ಬೆಂಗಳೂರು: ರಾಜ್ಯದಲ್ಲಿ ದಿನದಿದಂದ ದಿನಕ್ಕೆ ಕೋವಿಡ್19 ಸೋಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಸದ್ಯ ಮಹರಾಷ್ಟ್ರ ಸೇರಿದಂತೆ ಅನ್ಯ ರಾಜ್ಯಗಳಿಂದ ಬರುತ್ತಿರುವವರಿಗೆ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ.
ಇಂದು ಮಂಡ್ಯದಲ್ಲಿ ಅತೀ ಹೆಚ್ಚು ಅಂದರೆ 22 ಮಂದಿಗೆ ಸೋಂಕು ತಾಗಿದೆ. ಉಳಿದಂತೆ ಕಲಬುರಗಿಯಲ್ಲಿ 10, ಹಾಸನದಲ್ಲಿ ಆರು, ಧಾರವಾಡದಲ್ಲಿ ನಾಲ್ಕು, ಕೋಲಾರ- ಯಾದಗಿರಿಯಲ್ಲಿ ತಲಾ ಮೂರು, ಶಿವಮೊಗ್ಗದಕ್ಷಿಣ ಕನ್ನಡದಲ್ಲಿ ತಲಾ ಎರಡು, ವಿಜಯಪುರ, ಉಡುಪಿಯಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ.
ಮಂಡ್ಯದಲ್ಲಿ 18 ಮಂದಿ ಮುಂಬೈನಿಂದ ಬಂದವರಾಗಿದ್ದಾರೆ, ನಾಲ್ಕು ಮಂದಿ ಸೋಂಕಿತ ಸಂಖ್ಯೆ 869ರ ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. ಹಾಸನದಲ್ಲಿ 3 ವರ್ಷದ ಮಗು ಸೇರಿ ಎಲ್ಲಾ ಆರು ಸೋಂಕಿತರು ಮುಂಬೈನಿಂದ ಬಂದವರಾಗಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಎರಡು ಪ್ರಕರಣ ದೃಢವಾಗಿದ್ದು, ಓರ್ವ ಮಹಿಳೆ ಮುಂಬೈನಿಂದ ಬಂದಿದ್ದರೆ, ಓರ್ವ ಯುವಕನ ಸೋಂಕು ಮೂಲ ಪತ್ತೆಯಾಗಿಲ್ಲ. ಉಡುಪಿಯಲ್ಲಿ ಇತ್ತೀಚೆಗೆ ಮೃತಪಟ್ಟ ವ್ಯಕ್ತಿಗೆ ಸೋಂಕು ಇರುವುದು ದೃಢವಾಗಿದೆ.
ಕೋಲಾರದಲ್ಲಿ ಮೂವರಿಗೆ ಸೋಂಕು ತಾಗಿದ್ದು, ಓರ್ವ ಚೆನ್ನೈನಿಂದ ಬಂದಿದ್ದರೆ, ಓರ್ವ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಮತ್ತೋರ್ವ ಸೋಂಕು ಮೂಲ ಪತ್ತೆಯಾಗಿಲ್ಲ.
ಕಲಬುರಗಿಯಲ್ಲಿ ಸೋಂಕಿತರಲ್ಲಿ ಆರು ಮಂದಿ ಮಹರಾಷ್ಟ್ರದಿಂದ ಬಂದವರು. ಓರ್ವ ಕಲಬುರಗಿಯ ಕಂಟೈನ್ ಮೆಂಟ್ ಝೋನ್ ಗೆ ಸಂಪರ್ಕ ಮಾಡಿದ್ದ. 35 ವರ್ಷದ ಮಹಿಳೆಯ ಸೋಂಕು ಮೂಲ ಪತ್ತೆಯಾಗಿಲ್ಲ. ಪಿ-927ರ ಸಂಪರ್ಕದಿಂದ ಇಬ್ಬರಿಗೆ ಸೋಂಕು ತಾಗಿದೆ.
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1146ಕ್ಕೆ ಏರಿದೆ. ಅದರಲ್ಲಿ 37 ಮಂದಿ ಸಾವನ್ನಪ್ಪಿದ್ದು, 497 ಮಂದಿ ಗುಣಮುಖರಾಗಿದ್ದಾರೆ.