ಕಾರವಾರ : ದಾಂಡೇಲಿ ,ಜೊಯಿಡಾ , ಯಲ್ಲಾಪುರ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರಕನ್ನಡ ಜಿಲ್ಲೆಯ ಕದ್ರಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ರಾತ್ರಿ ನೀರನ್ನು ನದಿಗೆ ಬಿಡಲಾಗಿದೆ =.ನದಿ ದಂಡೆಯ ಜನರಿಗೆ ಸುರಕ್ಷತೆಗೆ ಕಾಳಜಿ ವಹಿಸಲಾಗುತ್ತಿದೆ. ಸುಫಾ ಅಣೆಕಟ್ಟಿಗೆ 35712.849 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕದ್ರಾ ಅಣೆಕಟ್ಟಿನ ಹಿನ್ನೀರು ಪ್ರದೇಶಕ್ಕೆ 26605 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಕಾರಣ ಯಾವುದೇ ಕ್ಷಣದಲ್ಲಿ ಮತ್ತಷ್ಟು ಗೇಟ್ ತೆಗೆದು ನೀರು ಹೊರಬಿಡುವ ಸಾಧ್ಯತೆ ಇದೆ.
ಸದ್ಯ ಕದ್ರಾ ಜಲಾಶಯದಿಂದ 5000ಕ್ಯೂಸೆಕ್ಸ್ ನೀರನ್ನ ಕಾಳಿ ನದಿಗೆ ಹರಿ ಬಿಡಲಾಗಿದೆ.ಕಾರವಾರ ತಾಲೂಕಿನ ಕದ್ರಾ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕದ್ರಾ ಜಲಾಶಯ 34.50ಗರಿಷ್ಠ ಮಟ್ಟವನ್ನ ಹೊಂದಿದೆ.ಈಗಾಗಲೆ 31.ಮೀಟರ್ ವರೆಗೆ ಅಣೆಕಟ್ಟು ಭರ್ತಿಯಾಗಿದೆ. ಈ ಮಟ್ಟಕ್ಕಿಂತ ಹೆಚ್ಚು ನೀರು ಸಂಗ್ರಹ ಮಾಡದಂತೆ ಜಿಲ್ಲಾಡಳಿತ ಕೆಪಿಸಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಅಣೆಕಟ್ಟಿಗೆ ನೀರಿನ ಒಳಹರಿವು ಹೆಚ್ಚಾಗಿದ್ದರಿಂದ ಜಲಾಶಯದಿಂದ ಕಾಳಿ ನದಿಗೆ ಹರಿಬಿಡಲಾಗಿದೆ. ಇನ್ನೂ ಜಲಾಶಯದಿಂದ ನೀರನ್ನ ಹೊರ ಬಿಟ್ಟ ಕಾರಣ ಕದ್ರಾ ಜಲಾಶಯ ವ್ಯಾಪ್ತಿಯ ನಿವಾಸಿಗಳು ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಮಳೆ ಪ್ರಮಾಣ ಇನ್ನೂ ಹೆಚ್ಚುತ್ತಾ ಹೋದಲ್ಲಿ ಇನ್ನಷ್ಟು ಗೇಟ್ ಗಳ ಮೂಲಕ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡುವ ಸಾಧ್ಯತೆ ಇದೆ.
ದಾಂಡೇಲಿಯಲ್ಲಿ 62 ಮಿಲಿ ಮೀಟರ್, ಹಳಿಯಾಳದಲ್ಲಿ 52.2, ಯಲ್ಲಾಪುರದಲ್ಲಿ 97.6, ಸಿದ್ದಾಪುರ 98.2. ಶಿರಸಿ 82.5 , ಜೊಯಿಡಾದಲ್ಲಿ 80.2 , ಕದ್ರಾದಲ್ಲಿ 115 , ಕೊಡಸಳ್ಳಿಯಲ್ಲಿ 96.8 ಮಿಲಿ ಮೀಟರ್ ಮಳೆಯಾಗಿದೆ. ಕರಾವಳಿಯಲ್ಲಿ ಮಳೆ ತಗ್ಗಿದೆ. ಘಟ್ಟದ ತಾಲೂಕಿನಲ್ಲಿ ಮಳೆ ಬೀಳುತ್ತಲೇ ಇದೆ. ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿವೆ.