Advertisement

Ayodhya: ರಾಮಮಂದಿರದ ಹಿಂದೆ 500 ವರ್ಷಗಳ ಪರಿಶ್ರಮ: ಪೇಜಾವರ ಶ್ರೀ

09:19 PM Dec 15, 2023 | Pranav MS |

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವ ಮೂಲಕ ಶತ-ಶತಮಾನಗಳ ಕನಸು ಈಗ ನನಸಾಗುತ್ತಿದೆ. ಸುಮಾರು 500 ವರ್ಷಗಳ ಪರಿಶ್ರಮ ಇದರ ಹಿಂದಿದೆ ಎಂದು ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥರು ಹೇಳಿದರು.

Advertisement

ಗಿರಿನಗರದಲ್ಲಿ ಶುಕ್ರವಾರ ಪೂರ್ಣಪ್ರಮತಿ ಪರಿಪೂರ್ಣ ಕಲಿಕಾ ತಾಣ (ಶಾಲೆ)ಹಮ್ಮಿಕೊಂಡಿದ್ದ ನೂತನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೋಕ್ಷದಾಯಕ ಕ್ಷೇತ್ರಗಳಲ್ಲಿ ಅಯೋಧ್ಯೆ ಕೂಡ ಒಂದಾಗಿದೆ. ಅಲ್ಲೀಗ ಶ್ರೀರಾಮಂದಿರ ಭವ್ಯವಾಗಿ ಎದ್ದು ನಿಂತಿದೆ. ಸೂರ್ಯಚಂದ್ರರು ಇರುವವರೆಗೂ ರಾಮಮಂದಿರ ರಾಮ ಮಂದಿರವಾಗಿಯೇ ಉಳಿಯಬೇಕು. ನಾವು ನಾವಾಗಿಯೇ ಉಳಿದರೆ ಮಾತ್ರ ರಾಮಮಂದಿರ ರಾಮಮಂದಿರವಾಗಿ ಉಳಿಯುತ್ತದೆ. ಹಿಂದೂಗಳು ಹಿಂದೂಗಳಾಗಿಯೇ ಉಳಿಯಬೇಕು ಎಂದರೆ ನಾವಷ್ಟೇ ಅಲ್ಲ, ನಮ್ಮ ಮುಂದಿನ ಸಂತತಿ ಕೂಡ ಹಿಂದೂಗಳಾಗಿಯೇ ಉಳಿಯಬೇಕು ಎಂದರು.

ದೇಶದಲ್ಲಿ ಬದಲಾವಣೆ ಆರಂಭ
ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ದೇಶದಲ್ಲಿ ಈಗ ಬದಲಾವಣೆಯ ಕಾಲ ಆರಂಭವಾಗಿದೆ. ಈ ದೇಶ ತನ್ನ ಮೂಲ ಸಂಸ್ಕೃತಿಗೆ ಮರಳುತ್ತಿದೆ. ಯಾವುದನ್ನು ಕಳೆದುಕೊಂಡಂತೆ ಭಾಸವಾಗುತ್ತಿತೋ ಅದನ್ನು ಪಡೆದುಕೊಳ್ಳುವ ಹೊತ್ತು ಆರಂಭವಾಗಿದೆ. ಸುಮಾರು 500 ವರ್ಷಗಳ ಹಿಂದೆ ನಾವು ಕಳೆದುಕೊಂಡ ರಾಮ ಮಂದಿರವನ್ನು ಈಗ ಪಡೆಯುತ್ತಿದ್ದೇವೆ ಎಂದರು.

ಸಾಂಸ್ಕೃತಿಕವಾಗಿಯೂ ಭಾರತ ಬಲಾಡ್ಯವಾಗುತ್ತಿದೆ. ಈ ದೇಶದಲ್ಲಿ ಹಿಂದೂಗಳು ತಮ್ಮನ್ನ ತಾವು ಹಿಂದೂಗಳು ಎಂದು ಕರೆಯಲು ಹಿಂಜರಿಯುವಂತಹ ಪ್ರಮೇಯವೆ ಇಲ್ಲ. ಈ ಹಿಂದೆ ಭಾರತದ ತಲಾದಾಯ ಕುರಿತಂತೆ ಅಪಹಾಸ್ಯ ಮಾಡಲಾಗುತ್ತಿತ್ತು. ಆದರೆ ಕೋವಿಡ್‌ ಅಪ್ಪಳಿಸಿದ ಹಿನ್ನೆಲೆಯಲ್ಲಿ ಬಲಾಡ್ಯ ದೇಶಗಳ ಆರ್ಥಿಕ ವ್ಯವಸ್ಥೆ ಹಳಿ ತಪ್ಪಿತು. ಆದರೆ ಭಾರತ ಆರ್ಥಿಕ ಹಿಂಜರಿತದಿಂದ ಪಾರಾಯಿತು ಎಂಬುದನ್ನು ನಾವು ಮರೆಯುವಂತಿಲ್ಲ ಎಂದು ಸೂಲೆಬೆಲೆ ತಿಳಿಸಿದರು.

ಮುಳಬಾಗಿಲಿನ ಶ್ರೀ ಸುಜಯನಿಧಿ ತೀರ್ಥರು ಸಹಿತ ಪ್ರಮುಖರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next