ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡದಂತೆ ಘೋಷಣೆಯಾಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರ ಸಂಕಷ್ಟಗಳಿಗೆ ನೆರವಾಗಲಿ ಎಂದು ಜಿಲ್ಲಾಡಳಿತ ಸ್ಥಾಪಿಸಿರುವ ಸಹಾಯವಾಣಿ ಕೇಂದ್ರಗಳಿಗೆ ನಿತ್ಯ ಕರೆಗಳ ಮಹಾಪೂರ ಹರಿದು ಬರುತ್ತಿದ್ದು ಏ.13ರ ವರೆಗೂ ಸಹಾಯವಾಣಿ ಕೇಂದ್ರಕ್ಕೆ 508 ಕರೆಗಳು ಬಂದಿವೆ. ಕೋವಿಡ್-19 ತಡೆಯುವ ಉದ್ದೇಶದಿಂದ ಜಿಲ್ಲೆಯಲ್ಲಿ ಕಳೆದ ಮಾ.22 ರಿಂದಲೇ ಲಾಕ್‌ಡೌನ್ ಘೋಷಣೆ ಆಗಿದ್ದು, ಕೋವಿಡ್-19 ಸೋಂಕಿನ ಬಗ್ಗೆ ಅನುಮಾನ ಬಂದಲ್ಲಿ ಅಥವಾ ಲಾಕ್‌ಡೌನ್ ಘೋಷಣೆಯಿಂದ ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರಿಗೆ ತಮ್ಮ ದೂರು ಹೇಳಿಕೊಳ್ಳಲು 104 ಸಹಾಯವಾಣಿ ಜೊತೆಗೆ ಜಿಲ್ಲಾಡಳಿತ ಪ್ರತ್ಯೇಕವಾದ ಸಹಾಯ ವಾಣಿ ತೆರೆದಿದ್ದು ನಿತ್ಯ 20 ರಿಂದ 25 ಕರೆಗಳು ದಾಖಲಾಗುತ್ತಿವೆ.
508 ಕರೆಗಳ ಸ್ವೀಕಾರ: ಬಿಹಾರ, ರಾಜಸ್ತಾನಕ್ಕೆ ಸೇರಿದ ಸುಮಾರು 19 ಮಂದಿ ವಲಸೆ ಕಾರ್ಮಿಕರು ಆಶ್ರಯಕ್ಕಾಗಿ ಜಿಲ್ಲಾಡಳಿತಕ್ಕೆ ಕರೆ ಮಾಡಿದ್ದರೆ, ಬಹುತೇಕರು ಕೋವಿಡ್-19 ಬಗ್ಗೆಯೇ ಹೆಚ್ಚು ಕರೆ ಮಾಡಿ ವಿಚಾರಿಸಿದರೆ ಮತ್ತೆ ಕೆಲವರು ಸೋಂಕಿನ ಲಕ್ಷಣ ಬಗ್ಗೆ ನಾವು ಪರೀಕ್ಷೆ ಮಾಡಿಸಿ ಕೊಳ್ಳ ಬೇಕೆಂದು 55 ಮಂದಿ ಕರೆ ಮಾಡಿದ್ದಾರೆ.
ಇನ್ನೂ ತಮಗೆ ಆಹಾರ ಒದಗಿಸಬೇಕೆಂದು 62 ಮಂದಿ, ಔಷಧಿಗಳಿಗಾಗಿ ಸುಮಾರು 3 ಮಂದಿ ಕರೆ ಮಾಡಿದ್ದಾರೆ. ಸುಮಾರು 115 ಮಂದಿ ಕೆಲವರು ಲಾಕ್‌ಡೌನ್ ಸರಿಯಾಗಿ ಪಾಲನೆ ಮಾಡುತ್ತಿಲ್ಲ. ತರಕಾರಿ, ಎಪಿಎಂಸಿ ಮಾರುಕಟ್ಟೆ, ದಿನಸಿ ಅಂಗಡಿಗಳ ಬಳಿ ಜನ ದಟ್ಟಣೆ ಇದೆ. ಕೆಲವರು ಮಾಸ್ಕ್ ಧರಿಸಿಲ್ಲ ಎನ್ನುವುದರ ಬಗ್ಗೆಯು ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾರೆ.
ಗೌರಿಬಿದನೂರು, ಶಿಡ್ಲಘಟ್ಟ ಹೆಚ್ಚು:
ಸಹಾಯವಾಣಿ ಕೇಂದ್ರಗಳಿಗೆ ಬಂದಿರುವ ಕರೆಗಳ ಪೈಕಿ ಜಿಲ್ಲೆಯಲ್ಲಿ ಕೊರಾನ ಅಟ್ಟಹಾಸ ಮೆರೆದಿರುವ ಗೌರಿಬಿದನೂರು ತಾಲೂಕಿ ನಿಂದ ಬರೋಬ್ಬರಿ 78 ಮಂದಿ ಹಾಗೂ ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟದಿಂದ ಒಟ್ಟು 88 ಮಂದಿ ಕರೆ ಮಾಡಿ ಕೋವಿಡ್-19 ಬಗ್ಗೆ ವಿಚಾರಿಸಿಕೊಂಡಿದ್ದಾರೆ. ಜಿಲ್ಲಾಡಳಿತ ಸಹಾ ಯವಾಣಿಗೆ ಒಟ್ಟು ಇದುವರೆಗೂ 227 ಕರೆಗಳು ಬಂದಿದ್ದರೆ ಕೋವಿಡ್-19 ಕ್ಕಾಗಿಯೇ ಸ್ಥಾಪಿಸಲಾಗಿರುವ ಸಹಾಯವಾಣಿ 104ಗೆ ಜಿಲ್ಲೆಯಲ್ಲಿ ಒಟ್ಟು 69 ಕರೆಗಳು ಬಂದಿವೆ. ಇನ್ನೂ ಆನ್‌ಲೈನ್ ಮೂಲಕವು ಸಾರ್ವಜನಿಕರಿಂದ ದೂರುಗಳು ಸ್ವೀಕರಿಸಿದ್ದು ಅದಕ್ಕಾಗಿ ಸ್ಥಾಪಿಸಿರುವ ಸಿಪಿ ಗ್ರಾಮ್ಸ್‌ಗೆ ಒಟ್ಟು 11 ದೂರು ಸ್ವೀಕೃತವಾಗಿವೆ.
ಕೋವಿಡ್-19 ಸೋಂಕು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ತೆರೆದಿರುವ ಸಹಾಯ ವಾಣಿ ಕೇಂದ್ರಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸೋಮವಾರದವರೆಗೂ ಒಟ್ಟು 508 ಕರೆಗಳು ಬಂದಿವೆ. ಆ ಪೈಕಿ ಜಿಲ್ಲಾಡಳಿತ ಸಹಾಯವಾಣಿಗೆ 227, 104 ಸಹಾಯವಾಣಿಗೆ 69, ಆನ್‌ಲೈನ್ ಮೂಲಕ 11 ಕರೆಗಳು ಬಂದಿವೆ.
ಅನುರೂಪ, ನೋಡಲ್ ಅಧಿಕಾರಿ.