ಪಣಜಿ, ನ. 20 : ಪ್ರವಾಸ ನಗರಿ ಚಿತ್ರನಗರಿಯಾಗುವ ಕ್ಷಣ ಹತ್ತಿರವಾಗಿದೆ. ಇಂದಿನಿಂದ [ನ.20] ಆರಂಭವಾಗಲಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ [ಇಫಿ]ದ 54ನೇ ಆವೃತ್ತಿಗೆ ಇಂದು ಮಧ್ಯಾಹ್ನ ಚಾಲನೆ ಸಿಗಲಿದೆ.
ಚಿತ್ರೋತ್ಸವವನ್ನು ಚಿತ್ರದ ಪ್ರದರ್ಶನದ ಮೂಲಕವೇ ಉದ್ಘಾಟನೆ ಎಂಬ ಅರ್ಥ ಕಲ್ಪಿಸುವುದಾದರೆ ಅಪರಾಹ್ನ ೨.೩೦ ಕ್ಕೆ ನಾಲ್ಕು ಚಿತ್ರಮಂದಿರಗಳಲ್ಲಿ ಉತ್ಸವದ ಉದ್ಘಾಟನಾ ಚಿತ್ರ ಸ್ಟೌರ್ಟ್ ಗಟ್ ನಿರ್ದೇಶಿಸಿದ ’ಕ್ಯಾಚಿಂಗ್ ಡಸ್ಟ್’ ಚಿತ್ರ ಪ್ರದರ್ಶನಗೊಳ್ಳಲಿದೆ.
ಆ ಬಳಿಕ ಸಂಜೆ 5ರ ಸುಮಾರಿಗೆ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಔಪಚಾರಿಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಾಧುರಿ ದೀಕ್ಷಿತ್ ಮತ್ತು ಶಹೀದ್ ಕಪೂರ್, ಪಂಕಜ್ ತ್ರಿಪಾಠಿ, ವಿಜಯ್ ಸೇತುಪತಿ, ಸಾರಾ ಆಲಿಖಾನ್ ಮತ್ತಿತರರು ಭಾಗವಹಿಸುವರು. ಎಂದಿನಂತೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪಾಲ್ಗೊಳ್ಳಲಿದ್ದಾರೆ.
ನಗರಿಗೆ ಹೊಸ ರೂಪ
ಚಿತ್ರನಗರಿ ಅದರಲ್ಲೂ ಚಿತ್ರೋತ್ಸವ ನಡೆಯುವ ಐನಾಕ್ಸ್ ಸುತ್ತಮುತ್ತಲಿನ ಜಾಗದಲ್ಲಿ ಬಣ್ಣಗಳು ತೆರೆದುಕೊಳ್ಳುತ್ತಿವೆ. ಇಡೀ ಆವರಣವನ್ನು ಉತ್ಸವದ ಉತ್ಸಾಹಕ್ಕೆ ಪುನರೂಪಿಸಲಾಗುತ್ತಿದೆ. ಜತೆಗೆ ಹತ್ತಿರದ ವೃತ್ತಗಳು, ಬಸ್ ನಿಲ್ದಾಣದ ವೃತ್ತಗಳೆಲ್ಲ ಸಿಂಗರಿಸಲಾಗಿದೆ. ಭಾರತೀಯ ಸಿನಿಮಾಗಳ ವಿವಿಧ ಪೋಸ್ಟರ್‌ಗಳೆಲ್ಲ ವೃತ್ತಗಳಲ್ಲಿ ರಾರಾಜಿಸುತ್ತಿವೆ. ಇಡೀ ಐನಾಕ್ಸ್ ಆವರಣ, ವೃತ್ತಗಳು ಹಾಗೂ ಕಲಾ ಅಕಾಡೆಮಿ ಆವರಣ, ದಯಾನಂದ ಬಾಂಬೋಡ್ಕರ್ ಮಾರ್ಗ ಎಲ್ಲವೂ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ಕನ್ನಡದ ಕಾಂತಾರ, ಆರೀ ರಾರೋ
ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಗಾಲಾ ಪ್ರೀಮಿಯರ್‌ಗಳಲ್ಲಿ ಕನ್ನಡ, ತೆಲುಗು, ತಮಿಳು ಚಲನಚಿತ್ರಗಳಿಗೂ ಅವಕಾಶ ಸಿಕ್ಕರೆ, ಅಂತಾರಾಷ್ಟ್ರಿಯ ಸ್ಪರ್ಧೆಯಲ್ಲಿ ಕನ್ನಡದ ರಿಷಭ್ ಶೆಟ್ಟಿ ಅಭಿನಯದ ಕಾಂತಾರ ಪ್ರದರ್ಶನಗೊಳ್ಳುತ್ತಿದೆ. ಭಾರತೀಯ ಪನೋರಮಾದಡಿ ಸಂದೀಪ್ ಶೆಟ್ಟಿ ನಿರ್ದೇಶಿಸಿದ ಆರೀ ರಾರೋ ಕನ್ನಡ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ.
ಈ ಬಾರಿ ಭಾರತೀಯ ಪನೋರಮಾ ವಿಭಾಗವನ್ನು ಮಲಯಾಳಂ ಸಿನಿಮಾ ಅತಿ ಹೆಚ್ಚಿನ ಪಾಲು [8 ಚಿತ್ರಗಳು] ಪಡೆದಿದ್ದರೆ, ಹಿಂದಿ ನಂತರ [7] ದ ಭಾಗವನ್ನು ಪಡೆದಿದೆ. ಉಳಿದಂತೆ ಬಂಗಾಳಿ, ತಮಿಳು, ಖರ್ಬಿ ಮತ್ತಿತರ ಭಾಷೆಗಳ ಒಟ್ಟು 25 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಹಿಂದಿಯ ಎರಡು ಚಲನಚಿತ್ರಗಳೂ ಪ್ರದರ್ಶನಗೊಳ್ಳುತ್ತಿವೆ. ಅವುಗಳೆಂದರೆ ಮೃದುಲ್ ಗುಪ್ತಾ ನಿರ್ದೇಶನದ ’ಮೀರ್‌ಬೆನ್’ ಹಾಗೂ ಸುಧಾಂಶು ಸೂರಿ ನಿರ್ದೇಶನದ ’ಸಾನಾ’ ಸಿನಿಮಾಗಳು.
ಸನ್ನಿಡಿಯೋಲ್ ಜತೆ ಮಾತುಕತೆ, ಚಿತ್ರ ನಿರ್ದೇಶನ ಕುರಿತಂತೆ ಮಾಸ್ಟರ್ ಕ್ಲಾಸ್ ಸೇರಿದಂತೆ ಹತ್ತು ಹಲವು ವಿಶೇಷಗಳು ಈ ಬಾರಿಯ ಚಿತ್ರೋತ್ಸವದಲ್ಲಿವೆ.
ಒಟ್ಟೂ 270ಕ್ಕೂ ಹೆಚ್ಚು ಚಲನಚಿತ್ರಗಳು ಹತ್ತಕ್ಕೂ ಹೆಚ್ಚು ವಿಭಾಗಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಹಾಲಿವುಡ್‌ನ ಮೈಕೆಲ್ ಡಗ್ಲಾಸ್ ಈ ಬಾರಿಯ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯಿಂದ ಪುರಸ್ಕೃತರಾಗುತ್ತಿದ್ದಾರೆ.
ಎಂದಿನಂತೆ ಫಿಲ್ಮ್ ಬಜಾರ್ ಆವೃತ್ತಿಯೂ ಸಹ ನಡೆಯುತ್ತಿದೆ. ಅದರಲ್ಲಿಯೂ ಕನ್ನಡದ ನಿಶಾಂತ್ ಗುರುಮೂರ್ತಿ ನಿರ್ದೇಶಿಸಿದ ಗೋಪಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ.
*ಅರವಿಂದ ನಾವಡ