ಪಣಜಿ:ಶನಿವಾರದಿಂದ [ನ.20) ದಿಂದ ಪಣಜಿಯಲ್ಲಿ ಆರಂಭಗೊಳ್ಳಲಿರುವ 52 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ 300 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಇದೇ ಸಂದರ್ಭದಲ್ಲಿ ಕನ್ನಡದ ನಟ ಪುನೀತ್ ರಾಜಕುಮಾರ್, ಸಂಚಾರಿ ವಿಜಯ್, ಹಿಂದಿಯ ಹಿರಿಯ ನಟ ದಿಲೀಪ್ ಕುಮಾರ್ ಸೇರಿದಂತೆ ಹಲವರಿಗೆ ಶ್ರದ್ಧಾಂಜಲಿಯನ್ನೂ ಸಲ್ಲಿಸಲಿದೆ. ಚಿತ್ರೋತ್ಸವ ನಿರ್ದೇಶಕ ಚೈತನ್ಯ ಪ್ರಸಾದ್ ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ ವಿವರ ನೀಡಿದರು.
ಈ ವರ್ಷವೂ ಹೈಬ್ರಿಡ್ ವಿಧಾನದಲ್ಲಿ ಚಿತ್ರೋತ್ಸವ ನಡೆಯಲಿದೆ. ಉತ್ಸವದಲ್ಲಿ ನೋಂದಣಿ ಮಾಡಿಸಿ ಸಿನಿಮಾ ಮಂದಿರಗಳಿಗೇ ಬಂದು ನೋಡುವವರಿಗೂ ಅವಕಾಶವಿದೆ. ಇದರೊಂದಿಗೆ ಆನ್ ಲೈನ್ ನಲ್ಲಿ [ವರ್ಚುಯಲ್] ಚಿತ್ರೋತ್ಸವ ನೋಡಲು ಅವಕಾಶವಿದೆ. ಎರಡಕ್ಕೂ ನೋಂದಣಿ ಆರಂಭಿಸಿದ್ದೇವೆ ಎಂದು ಹೇಳಿದರು.
95 ಕ್ಕೂ ಹೆಚ್ಚು ದೇಶಗಳಿಂದ 624 ಸಿನಿಮಾಗಳು ಈ ಬಾರಿ ಆಯ್ಕೆಗಾಗಿ ಬಂದಿದ್ದವು. ಅಂತಿಮವಾಗಿ 300 ಕ್ಕೂ ಹೆಚ್ಚು ಸಿನಿಮಾಗಳನ್ನು ವಿವಿಧ ವಿಭಾಗಗಳಿಗೆ ಆರಿಸಲಾಗಿದೆ. ಎಂದಿನಂತೆ ಹಳೆಯ ಮಾಸ್ಟರ್ ಸಿನಿಮಾಗಳೊಂದಿಗೆ ಸಮಕಾಲೀನ ಸಿನಿಮಾಗಳೂ ಉತ್ಸವದಲ್ಲಿ ಪ್ರದರ್ಶಿತವಾಗಲಿವೆ. 73 ದೇಶಗಳ 148 ಸಿನಿಮಾಗಳು ಅಂತಾರಾಷ್ಟ್ರೀಯ ಸಿನಿಮಾಗಳ ವಿಭಾಗಗಳಲ್ಲಿ ಪ್ರದರ್ಶಿತವಾಗಲಿವೆ. ಈ ಪೈಕಿ 12 ವಿಶ್ವ ಪ್ರೀಮಿಯರ್, 7 ಅಂತಾರಾಷ್ಟ್ರೀಯ ಪ್ರೀಮಿಯರ್, 26 ಏಷ್ಯಾ ಪ್ರೀಮಿಯರ್ ಹಾಗೂ 68 ಇಂಡಿಯಾ ಪ್ರೀಮಿಯರ್ ಗಳಿವೆ. ಈ ಉತ್ಸವದಲ್ಲಿ ಒಟಿಟಿ ಸಂಸ್ಥೆಗಳಾದ ನೆಟ್ ಫ್ಲಿಕ್ಸ್, ಆಮೆಜಾನ್, ಜೀ5, ವಿಯ್ಕಾಂ ಗಳಿಗೂ ಚಿತ್ರೋತ್ಸವದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಸತ್ಯಜಿತ್ ರೇ ಜೀವಿತಾವಧಿ ಪ್ರಶಸ್ತಿ:
ಪ್ರತಿ ವರ್ಷ ನೀಡಲಾಗುವ ಜೀವಿತಾವಧಿ ಪ್ರಶಸ್ತಿಯ ಹೆಸರು ಈ ವರ್ಷದಿಂದ ಬದಲಾಯಿಸಲಾಗಿದೆ. ಹೆಸರಾಂತ ಸಿನಿಮಾ ನಿರ್ದೇಶಕ ಸತ್ಯಜಿತ್ ರೇ ಅವರ ಜನ್ಮ ಶತಮಾನೋತ್ಸವ ನೆನಪಿನಲ್ಲಿ ಈ ಪ್ರಶಸ್ತಿಯನ್ನು ಇನ್ನು ಮುಂದೆ ಸತ್ಯಜಿತ್ ರೇ ಜೀವಿತಾವಧಿ ಪ್ರಶಸ್ತಿ ಎಂದು ಕರೆಯಲಾಗುತ್ತದೆ. ಈ ವರ್ಷ ಮಾರ್ಟಿನ್ ಸೋರ್ಸಿಸ್ ಮತ್ತು ಈಸ್ತವನ್ ಝಾಬೊ ಅವರಿಗೆ ನೀಡಿ ಗೌರವಿಸಲಾಗುತ್ತಿದೆ.
ದಿ ಕಿಂಗ್ ಆಫ್ ಆಲ್ ದಿ ವರ್ಲ್ಡ್:
ಕಾರ್ಲೋಸ್ ಸೌರಾ ಅವರ ನಿರ್ದೇಶನದ ದಿ ಕಿಂಗ್ ಆಫ್ ಆಲ್ ದಿ ವರ್ಲ್ಡ್ ಚಿತ್ರ ಉದ್ಘಾಟನಾ ಚಿತ್ರವಾದರೆ, ಮಿಡ್ ಫೆಸ್ಟ್ ಸಿನಿಮಾವಾಗಿ ಜೇನ್ ಕಾಂಪಿಯನ್ ಅವರ ದಿ ಪವರ್ ಆಫ್ ಡಾಗ್ ಆಯ್ಕೆಯಾಗಿದೆ. ಇರಾನಿನ ಅಸ್ಘರ್ ಫಹ್ರಾದಿಯ ಕಾನ್ ಪ್ರಶಸ್ತಿ ಪುರಸ್ಕೃತ ಸಿನಿಮಾ ’ಎ ಹೀರೊ’ ಸಮಾರೋಪ ಚಿತ್ರವಾಗಿರಲಿದೆ.
ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡದ 4 ಚಲನಚಿತ್ರಗಳೂ ಸೇರಿದಂತೆ ೨೩ ಚಲನಚಿತ್ರಗಳು ಪ್ರದರ್ಶಿತವಾಗಲಿವೆ. ಕನ್ನಡದಲ್ಲಿ ಡೊಳ್ಳು, ಆ್ಯಕ್ಟ್ 1978, ನೀಲಿ ಹಕ್ಕಿ ಹಾಗೂ ತಲೆದಂಡ ಆಯ್ಕೆಯಾಗಿವೆ. ಭಾರತೀಯ ಪನೋರಮಾ ವಿಭಾಗದ ಉದ್ಘಾಟನ ಚಿತ್ರ ದಿಮಾಸಾ ಭಾಷೆಯ ’ಶೇಮ್ಖೋರ್’ ಪ್ರದರ್ಶನವಾಗಲಿದೆ. ಇದರೊಂದಿಗೆ ಕಥೇತರ ಚಿತ್ರಗಳೂ ಪ್ರದರ್ಶಿತವಾಗಲಿವೆ. ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅದಕ್ಕೆ ಹೊಂದುವಂಥ 18 ಸಿನಿಮಾಗಳನ್ನು ಪ್ರದರ್ಶಿಸಲಾಗುವುದು.
ಮಾಸ್ಟರ್ ಕ್ಲಾಸಸ್:
ಈ ಬಾರಿಯೂ ಹಲವು ಫಿಲ್ಮ್ ಮಾಸ್ಟರ್ಸ್ ಗಳಿಂದ ಮಾಸ್ಟರ್ ಕ್ಲಾಸಸ್ ನಡೆಯಲಿದೆ. ನೆಟ್ ಫ್ಲಿಕ್ಸ್ ಸಹ ಈ ಬಾರಿ ಕೈ ಜೋಡಿಸಿದೆ. ಜತೆ ಜತೆಗೇ ಬ್ರಿಕ್ಸ್ ಸಿನಿಮೋತ್ಸವವೂ ನಡೆಯಲಿದೆ. ಐದು ರಾಷ್ಟ್ರಗಳಿಂದ ವಿಶೇಷವಾಗಿ ಆಯ್ಕೆ ಮಾಡಿದ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಉದ್ಘಾಟನೆಗೆ ಸಲ್ಮಾನ್, ರಣವೀರ್ ಸಿಂಗ್:
ಈ ಬಾರಿಯ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ರಣವೀರ್ ಸಿಂಗ್, ರಿತೇಶ್ ದೇಶ್ ಮುಖ್, ಜಿನೀಲಾ ದೇಶಮುಖ್, ಶ್ರದ್ಧಾ ಕಪೂರ್ ಮತ್ತಿತರರು ಪಾಲ್ಗೊಳ್ಳುವರು. ಕಳೆದ ವರ್ಷ ಜನವರಿಯಲ್ಲಿ ನಡೆದಿದ್ದ 51 ನೇ ಉತ್ಸವವನ್ನು ಕನ್ನಡದ ನಟ ಸುದೀಪ್ ಉದ್ಘಾಟಿಸಿದ್ದರು.