Advertisement

Biparjoy cyclone: 50,000 ನಾಗರಿಕರ ಸ್ಥಳಾಂತರ

09:26 PM Jun 14, 2023 | Team Udayavani |

ಅಹಮದಾಬಾದ್‌: ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಬಂದರು ಸಮೀಪ ಬೈಪರ್‌ಜಾಯ್‌ ಚಂಡಮಾರುತ ಅಪ್ಪಳಿಸುವುದರಿಂದ ಸಂಭವನೀಯ ಭೂಕುಸಿತದಿಂದ ರಕ್ಷಿಸಲು ಇದುವರೆಗೂ ಗುಜರಾತ್‌ನ ಕರಾವಳಿ ಪ್ರದೇಶದ ಸುಮಾರು 50,000 ನಾಗರಿಕರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು, ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಗುಜರಾತ್‌ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದ್ದು, ಇದಕ್ಕೆ ಮುನ್ನ ಸೌರಾಷ್ಟ್ರ-ಕಚ್ ಪ್ರದೇಶದ ಕೆಲವು ಭಾಗಗಳಲ್ಲಿ ಬಿರುಗಾಳಿ ಸಮೇತ ಧಾರಾಕಾರ ಮಳೆಯಾಗಿದೆ.

ಮಂಗಳವಾರದಿಂದ ಬುಧವಾರ ಬೆಳಗ್ಗಿನವರೆಗೆ ದೇವಭೂಮಿ ದ್ವಾರಕಾ, ಜಮ್ನಾಗರ್‌, ಜುನಾಗಢ, ಪೋರಬಂದರ್‌ ಮತ್ತು ರಾಜ್‌ಕೋಟ್‌ ಜಿಲ್ಲೆಗಳ 9 ತಾಲೂಕುಗಳಲ್ಲಿ 50 ಮಿಮೀ ಗೂ ಅಧಿಕ ಮಳೆಯಾಗಿದೆ.

ಚಂಡಮಾರುತ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳು ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಂಬಂಧಸಿದಂತೆ ಮೂರು ಸೇನೆಗಳ ಮುಖ್ಯಸ್ಥರೊಂದಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಬುಧವಾರ ಸಭೆ ನಡೆಸಿದರು.

ಸನ್ನದ್ಧ ಸ್ಥಿತಿಯಲ್ಲಿ ತಂಡಗಳು:
ನಂತರ ಮಾತನಾಡಿದ ಅವರು, “ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ 18 ತಂಡಗಳು, ಎಸ್‌ಡಿಆರ್‌ಎಫ್ನ 12 ತಂಡ, ಗುಜರಾತ್‌ ರಸ್ತೆ ಮತ್ತು ಕಟ್ಟಡ ಇಲಾಖೆಯ 115 ತಂಡ, ರಾಜ್ಯ ವಿದ್ಯುತ್‌ ಇಲಾಖೆಯ 397 ತಂಡಗಳನ್ನು ಕರಾವಳಿ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.

Advertisement

ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಭಾರತೀಯ ಸೇನೆ, ನೌಕಾ ಸೇನೆ ಮತ್ತು ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಕೂಡ ಕೈಜೋಡಿಸಿದೆ. ಇದೇ ವೇಳೆ ನೌಕಾ ಸೇನೆಯ ದೋಣಿಗಳು, ಹೆಲಿಕಾಫ್ಟರ್‌ಗಳು ಸನ್ನದ್ಧ ಸ್ಥಿತಿಯಲ್ಲಿವೆ,’ ಎಂದು ಮಾಹಿತಿ ನೀಡಿದ್ದಾರೆ.

3.5 ತೀವ್ರತೆ ಭೂಕಂಪನ:
ಚಂಡಮಾರುತ ಅಪ್ಪಳಿಸುತ್ತಿರುವ ನಡುವೆಯೇ ಕಚ್ ಜಿಲ್ಲೆಯಲ್ಲಿ ಬುಧವಾರ ರಿಕ್ಟರ್‌ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪನ ಉಂಟಾಗಿದೆ. ಇದರಿಂದ ಯಾವುದೇ ಸಾವು-ನೋವು ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ. ಜಿಲ್ಲೆಯ ಭಚೌನ 5 ಕಿ.ಮೀ. ದೂರದಲ್ಲಿ ಭೂಕಂಪನದ ಕೇಂದ್ರ ಸ್ಥಾನವಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next