರಾಗಿಯೇ ನಡೆಯುತ್ತಿದೆ.
ಇವೆಲ್ಲದರ ನಡುವೆಯೇ ವಯಸ್ಸಾದ ಶಿಕ್ಷಕರಿಗೆ, ಉಪನ್ಯಾಸಕರಿಗೆ ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಬಹಳಷ್ಟು ಕಷ್ಟವಾಗುತ್ತಿದೆ. ಮತ್ತು ಗ್ಯಾಜೆಟ್ ಪರಿಣತ ವಿದ್ಯಾರ್ಥಿಗಳ ಮುಂದೆ ಇವರ ಆನ್ ಲೈನ್ ತಂತ್ರಜ್ಞಾನ ಕುರಿತಾದ ಅರಿವು ಸಾಲದಾಗುತ್ತಿದೆ.
ಇದಕ್ಕೊಂದು ನಿದರ್ಶನವೆಂಬಂತೆ ಝೂಮ್ ಮೂಲಕ ಆನ್ ಲೈನ್ ತರಗತಿ ನಡೆಸುತ್ತಿದ್ದ 55 ವರ್ಷದ ಉಪನ್ಯಾಸಕರೊಬ್ಬರು ತಮ್ಮ ವಿದ್ಯಾರ್ಥಿಗಳಿಂದಲೇ ಕೆಟ್ಟ ರೀತಿಯಲ್ಲಿ ಕೀಟಲೆಗೊಳಗಾದ ಘಟನೆಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
‘ಟೆಡ್ ದಿ ಸ್ಟೋನರ್’ ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಚಾರವನ್ನು ಹಾಕಲಾಗಿದ್ದು, 55 ವರ್ಷ ಪ್ರಾಯದ ಶಿಕ್ಷಕರೊಬ್ಬರು ತಮ್ಮ ಆನ್ ಲೈನ್ ತರಗತಿ ಸಂದರ್ಭದಲ್ಲಿ ತಮ್ಮದೇ ವಿದ್ಯಾರ್ಥಿಗಳಿಂದ ಹೇಗೆ ಕೀಟಲೆಗೆ ಒಳಗಾಗಿ ಬಳಿಕ ಕಣ್ಣೀರು ಹಾಕಬೇಕಾಯಿತು ಎಂಬುದನ್ನು ವಿವರವಾಗಿ ಇಂಗ್ಲಿಷ್ ನಲ್ಲಿ ಬರೆಯಲಾಗಿದೆ.
ಈ ಪೋಸ್ಟ್ ನ ಕನ್ನಡ ಸಾರಾಂಶ ಹೀಗಿದೆ:
’55 ವರ್ಷ ಪ್ರಾಯದ ಶಿಕ್ಷಕರೊಬ್ಬರನ್ನು ಕರೆದ ಪ್ರಾಂಶುಪಾಲರು ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ. ಆನ್ ಲೈನ್ ಮತ್ತು ಗ್ಯಾಜೆಟ್ ಗಳ ಬಳಕೆಯ ಅಷ್ಟೊಂದು ಜ್ಞಾನವಿಲ್ಲದ ಆ ಶಿಕ್ಷಕರು ಅಳುಕುತ್ತಲೇ ಪ್ರಾಂಶುಪಾಲರ ಮಾತಿಗೆ ತಲೆಯಾಡಿಸುತ್ತಾರೆ, ಯಾಕೆಂದರೆ ಅದು ಅವರ ಕೆಲಸದ ಅಳಿವು-ಉಳಿವಿನ ಪ್ರಶ್ನೆಯಾಗಿರುತ್ತದೆ.
ಬಳಿಕ ಆ ಶಿಕ್ಷಕರು ಆನ್ ಲೈನ್ ತರಗತಿ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಾರೆ, ಮತ್ತು ಈ ವಿಚಾರದಲ್ಲಿ ಅವರ ಮಗಳ ಸಹಾಯವನ್ನೂ ಪಡೆದುಕೊಳ್ಳುತ್ತಾರೆ. ಎದುರಿನಲ್ಲಿ ವಿದ್ಯಾರ್ಥಿಗಳಿಲ್ಲದೇ ಪಾಠವನ್ನು ಹೇಳುವುದು ಇವರಿಗೆ ಕಷ್ಟವಾಗುತ್ತದೆ. ಹಾಗಾಗಿ ಝೂಮ್ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳುವ ಸಂದರ್ಭದಲ್ಲಿ ಸಹಜವಾಗಿಯೇ ಇವರು ನರ್ವಸ್ ಗೊಳಗಾಗುತ್ತಾರೆ.
ಈ ಸಂದರ್ಭದಲ್ಲಿ ಒಂದು ಅಪರಿಚಿತ ಐಡಿ ಮೂಲಕ ಈ ಶಿಕ್ಷಕರ ಮೇಲೆ ಕೀಟಲೆ ಪ್ರಾರಂಭಗೊಳ್ಳುತ್ತದೆ. ಅಶ್ಲೀಲ ಶಬ್ದಗಳ ಮೂಲಕ ಆ ಹಿರಿಯ ಜೀವವನ್ನು ಕಿಚಾಯಿಸಲಾಗುತ್ತದೆ. ದಿಕ್ಕೇ ತೋಚದಂತಾದ ಈ ಶಿಕ್ಷಕರು ವಿದ್ಯಾರ್ಥಿಗಳನ್ನು ಗದರುತ್ತಾರೆ, ಆದರೂ ಅಷ್ಟೂ ವಿದ್ಯಾರ್ಥಿಗಳ ಮುಂದೆ ಕೆಲವರು ಅವರನ್ನು ಇನ್ನಷ್ಟು ಕಿಚಾಯಿಸತೊಡಗುತ್ತಾರೆ.
ತನ್ನ ತಂದೆಯ ಪರಿಸ್ಥಿತಿಯನ್ನು ಗಮನಿಸಿದ ಪುತ್ರಿ ವಿದ್ಯಾರ್ಥಿಗಳ ಐಡಿ ಯಲ್ಲಿರುವ ವಾಯ್ಸ್ ಆಪ್ಷನ್ ಮ್ಯೂಟ್ ಮಾಡುತ್ತಾಳೆ. ಆದರೆ ಈ ಕಿಡಿಗೇಡಿಗಳು ಮತ್ತೆ ಅದನ್ನು ಆ್ಯಕ್ಟಿವೇಟ್ ಮಾಡಿ ಕಿಚಾಯಿಸತೊಡಗುತ್ತಾರೆ.
ಆ ಹಿರಿಯ ಶಿಕ್ಷಕರು ಅಕ್ಷರಶಃ ಕುಗ್ಗಿ ಹೋಗುತ್ತಾರೆ. ಆ ದಿನದ ತರಗತಿಯನ್ನು ಮುಗಿಸಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳತೊಡಗುತ್ತಾರೆ. ನಾಳೆ ಮತ್ತೆ ತನ್ನ ವಿದ್ಯಾರ್ಥಿಗಳನ್ನು ಎದುರಿಸುವುದು ಹೇಗೆ ಎಂಬ ಚಿಂತೆ ಅವರನ್ನು ಕಾಡತೊಡಗುತ್ತದೆ.
ಒಂದುಕಡೆ ತನ್ನ ವೃತ್ತಿಯ ಅಭದ್ರತೆ ಇನ್ನೊಂದು ಕಡೆ ತನ್ನದೇ ಕೆಲವು ವಿದ್ಯಾರ್ಥಿಗಳಿಂದ ಈ ವಯಸ್ಸಿನಲ್ಲಿ ಕಿಚಾಯಿಸಿಕೊಳ್ಳಬೇಕಾದ ಪರಿಸ್ಥಿತಿ ಅವರನ್ನು ಮಾನಸಿಕವಾಗಿ ಕುಗ್ಗಿಸಿಬಿಡುತ್ತದೆ.’ ಎಂದು ಈ ಪೋಸ್ಟ್ ನಲ್ಲಿ ವಿವರವಾಗಿ ಬರೆಯಲಾಗಿದೆ.
ಮತ್ತು ಈ ಪೋಸ್ಟ್ ನ ಕೊನೆಯಲ್ಲಿ ‘ನಿಮ್ಮ ಶಿಕ್ಷಕರನ್ನು ನಿಂದಿಸುವುದರಿಂದ ನೀವೇನೂ ಪಡೆಯುವುದಿಲ್ಲ ಬದಲಾಗಿ ಅದು ನಿಮ್ಮ ಕೆಟ್ಟ ಮನಸ್ಥಿತಿಯನ್ನು ಬಿಂಬಿಸುತ್ತದೆ’ ಎಂದು ಬರೆಯಲಾಗಿದೆ.
ಈ ಘಟನೆ ನಡೆದಿರುವುದು ಎಲ್ಲಿ ಎಂದು ತಿಳಿದುಬಂದಿಲ್ಲವಾದರೂ, ಈ ಸದ್ಯದ ಪರಿಸ್ಥಿತಿಯಲ್ಲಿ ಆನ್ ಲೈನ್ ತರಗತಿಗಳನ್ನು ಎದುರಿಸುವ ಎಲ್ಲಾ ಶಿಕ್ಷಕ ವರ್ಗದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನ್ವಯಿಸುವುದರಿಂದ ಇದನ್ನಿಲ್ಲಿ ಹಂಚಿಕೊಳ್ಳಲಾಗಿದೆ.