Advertisement

ಬರಲಿದೆ 20 ನಿಮಿಷ ಚಾರ್ಜ್ ಮಾಡಿ ಬರೋಬ್ಬರಿ 500 ಕಿಲೋಮೀಟರ್ ಓಡುವ ಕಾರು

08:14 AM Sep 03, 2020 | Hari Prasad |

ಹೊಸದಿಲ್ಲಿ: ಇದೀಗ ಅಟೊಮೊಬೈಲ್ ಲೋಕದಲ್ಲಿ ಎಲೆಕ್ಟ್ರಿಕ್ ಕಾರುಗಳದ್ದೇ ಕಾರುಬಾರು.ಹೊಸ ಹೊಸ ಫೀಚರ್ ಗಳೊಂದಿಗೆ ಹಲವಾರು ಕಂಪೆನಿಗಳ ಎಲಕ್ಟ್ರಿಕಲ್ ಕಾರುಗಳು ಮಾರುಕಟ್ಟೆಯನ್ನು ಪ್ರವೆಶಿಸಲು ಸಜ್ಜಾಗಿ ನಿಂತಿವೆ. ಸದ್ಯಕ್ಕೆ ಕೋವಿಡ್ 19 ಕಾಟದಿಂದ ಈ ವೇಗಕ್ಕೆ ಸ್ವಲ್ಪ ಬ್ರೇಕ್ ಬಿದ್ದಿದೆಯಷ್ಟೇ!

Advertisement

ಅಮೆರಿಕಾ ಮೂಲದ ಎಲೆಕ್ಟ್ರಿಕ್ ಕಾರು ಉತ್ಪಾದಕಾ ಕಂಪೆನಿ ಲ್ಯೂಸಿಡ್ ಮೊಟಾರ್ಸ್ ನವರು ಹೊರತರಲುದ್ದೇಶಿಸಿರುವ ಲ್ಯೂಸಿಡ್ ಆ್ಯರ್ ಕಾರು ಇದೀಗ ವಿಶ್ವಾದ್ಯಂತ ಇ.ವಿ. ಕಾರುಗಳ ವಿಭಾಗದಲ್ಲಿ ಕ್ರಾಂತಿಯೆಬ್ಬಿಸಲು ಸಜ್ಜಾಗಿದೆ.

ಲ್ಯೂಸಿಡ್ ಆ್ಯರ್ ಕಿರು ಗಾತ್ರದ ಕಾರುಗಳಲ್ಲಿಯೇ ಅತೀ ವೇಗದ ಚಾರ್ಜಿಂಗ್ ಸೌಲಭ್ಯವನ್ನು ನೀಡುವ ಮೂಲಕ ಇ.ಯು. ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ.

ಈ ಕಾರಿನಲ್ಲಿ 300 ಕಿಲೋ ವ್ಯಾಟ್ ಸಾಮರ್ಥ್ಯದ ಪವರ್ ಸಪ್ಲೈ ವ್ಯವಸ್ಥೆ ಇರಲಿದ್ದು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ಕಾರುಗಳಲ್ಲಿನ ಗರಿಷ್ಠ ಚಾರ್ಜಿಂಗ್ ಸಾಮರ್ಥ್ಯ 270 ಕಿಲೋವ್ಯಾಟ್ ಗಳಾಗಿರುವುದು ಈ ಕಾರನ್ನು ವಿಶಿಷ್ಟವಾಗಿಸಿದೆ.

ಕೇವಲ 20 ನಿಮಿಷಗಳ ಚಾರ್ಜಿಂಗ್ ಸಮಯದಲ್ಲಿ ಬರೋಬ್ಬರಿ 500 ಕಿಲೋಮೀಟರ್ ಗಳಷ್ಟು ದೂರವನ್ನು ಕ್ರಮಿಸುವ ಸಾಮರ್ಥ್ಯ ಈ ಕಾರಿಗೆ ಇದೆ ಎನ್ನಲಾಗುತ್ತಿದ್ದು 2021ರಲ್ಲಿ ಈ ಹೊಸ ಎಲೆಕ್ಟ್ರಿಕ್ ಕಾರು ವಿಶ್ವಾದ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳ್ಳಲಿದೆ.

Advertisement

20 ನಿಮಿಷಗಳ ಕಾಲದ ಚಾರ್ಜಿಂಗ್ ನಲ್ಲಿ 500 ಕಿಲೋಮೀಟರ್ ಕ್ರಮಿಸುವ ವ್ಯವಸ್ಥೆ ಇದರಲ್ಲಿದ್ದರೂ ಈ ಕಾರಿನ ಡ್ರೈವಿಂಗ್ ರೇಂಜ್ ಸರಿಸುಮಾರು 830 ಕಿಲೋಮೀಟರ್ ಗಳಾಗಿರುವುದರಿಂದ ಪ್ರಯಾಣ ಮಧ್ಯದಲ್ಲೇ ಕಾರಿನ ಬ್ಯಾಟರಿ ಚಾರ್ಜ್ ಮುಗಿದುಹೋಗಬಹುದೆಂಬ ಭಯ ಇರುವುದಿಲ್ಲ!

ಇಷ್ಟು ಮಾತ್ರವಲ್ಲದೇ ಈ ಎಲೆಕ್ಟ್ರಿಕ್ ಕಾರಿನಲ್ಲಿ ಬ್ಯಾಟರಿ ಬ್ಯಾಕಪ್ ಸೌಲಭ್ಯವನ್ನೂ ಸಹ ಇದರ ತಯಾರಕರು ನೀಡಿದ್ದಾರೆ. ಈ ಮೂಲಕ ನಿಮ್ಮ ಪ್ರಯಾಣ ಮಧ್ಯದಲ್ಲೇ ಒಂದು ವೇಳೆ ಚಾರ್ಜ್ ಖಾಲಿಯಾಗಿ ಕಾರು ನಡುರಸ್ತೆಯಲ್ಲಿ ನಿಂತುಬಿಡಬಹುದೆಂಬ ಭಯ ಈ ಕಾರಿನ ಗ್ರಾಹಕರಿಗೆ ಇರಬೇಕಾಗಿಲ್ಲ.

ಒಂದು ವೇಳೆ ಈ ಕಾರಿನಲ್ಲಿ ಬ್ಯಾಟರಿ ಚಾರ್ಜ್ ಮುಗಿದು ಹೋದರೂ ಕ್ಷಣ ಮಾತ್ರದಲ್ಲೇ ಇದರಲ್ಲಿ ಅಳವಡಿಸಿರುವ ಬ್ಯಾಟರಿ ಬ್ಯಾಕಪ್ ವ್ಯವಸ್ಥೆ ನಿಮ್ಮ ಕಾರು ಮಾರ್ಗ ಮಧ್ಯದಲ್ಲಿ ಕೈಕೊಡುವುದನ್ನು ತಪ್ಪಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next