Advertisement

ನಗರದ ರಸ್ತೆಗಳಲ್ಲಿ 5000 ಗುಂಡಿಗಳು

11:52 AM Sep 01, 2017 | Team Udayavani |

ಬೆಂಗಳೂರು: ನಗರದ ಶೇ.70ರಷ್ಟು ವಾಹನಗಳು ಸಂಚರಿಸುವ ಸುಮಾರು 2,442 ಕಿ.ಮೀ. ಉದ್ದದ ಆರ್ಟಿರಿಯಲ್‌, ಸಬ್‌ ಆರ್ಟಿರಿಯಲ್‌ ರಸ್ತೆಗಳಲ್ಲಿ ಈವರೆಗೆ ಪತ್ತೆಯಾಗಿರುವ ಗುಂಡಿಗಳ ಸಂಖ್ಯೆ ಏಷ್ಟು ಗೊತ್ತೆ? ಬರೋಬ್ಬರಿ 4990!

Advertisement

ನಗರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ರಸ್ತೆಗಳು ಹದೆಗಿಟ್ಟಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಸೂಚನೆಯಂತೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸಾವಿರಾರು ಗುಂಡಿಗಳು ಪತ್ತೆ ಯಾ ಗಿದ್ದು ವಾಹನ ಸವಾರರಲ್ಲಿ ಭೀತಿ ಹುಟ್ಟಿಸುವಂತಿದೆ. ಅಲ್ಲದೆ ಈ ಗುಂಡಿಗಳು ಸಂಖ್ಯೆ ಅಂತಿಮವಾಗಿರದೆ ದಿನೇ ದಿನೇ ಗುಂಡಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ.

ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳು ಸೇರಿದಂತೆ ನೂರಾರು ಕಿಲೋ ಮೀಟರ್‌ ರಸ್ತೆಗಳಿಗೆ ಇತ್ತೀಚೆಗೆ ಡಾಂಬರೀಕರಣ ಮಾಡಲಾಗಿದೆ. ಇದರೊಂದಿಗೆ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳನ್ನು ಮೇಲ್ದರ್ಜೆಗೇರಿಸಲು ಹೆಚ್ಚಿನ ಅನುದಾನ ನೀಡಲಾಗಿದೆ. ಆದರೆ, ಹೊಸದಾಗಿ ಡಾಂಬರೀಕರಣ ಮಾಡಿರುವ ರಸ್ತೆಗಳಲ್ಲಿಯೇ ಗುಂಡಿಗಳು ಸೃಷ್ಟಿಯಾಗಿವೆ.

ರಸ್ತೆ ಗುಂಡಿಗಳ ಕುರಿತು ಸಾರ್ವಜನಿಕರು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಲ್ಲ ವಲಯಗಳಲ್ಲಿನ ರಸ್ತೆ ಗುಂಡಿಗಳನ್ನು ಗುರುತಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಅಧಿಕಾರಿಗಳು 4990 ಗುಂಡಿಗಳನ್ನು ಗುರುತಿಸಿದ್ದು, ಈಗಾಗಲೇ 3,872 ಗುಂಡಿಗಳನ್ನು ಮುಚ್ಚಿರುವುದಾಗಿ ಹಾಗೂ ಉಳಿದ 1118 ಗುಂಡಿಗಳನ್ನು ಶೀಘ್ರ ಮುಚ್ಚುವುವುದಾಗಿ ತಿಳಿಸಿದ್ದಾರೆ. 

ವಾಸ್ತವದಲ್ಲಿ ನಗರದಲ್ಲಿ 5 ಸಾವಿರಕ್ಕೂ ಹೆಚ್ಚಿನ ಗುಂಡಿಗಳಿದ್ದು, ವಾಹನಗಳ ಸಂಚಾರದಿಂದ ಗುಂಡಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇವೆ. ಮಳೆಗಾಲಕ್ಕೆ ಮೊದಲೇ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಈ ಹಿಂದೆಯೇ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದೀಗ ಮಳೆಯಿಂದ ಗುಂಡಿಗಳ ಮುಚ್ಚಲು ಆಗುತ್ತಿಲ್ಲ ಎಂಬ ನೆಪಗಳನ್ನು ಹೇಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. 

Advertisement

ಕಾಮಗಾರಿ ಗುಣಮಟ್ಟದ ಬಗ್ಗೆ ಮೂಡಿದ ಅನುಮಾನ 
ರಾಜಧಾನಿ ಬೆಂಗಳೂರಿನ ವಾಣಿಜ್ಯ ಪ್ರದೇಶವಾದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿಯೇ ಅಧಿಕ ಗುಂಡಿಗಳು ಕಂಡಿ ಬಂದಿವೆ. ಆದರೆ, ಇತ್ತೀಚೆಗೆ ಕೇಂದ್ರ ಭಾಗದ ಹಲವಾರು ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿಯೂ, ಗುಂಡಿಗಳು ಸೃಷ್ಟಿಯಾಗಿರುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ಸಂಶಯ ಮೂಡಿಸುವಂತೆ ಮಾಡಿದೆ. ಪೂರ್ವ ವಲಯದಲ್ಲಿ 1,710, ಪಶ್ಚಿಮ ವಲಯದಲ್ಲಿ 858 ಹಾಗೂ ದಕ್ಷಿಣ ವಲಯದಲ್ಲಿ 848 ಗುಂಡಿಗಳು ಸೃಷ್ಟಿಯಾಗಿರುವುದಾಗಿ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. 

“ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರು ಓಡಾಡುವ ರಸ್ತೆಗಳನ್ನೇ ಸಮರ್ಪಕವಾಗಿ ನಿರ್ವಹಣೆ ಮಾಡದ ಅಧಿಕಾರಿಗಳು ಹೊರವಲಯದಲ ರಸ್ತೆಗಳನ್ನು ಇನ್ಯಾವ ರೀತಿಯಲ್ಲಿ ನಿರ್ವಹಣೆ ಮಾಡುತ್ತಾರೆ ಎಂಬುದನ್ನು ನೀವೇ ಊಹಿಸಿಕೊಳ್ಳಿ” ಎಂದು ರಮೇಶ್‌ ಎಂಬುವವರು ಬೇಸರ ವ್ಯಕ್ತಪಡಿಸಿದರು. 

ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗಿರುವ ಕುರಿತು ದೂರುಗಳು ಕೇಳಿಬಂದಿವೆ. ಆ ಹಿನ್ನೆಲೆಯಲ್ಲಿ ರಸ್ತೆಗಳ ಪರಿಸ್ಥಿತಿ ಪರಿಶೀಲನೆಗಾಗಿ ನಗರದ ಎಂಟೂ ವಲಯಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, 48 ಗಂಟೆಗಳೊಳಗೆ ರಸ್ತೆಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. 
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ವಲಯ    ಗುರುತಿಸಿದ ಗುಂಡಿಗಳು    ಮುಚ್ಚಿದ ಗುಂಡಿಗಳು
-ಪೂರ್ವ    1710    1480
-ಪಶ್ಚಿಮ    858    698
-ದಕ್ಷಿಣ    848    511
-ಯಲಹಂಕ    95    85
-ಆರ್‌.ಆರ್‌.ನಗರ    388    254
-ಬೊಮ್ಮನಹಳ್ಳಿ    460    395
-ದಾಸರಹಳ್ಳಿ    181    129
-ಮಹದೇವಪುರ    450    320

* ವೆಂ. ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next