ಮಂಗಳೂರು: ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ವರ್ಸಸ್ ಕೇರಳ ಸ್ಟೇಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಲ್ಯಾಂಡ್‌ಮಾರ್ಕ್ ತೀರ್ಪಿನ ಐವತ್ತನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವರ್ಷಪೂರ್ತಿ ನಡೆಯುವ ಸರಣಿ ಕಾರ್ಯಕ್ರಮ, ವಿಚಾರ ಸಂಕಿರಣದ ಉದ್ಘಾಟನೆ ಸೆ. 2ರಂದು ಬೆಳಗ್ಗೆ 9.30ಕ್ಕೆ ಕಾಸರಗೋಡಿನ ಎಡನೀರು ಮಠದಲ್ಲಿ ನಡೆಯಲಿದೆ ಎಂದು ಲ್ಯಾಂಡ್‌ಮಾರ್ಕ್ ತೀರ್ಪಿನ 50ನೇ ವರ್ಷಾಚರಣೆ ಸಮಿತಿ ಅಧ್ಯಕ್ಷ ಎಂ. ನಾರಾಯಣ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ| ಸರಸ ವೆಂಕಟನಾರಾಯಣ ಭಟ್ಟಿ ಅವರು ವರ್ಷಪೂರ್ತಿ ಕಾರ್ಯ ಕ್ರಮಗಳನ್ನು ಉದ್ಘಾಟಿಸುವರು. ಕೇರಳ ಹೈಕೋರ್ಟ್ ನ್ಯಾಯಾಧೀಶ ನ್ಯಾ| ಎನ್. ನಗರೇಶ್ ದಿಕ್ಸೂಚಿ ಭಾಷಣ ಮಾಡುವರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು ಎಂದರು.
ಉದ್ಘಾಟನೆ ಬಳಿಕ “ಕೇಶವಾನಂದ ಭಾರತೀ ಸ್ವಾಮೀಜಿ ತೀರ್ಪಿನ ಪರಿಣಾಮಗಳು’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಉದಯ ಹೊಳ್ಳ, ಕೇರಳ ಹೈಕೋರ್ಟ್‌ನ ಹಿರಿಯ ವಕೀಲ ಅಸಫ್ ಆಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು ಎಂದರು.
1975ರಲ್ಲಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ವರ್ಸಸ್ ಕೇರಳ ಸ್ಟೇಟ್ ಪ್ರಕರಣದಲ್ಲಿ 13 ಮಂದಿ ನ್ಯಾಯಾಧೀಶರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ಪೀಠ ಆಸ್ತಿ ಹಕ್ಕು, ಸಂವಿಧಾನಕ್ಕೆ ಸಂಬಂಧಿಸಿ ಮಹತ್ವದ ತೀರ್ಪು ನೀಡಿತ್ತು. ಈ ಲ್ಯಾಂಡ್‌ಮಾರ್ಕ್ ತೀರ್ಪಿನ 50ನೇ ವರ್ಷಾಚರಣೆ ನಡೆಸಲು ಸಮಿತಿ ರಚಿಸಿದ್ದು, ಕಾಸರಗೋಡು, ದ.ಕ., ಉಡುಪಿ ಜಿಲ್ಲೆಯ ಎಲ್ಲ ಕಾನೂನು ಕಾಲೇಜುಗಳು ಹಾಗೂ ವಕೀಲರ ಸಂಘಗಳನ್ನು ಸಮಿತಿಯಲ್ಲಿ ಸೇರ್ಪಡೆ ಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ವರ್ಷಪೂರ್ತಿ ಮೂರು ಜಿಲ್ಲೆಗಳು ಮಾತ್ರವಲ್ಲದೆ ರಾಜ್ಯದ ವಿವಿಧ ಕಡೆ, ಹೊಸದಿಲ್ಲಿಯಲ್ಲೂ ವಿಚಾರ ಸಂಕಿರಣ ಸಹಿತ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ ರೈ, ಕಾಸರಗೋಡು ವಕೀಲರ ಸಂಘದ ಪ್ರದೀಪ್ ರಾವ್, ಕಾರ್ಯಕ್ರಮ ಸಮಿತಿಯ ಕೆ.ಆರ್. ಆಚಾರ್ಯ ಇದ್ದರು.