ನವದೆಹಲಿ: ಕೋವಿಡ್ 19 ವೈರಸ್ ಸಂಬಂಧಿತ ಲಾಕ್ ಡೌನ್ ನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಈಗಾಗಲೇ ಜನಧನ ಖಾತೆ ಹೊಂದಿರುವ ಸುಮಾರು 20 ಕೋಟಿ ಮಹಿಳೆಯರ ಪೈಕಿ 8 ಕೋಟಿ ಮಂದಿಗೆ (ಅಂದರೆ ಶೇಕಡಾ 40 ಮಂದಿಗೆ) ತಲಾ 500 ರೂ.ಗಳನ್ನು ಒದಗಿಸಿದೆ. ಇದನ್ನು ಏ.3ರಂದೇ ನೇರವಾಗಿ ಅವರ ಜನಧನ ಖಾತೆಗೆ ಜಮೆ ಮಾಡಲಾಗಿದೆ.
ಬ್ಯಾಂಕು ಶಾಖೆಗಳು ಹಾಗೂ ಎಟಿಎಂಗಳಲ್ಲಿ ಜನಸಂದಣಿ ಹೆಚ್ಚಾಗಿ ಸಾಮಾಜಿಕ ಅಂತರದ ನಿಯಮ ಉಲ್ಲಂಘನೆ ಆಗಬಾರದು ಎಂಬ ಕಾರಣಕ್ಕೆ ನೇರವಾಗಿ ಜನಧನ ಖಾತೆಗೇ ಹಣ ಜಮೆ ಮಾಡಲು ನಿರ್ಧರಿಸಲಾಯಿತು ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ.
ಜತೆಗೆ,
ಖಾತೆ ಸಂಖ್ಯೆಯ ಕೊನೆಯ ಅಂಕಿ 0 ಅಥವಾ 1 ಆಗಿರುವವರು ಏ.3ರಂದೇ ತಮ್ಮ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದಾಗಿದ್ದು, 2 ಅಥವಾ 3 ಅಂಕಿ ಹೊಂದಿರುವವರು ಏ.4, 4 ಅಥವಾ 5 ಅಂಕಿ ಇರುವವರು ಏ.7, 6 ಅಥವಾ 7 ಅಂಕಿಯವರು ಏ.8ರಂದು ಮತ್ತು 8 ಅಥವಾ 9 ಅಂಕಿ ಇರುವವರು ಏ.9ರಂದು ವಿತ್ ಡ್ರಾ ಮಾಡಬಹುದು ಎಂದೂ ಸಚಿವಾಲಯ ಮಾಹಿತಿ ನೀಡಿದೆ.
ಇದರ ಜೊತೆಗೆ, ಉಜ್ವಲ ಯೋಜನೆಯ 8 ಕೋಟಿ ಫಲಾನುಭವಿಗಳ ಖಾತೆಗೆ ಒಟ್ಟಾರೆ 5 ಸಾವಿರ ಕೋಟಿ ರೂ.ಗಳನ್ನು ಜಮೆ ಮಾಡಲಾಗಿದೆ. ಈ ಹಣದಿಂದ ಅವರು 3 ತಿಂಗಳ ಕಾಲಕ್ಕೆ ಎಲ್.ಪಿ.ಜಿ. ಸಿಲಿಂಡರ್ ಖರೀದಿಸಬಹುದು. ಕಿಸಾನ್ ಸಮ್ಮಾನ್ ಯೋಜನೆಗಾಗಿ 16 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ರೈತರು ತಮ್ಮ ಬ್ಯಾಂಕ್ ಖಾತೆಯಲ್ಲಿ ಮುಂಗಡವಾಗಿ 2 ಸಾವಿರ ರೂ. ಪಡೆಯಲಿದ್ದಾರೆ. ಅಲ್ಲದೆ, ಹಿರಿಯ ನಾಗರಿಕರು, ವಿಧವೆಯರು ಹಾಗೂ ದಿವ್ಯಾಂಗರು ತಮ್ಮ ಖಾತೆಗಳಿಗೆ ತಲಾ 3 ಸಾವಿರ ರೂ. ಪಡೆಯಲಿದ್ದಾರೆ ಎಂದೂ ಸಚಿವಾಲಯ ತಿಳಿಸಿದೆ.