Advertisement
ಮನೆ/ಫ್ಲ್ಯಾಟ್ ಬಳಿಯಲ್ಲಿ ಮಳೆ ನೀರು ನಿಲ್ಲಬಾರದು ಅಂತ ಕೆಲವು ಮನೆ, ಫ್ಲ್ಯಾಟ್ ನವರು ಒಳಚರಂಡಿ ಲೈನ್‌ನಲ್ಲಿ ಮಳೆ ನೀರಿನ್ನು ಲಿಂಕ್ ಮಾಡಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲ ಎಂದು ಮಳೆ ನೀರು ತೆರವಿಗಾಗಿ ಒಳಚರಂಡಿಗೆ ಜೋಡಣೆ ಮಾಡಿದ ಬಗ್ಗೆ ತಿಳಿದು ಬಂದಿದೆ.
ಕುದ್ರೋಳಿ, ಪಾಂಡೇಶ್ವರ, ಪಡೀಲ್, ಎಕ್ಕೂರು, ಕೊಟ್ಟಾರಚೌಕಿ ಸೇರಿದಂತೆ ಮಂಗಳೂರಿನ ಒಟ್ಟು 22 ಕಡೆಗಳಲ್ಲಿ ವೆಟ್‌ವೆಲ್ ನಿರ್ಮಿಸಲಾಗಿದೆ. ಅಂದರೆ, ಶೌಚಾಲಯ, ಪಾತ್ರೆ ತೊಳೆಯುವ ನೀರು ಒಳಚರಂಡಿಯ ಮೂಲಕ ಮ್ಯಾನ್ ಹೋಲ್ (ಒಟ್ಟು 24,365) ದಾಟಿ, ವೆಟ್ ವೆಲ್‌ಗೆ ಹರಿಯುತ್ತದೆ. ಅಲ್ಲಿಂದ ಮಂಗಳೂರಿನ ನಾಲ್ಕು ಕಡೆಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಎಸ್‌ಟಿಪಿಗೆ (ಸಂಸ್ಕರಣಾ ಘಟಕ) ಬರುತ್ತದೆ. 16 ಎಂಎಲ್‌ಡಿ ಸಾಮರ್ಥ್ಯದ ಸುರತ್ಕಲ್ ಎಸ್‌ಟಿಪಿ, 20 ಎಂಎಲ್‌ಡಿಯ ಜಪ್ಪಿನ ಮೊಗರು ಎಸ್‌ಟಿಪಿ, 44.4 ಎಂಎಲ್ ಡಿಯ ಕಾವೂರು ಎಸ್‌ಟಿಪಿ ಹಾಗೂ 8.7 ಎಂಎಲ್‌ಡಿ ಸಾಮರ್ಥ್ಯದ ಪಚ್ಚನಾಡಿ ಎಸ್‌ಟಿಪಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತದೆ. ಈ ಲೆಕ್ಕಾಚಾರದಷ್ಟೇ ಒಳ ಚರಂಡಿ ನೀರು ಎಸ್‌ಟಿಪಿಗೆ ಬರ ಬೇಕು. ಇದರ ಸಾಮರ್ಥ್ಯಕ್ಕಿಂತ ಅಧಿಕ ನೀರು ಎಸ್ ಟಿಪಿಗೆ ಬಂದರೆ ಅದು ಸ್ವೀಕರಿಸುವುದಿಲ್ಲ. ಹೀಗಾಗಿ ಬಂದ ನೀರು ವಾಪಾಸ್ ಒಳಚರಂಡಿ ಕೊಳವೆ ಮೂಲಕ ಹೋಗುತ್ತದೆ. ಈ ವೇಳೆ ಒತ್ತಡ ತಾಳದೆ ಮಧ್ಯದ ಮ್ಯಾನ್‌ಹೋಲ್‌ಗಳಿಂದ ನೀರು ಹೊರಗೆ ಬರುವಂತಾಗುತ್ತದೆ!
Related Articles
Advertisement
ಅಂದಹಾಗೆ, ಕಾವೂರು ಎಸ್ ಟಿಪಿಯ ತ್ಯಾಜ್ಯ ನೀರನ್ನು ಎಸ್ ಇಝಡ್‌ನವರು ಸಂಸ್ಕರಿಸಿ ತನ್ನ ಬಳಕೆಗಾಗಿ ಕೊಂಡೊಯ್ಯುತ್ತಿದ್ದಾರೆ. ಜತೆಗೆ ಪಚ್ಚನಾಡಿ ಎಸ್‌ಟಿಪಿ ತ್ಯಾಜ್ಯ ನೀರನ್ನು ಪಿಲಿಕುಳಕ್ಕೆ ಕಳುಹಿಸಲಾಗುತ್ತದೆ. ಜಪ್ಪಿನಮೊಗರು ಹಾಗೂ ಸುರತ್ಕಲ್ ಎಸ್‌ಟಿಪಿ ತ್ಯಾಜ್ಯ ನೀರು ಅಲ್ಲಿಯೇ ಬಳಕೆಯಾಗುತ್ತಿದ್ದು, ಮುಂದೆ ಅಲ್ಲಿಂದ ಎಸ್ ಇಝಡ್‌ನವರೇ ಪಡೆದುಕೊಳ್ಳಲಿದ್ದಾರೆ.
24,365 ಮ್ಯಾನ್‌ಹೋಲ್‌ಗಳು!ಮಂಗಳೂರು ಪಾಲಿಕೆಯ ಒಳಚರಂಡಿ ಮೂಲ ಯೋಜನೆಯು 1957ರ ನಿರ್ದೇಶನದಂತೆ ಕಾಮಗಾರಿಯನ್ನು 1970-71ರಲ್ಲಿ
ಪೂರ್ಣಗೊಳಿಸಲಾಗಿತ್ತು. ಅಂದಿನ ಜನಸಂಖ್ಯೆ 1,80,000ಕ್ಕೆ ತಯಾರಿಸಿ ಅಂದಾಜಿತ 2 ಲಕ್ಷ ಜನಸಂಖ್ಯೆಗೆ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಆ ಕಾಲದಲ್ಲಿ 6,000 ಮ್ಯಾನ್‌ಹೋಲ್ ಮಾಡಲಾಗಿತ್ತು. ಅನಂತರ 2006ರಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡ ಎಡಿಬಿ ಯೋಜನೆಯಡಿ ಒಟ್ಟು 14,365 ಮ್ಯಾನ್‌ಹೋಲ್ ಮಾಡಲಾಗಿದೆ. ಆ ಬಳಿಕ ಅಗತ್ಯವಿರುವ ಕಾರಣದಿಂದ ಹೆಚ್ಚುವರಿಯಾಗಿ ಮಂಗಳೂರು ಪಾಲಿಕೆಯು 4,000ದಷ್ಟು ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಿದೆ. ಈಗ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 24,365 ಮ್ಯಾನ್‌ಹೋಲ್‌ಗಳು ಕಾರ್ಯಾಚರಿಸುತ್ತಿವೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ. ವಾರದ ಗಡುವು
ಸಾರ್ವಜನಿಕರು ತಮ್ಮ ನಿವಾಸದ ತ್ಯಾಜ್ಯ ನೀರನ್ನು ಮಾತ್ರ ಒಳಚರಂಡಿಗೆ ಸಂಪರ್ಕಿಸಬೇಕು. ಮಳೆಯ ನೀರನ್ನು ಒಳಚರಂಡಿ ಜೋಡಣೆಯಲ್ಲಿದ್ದರೆ ಅದನ್ನು ಒಂದು ವಾರದೊಳಗೆ ತೆರವು ಮಾಡಿ, ಚರಂಡಿಯಲ್ಲಿ ಹರಿಯುವಂತೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ತಪ್ಪಿದರೆ ಯಾವನೇ ವ್ಯಕ್ತಿ, ಸಂಸ್ಥೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
- ಮಹಮ್ಮದ್ ನಝೀರ್ ಆಯುಕ್ತರು, ಮನಪಾ ಒಳಚರಂಡಿಗೆ ಮಳೆ ನೀರು; ತೆರವು ಅಗತ್ಯ
ಮನೆಯ ಬಳಿಯಲ್ಲಿ ನೀರು ನಿಲ್ಲಬಾರದು ಅಂತ ಕೆಲವು ಮನೆ, ಫ್ಲ್ಯಾಟ್ ನವರು ತಮಗೆ ಸಂಪರ್ಕದ ಒಳಚರಂಡಿ ಲೈನ್‌ನಲ್ಲಿ ಮಳೆ ನೀರಿನ್ನು ಲಿಂಕ್ ಮಾಡಿದ್ದಾರೆ. ಮಂಗಳೂರಿನಲ್ಲಿ ಇಂತಹ ಸುಮಾರು 500ಕ್ಕಿಂತಲೂ ಅಧಿಕ ಪ್ರಕರಣಗಳಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಸಂಬಂಧಪಟ್ಟವರು ಜೋಡಣೆಯನ್ನು ತಾವಾಗಿಯೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪಾಲಿಕೆ ಕ್ರಮ ಕೈಗೊಳ್ಳಲಿದೆ.
- ಎಂ. ಶಶಿಧರ ಹೆಗ್ಡೆ, ಮುಖ್ಯಸಚೇತಕರು, ಪಾಲಿಕೆ ದಿನೇಶ್ ಇರಾ