Advertisement

5 ಸಾವಿರ ಕೋಟಿ ಮೊತ್ತದ ಬಹುದೊಡ್ಡ ಆಸ್ತಿ ಪತ್ತೆ: ಸಚಿವ ಬೈರತಿ ಬಸವರಾಜ್‌

11:00 PM Aug 10, 2022 | Team Udayavani |

ಬೆಂಗಳೂರು: ರಾಜ್ಯದ ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಜನರಿಗೆ ಹಂಚಿಕೆಯಾಗದೆ ಉಳಿದುಕೊಂಡಿದ್ದ 5,000 ಕೋಟಿ ರೂ. ಮೌಲ್ಯದ ಬಹುದೊಡ್ಡ ಆಸ್ತಿ ಪತ್ತೆ ಹಚ್ಚಲಾಗಿದೆ ಎಂದು ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಜನರಿಗೆ ಹಂಚಿಕೆಯಾಗದೆ ಉಳಿದ 13 ಸಾವಿರ ನಿವೇಶನಗಳು ಮತ್ತು 200 ಎಕರೆಗೂ ಹೆಚ್ಚಿನ ಭೂಮಿಯನ್ನು ಪತ್ತೆ ಹಚ್ಚಲಾಗಿದೆ. ರಾಜ್ಯದ ಇತರ ಅಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಹಲವಾರು ಕಾರಣಗಳಿಂದ ಹಂಚಿಕೆಯಾಗದೆ ಉಳಿದಿರುವ ಆಸ್ತಿಯ ವಿವರ ಪಡೆಯಲಾಗುತ್ತಿದೆ ಎಂದು ಹೇಳಿದರು.

ನಿವೇಶನ ಹರಾಜು ಮಾಡಿ ಬಡಾವಣೆ ನಿರ್ಮಾಣ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಹಂಚಿಕೆಯಾಗದ ನಿವೇಶನ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಿದರೆ ದೊಡ್ಡ ಮೊತ್ತ ಸಂಗ್ರಹವಾಗಲಿದ್ದು, ಆ ಹಣ ಬಳಸಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು.

ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ಆರ್ಥಿಕವಾಗಿ ಬಲಪಡಿಸಲು ಬಡಾವಣೆ ನಿರ್ಮಾಣಕ್ಕೆ ಮುಂದಾಗಿದ್ದು, ಹಾಸನದಲ್ಲಿ 1,200 ಎಕರೆ, ಬಳ್ಳಾರಿಯಲ್ಲಿ 120 ಎಕರೆ, ದಾವಣಗೆರೆಯಲ್ಲಿ 57 ಎಕರೆ ಭೂಮಿ ಖರೀದಿಸಲಾಗಿದೆ ಎಂದು ತಿಳಿಸಿದರು.

ಮಂಜೂರಾತಿ ಇಲ್ಲದ ಮನೆಗಳ ಸಕ್ರಮ
ರಾಜ್ಯದಲ್ಲಿ ನಕ್ಷೆ ಉಲ್ಲಂಘನೆ, ಬಡಾವಣೆ ಮಂಜೂರಾತಿ ಇಲ್ಲದೆ ಮನೆ ನಿರ್ಮಿಸಿಕೊಂಡಿದ್ದು, ಇದನ್ನು ಸಕ್ರಮಗೊಳಿಸುವ ಸಂಬಂಧ ಈ ತಿಂಗಳಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯ ಸಮಿತಿ ಈ ಕುರಿತು ಹಲವು ಸಭೆ ಮಾಡಿದ್ದು, ಯಾವ ಅಳತೆಯ ನಿವೇಶನಕ್ಕೆ ಯಾವ ಪ್ರಮಾಣದ ದಂಡ ವಿಧಿಸಬೇಕು ಎನ್ನುವುದು ತೀರ್ಮಾನವಾಗಬೇಕಾಗಿದೆ. 2,400 ಚದರಡಿ ವರೆಗಿನ ನಿವೇಶನದಲ್ಲಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಬೇಕು ಎನ್ನುವ ವಾದವಿದೆಯಾದರೂ, ಒಂದೇ ಸಲಕ್ಕೆ ಅಕ್ರಮ ಕಟ್ಟಡಗಳೆಲ್ಲವನ್ನೂ ಸಕ್ರಮಗೊಳಿಸುವುದು ಸೂಕ್ತ ಎನ್ನುವ ಭಾವನೆಯೂ ಇದೆ ಎಂದು ಹೇಳಿದರು.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next