Advertisement
ಕಳೆದ ಕೆಲವು ದಿನಗಳಿಂದ ಕ್ಯಾಂಪ್ಕೋ ಧಾರಣೆಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿನ ಧಾರಣೆ ಏರಿಕೆ ಹಂತದಲ್ಲಿದ್ದು ಎರಡೂ ಕಡೆ ದರ ಏರಿಕೆಯ ಸ್ಪರ್ಧೆ ಏರ್ಪಟ್ಟಿದೆ. ಹೊಸ ಅಡಿಕೆಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಧಾರಣೆ ಇನ್ನಷ್ಟು ಏರುವ ನಿರೀಕ್ಷೆಯಲ್ಲಿ ಬೆಳೆಗಾರರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
2022 ಆ. 13ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 460 ರೂ., ಹಳೆ ಅಡಿಕೆಗೆ 560 ರೂ. ಧಾರಣೆ ಇತ್ತು. ಆ. 9ರಂದು ಹೊಸ ಅಡಿಕೆಗೆ 455 ರೂ., ಹಳೆ ಅಡಿಕೆಗೆ 560 ರೂ. ಇತ್ತು. ಆ. 13ಕ್ಕೆ ಬೆಳ್ಳಾರೆ ಹೊರ ಮಾರುಕಟ್ಟೆಯಲ್ಲಿ ಹೊಸದಕ್ಕೆ ಕೆ.ಜಿ.ಗೆ 472-74 ರೂ., ಹಳೆಯದಕ್ಕೆ 575-77 ರೂ. ತನಕ ಇತ್ತು. ಆ. 9ರಂದು ಹೊಸದಕ್ಕೆ 465 ರೂ., ಹಳೆಯದಕ್ಕೆ 572 ರೂ. ಇತ್ತು. ಅಂದರೆ ಹೊರ ಮಾರುಕಟ್ಟೆಯಲ್ಲಿ ಹೊಸದಕ್ಕೆ 7 ರೂ. ತನಕ ಏರಿಕೆ ಕಂಡಿದೆ. ಕೆಲವು ವರ್ಷಗಳಿಗೆ ಹೋಲಿಸಿದರೆ ಇದು ಬೆಳೆಗಾರರ ಪಾಲಿಗೆ ದೊರೆಯುತ್ತಿರುವ ಸಾರ್ವಕಾಲಿಕ ದಾಖಲೆಯ ಧಾರಣೆ ಕೂಡ ಆಗಿದೆ. ಹಬ್ಬದ ಪರಿಣಾಮ
ಆಗಸ್ಟ್‌ನಲ್ಲಿ ಸಾಲು ಸಾಲು ಹಬ್ಬ ಬರಲಿದೆ. ಉತ್ತರ ಭಾರತದಲ್ಲಿ ಚಾಲಿ ಅಡಿಕೆ ಆಧಾರಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಇದು ಅಡಿಕೆಗೆ ಬೇಡಿಕೆ ಹೆಚ್ಚಾಗಿ ಧಾರಣೆ ಏರಿಕೆಯ ಕಾರಣಗಳಲ್ಲಿ ಪ್ರಮುಖ ಎಂದು ಅಂದಾಜಿಸಲಾಗಿದೆ. ಅಡಿಕೆ ಉತ್ಪಾದನೆ ಕುಸಿತ ಮೊದಲಾದವು ಕೂಡ ಧಾರಣೆಯ ಏರಿಕೆಗೆ ನೆರವಾಗುತ್ತಿದೆ ಎನ್ನುತ್ತಿದೆ ಮಾರುಕಟ್ಟೆ ಮೂಲಗಳು.
Related Articles
ಗುಟ್ಕಾ ತಯಾರಿಕೆಗೆ ಕೆಂಪಡಿಕೆಗಿಂತ ಚಾಲಿಯೇ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಕಾರಣ ಚಾಲಿಯ ಕೊರತೆ ಉಂಟಾಗಿದೆ. ಕಳೆದ ಕೆಲವು ವರ್ಷಗಳಿಂದ ಅಡಿಕೆ ಉತ್ಪಾದನೆ ಕುಸಿಯುತ್ತಿದ್ದು ನಿರೀಕ್ಷಿತ ಫಸಲು ದೊರೆಯುತ್ತಿಲ್ಲ. ಕೊಳೆರೋಗ, ಪ್ರಾಕೃತಿಕ ವಿಕೋಪ, ಹಳದಿ ರೋಗ ಇತ್ಯಾದಿ ಕಾರಣಗಳಿಂದ ಅಡಿಕೆ ಬೆಳೆಗಾರು ಇಳುವರಿ ನಷ್ಟ ಅನುಭವಿಸುತ್ತಿದ್ದು ಮಾರುಕಟ್ಟೆಗೆ ನಿರೀಕ್ಷಿತ ಪೂರೈಕೆ ಆಗುತ್ತಿಲ್ಲ. ಈ ಬಾರಿಯೂ ಕೊಳೆರೋಗ ವ್ಯಾಪಕವಾಗಿದ್ದು ಮುಂದಿನ ಬಾರಿ ಫಸಲು ನಷ್ಟವಾಗಲಿದೆ. ಈ ಮಧ್ಯೆ ಉತ್ತರ ಭಾರತದ ರಾಜ್ಯಗಳಲ್ಲಿ ಅಡಿಕೆ ಆಧಾರಿತ ಉತ್ಪನಗಳ ತಯಾರಿ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಷ್ಟು ಚಾಲಿ ಅಡಿಕೆ ಪೂರೈಕೆ ಆಗುತ್ತಿಲ್ಲ. ಅಲ್ಲಿ ದಾಸ್ತಾನು ಕೊರತೆ ಉಂಟಾಗಿದೆ. ಆದ್ದರಿಂದ ವರ್ತಕರು ಚಾಲಿ ಮಾರುಕಟ್ಟೆಯಲ್ಲಿ ಅಡಿಕೆ ಖರೀದಿಗೆ ಮುಗಿಬಿದ್ದಿದ್ದಾರೆ ಎನ್ನುತ್ತಿವೆ ಮಾರುಕಟ್ಟೆ ಮೂಲಗಳು.
Advertisement
ಉತ್ತರ ಭಾರತದ ರಾಜ್ಯಗಳಿಂದ ಮಂಗಳೂರು ಚಾಲಿ ಅಡಿಕೆಗೆ ಸಾಕಷ್ಟು ಬೇಡಿಕೆ ಇದೆ. ಹಬ್ಬದ ಸಂದರ್ಭ ಚಾಲಿ ಅಡಿಕೆ ಆಧಾರಿತ ಉತ್ಪನ್ನಗಳಿಗೆ ಇನ್ನಷ್ಟು ಬೇಡಿಕೆ ಸೃಷ್ಟಿಯಾಗಲಿದೆ. ಪ್ರಸ್ತುತ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಇಲ್ಲದಿರುವುದರಿಂದ ಹೊಸ ಅಡಿಕೆ ಧಾರಣೆ 500 ರೂ. ತನಕ ಏರುವ ಸಾಧ್ಯತೆ ಇದ್ದು ಬೆಳೆಗಾರ ನಿರೀಕ್ಷೆಯಲ್ಲಿದ್ದಾನೆ.– ಮಹೇಶ್ ಎಂ,
ಅಡಿಕೆ ಬೆಳೆಗಾರ, ಪುತ್ತೂರು