Advertisement

ಮಾಲಿನ್ಯ ತಡೆಗೆ 500 ಕೋಟಿ ರೂ.

10:06 PM Mar 05, 2020 | Team Udayavani |

ಉಷ್ಣ ವಿದ್ಯುತ್‌ ಸ್ಥಾವರಗಳಿಂದ ವಾಯು ಮಾಲಿನ್ಯ ಪ್ರಮಾಣ ತಡೆಗಟ್ಟುವ ಕಾರ್ಯಕ್ಕೆ ಒತ್ತು ನೀಡಿರುವ ಸರ್ಕಾರ, ಇದಕ್ಕಾಗಿ ಆಯವ್ಯಯದಲ್ಲಿ 500 ಕೋಟಿ ರೂ. ಅನುದಾನ ಕಾಯ್ದಿರಿಸಿದೆ. ರಾಯಚೂರು, ಬಳ್ಳಾರಿ, ಯರಮರಸ್‌ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ “ಫ‌ೂ ಗ್ಯಾಸ್‌ ಡಿ ಸಲ್ಪರೈಸೇಷನ್‌’ ವ್ಯವಸ್ಥೆಯನ್ನು ಒಟ್ಟು 2,510 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ.

Advertisement

ಇದಕ್ಕಾಗಿ ಆಯ ವ್ಯಯದಲ್ಲಿ 500 ಕೋಟಿ ರೂ. ಕಾಯ್ದಿರಿಸಿದೆ. ಈ ವ್ಯವಸ್ಥೆ ಅಳವಡಿಕೆ ಮೂಲಕ ವಾಯು ಮಾಲಿನ್ಯವನ್ನು ಗಣನೀಯವಾಗಿ ಕಡಿತಗೊಳಿಸಲು ಸಹಾಯವಾಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ. ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರ 10 ಎಚ್‌ಪಿವರೆಗಿನ ಪಂಪ್‌ ಸೆಟ್‌ಗಳ ವಿದ್ಯುತ್‌ ಶುಲ್ಕ ಮರುಪಾವತಿಗೆ ಪ್ರತ್ಯೇಕ ಯೋಜನೆ ಜಾರಿಗೊಳಿಸುವುದಾಗಿ ಆಯವ್ಯಯದಲ್ಲಿ ತಿಳಿಸಲಾಗಿದೆ.

ಎಐ ಟ್ರಾನ್ಸ್‌ಲೇಷನ್‌ ಪಾರ್ಕ್‌ – ಐಐಎಸ್ಸಿ ಸಹಯೋಗ: ನಗರದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ “ಕೃತಕ ಬುದ್ಧಿಮತ್ತೆ ಸಂಶೋಧನಾ ಪರಿವರ್ತನಾ ಕೇಂದ್ರ’ (ಆರ್ಟಿಫೀಷಿಯಲ್‌ ಇಂಟಲಿಜೆನ್ಸ್‌ ರಿಸರ್ಚ್‌ ಟ್ರಾನ್ಸ್‌ಲೇಷನ್‌ ಪಾರ್ಕ್‌) ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿದ್ದು, ಇದಕ್ಕಾಗಿ 60 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಮುಖ್ಯವಾಗಿ ಈ ಕೇಂದ್ರ ಎಐ-ಸಂಶೋಧನೆ, ಎಐ-ನಾವೀನ್ಯತೆ, ಎಐ-ವಾಣಿಜ್ಯೀ ಕರಣ ಮತ್ತು ಪ್ರಾಯೋಗಿಕ ಅನುಷ್ಠಾನಗಳಿಗೆ ಆದ್ಯತೆ ಹಾಗೂ 5-ಜಿ ತಂತ್ರಜ್ಞಾನ ಕುರಿತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿದೆ.

ತಂತ್ರಜ್ಞಾನಗಳಿಗೆ ಸಂಬಂಧಿಸಿದ ಮೂಲವಿಜ್ಞಾನವನ್ನು ಅಪ್ಲಿಕೇಷನ್‌ ಆಗಿ ಪರಿವರ್ತಿಸುವ ಕೆಲಸ ಇದಾಗಿದೆ. ಜತೆಗೆ ರಾಜ್ಯದ ಬೆಳವಣಿಗೆಗೆ ವಿವಿಧ ವಲಯಗಳಲ್ಲಿರುವ ತಾಂತ್ರಿಕ ಸವಾಲು ಎದುರಿಸಲು ಎಸ್‌ಟಿಪಿಐ ಸಹಭಾಗಿತ್ವದಲ್ಲಿ ಉತ್ಕೃಷ್ಟತಾ ಕೇಂದ್ರ ಹಾಗೂ ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆ ಸಹಭಾಗಿತ್ವದಲ್ಲಿ “ಇಂಟರ್‌ನೆಟ್‌ ಆಫ್ ಎಥಿಕಲ್‌ ಥಿಂಗ್ಸ್‌’ ವಿಷಯದಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ತಲಾ 30 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಅಲ್ಲದೇ, ಕೂಡಲೇ ಆರಂಭಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

20 ಕೋಟಿ ಮೀಸಲು: ಯುದ್ಧ ವಿಮಾನಗಳ ಬಿಡಿಭಾಗಗಳನ್ನು ಉತ್ಪಾದಿಸಲು ಇರುವ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿನ ಸೇವಾ ಕೇಂದ್ರಗಳ ಸಾಮರ್ಥ್ಯ ಉನ್ನತೀಕರಿಸಲು 20 ಕೋಟಿ ರೂ. ಮೀಸಲಿಡಲಾಗಿದೆ. ಇಸ್ರೋ, ಎಚ್‌ಎಎಲ್‌ ಮತ್ತಿತರ ಪ್ರತಿಷ್ಠಿತ ಸಂಸ್ಥೆಗಳಿಗೆ ಉಪಗ್ರಹ, ಲಘು ಯುದ್ಧ ವಿಮಾನ, ಸುಧಾರಿತ ಮಧ್ಯಮ ಯುದ್ಧ ವಿಮಾನಗಳಿಗೆ ಬಿಡಿ ಭಾಗ ಉತ್ಪಾದಿಸಲು ಈ ಕೇಂದ್ರದ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ.

Advertisement

ಆಯವ್ಯಯದಲ್ಲಿ ಅತ್ಯಂತ ಕಳವಳ ಸೃಷ್ಟಿ ಮಾಡುವ, ಚಿಂತಾಜನಕ ಅಂಶಗಳು ಎದ್ದು ಕಾಣಿಸುತ್ತಿವೆ. ಬಜೆಟ್‌ನಲ್ಲಿ ಎಲ್ಲಿಯೂ ಸ್ಪಷ್ಟತೆಯಿಲ್ಲ. ಕೇಂದ್ರದಿಂದ ಅನುದಾನ ಬರದಿರುವುದು ರಾಜ್ಯದ ಬಜೆಟ್‌ ಮೇಲೆ ಪರಿಣಾಮ ಬೀರಿದೆ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಇದು ನಿರಾಶಾದಾಯಕ ಬಜೆಟ್‌. ನೆರೆ ಸಂತ್ರಸ್ತರ ಪುನರ್ವಸತಿಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಅನುದಾನ ನೀಡುವ ನಿರೀಕ್ಷೆ ಹುಸಿಯಾಗಿದೆ. ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆ ಮಾಡಿಲ್ಲ.
-ಈಶ್ವರ್‌ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವನ್ನೇ ಮಾಡಿಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ತುಂಬಾ ಅನ್ಯಾಯವಾಗಿದೆ. ಈ ಬಜೆಟ್‌ನಲ್ಲಿ ಯಾವುದೇ ಧಮ್‌ ಇಲ್ಲ. ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ನೀಡಿದಂತಾಗಿದೆ.
-ಎಸ್‌.ಆರ್‌.ಪಾಟೀಲ್‌, ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ

ಬಜೆಟ್‌ ಗಾತ್ರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಎಸ್ಸಿಪಿ, ಟಿಎಸ್‌ಪಿ ಯೋಜನೆ ಅನುದಾನವನ್ನು ಕಡಿತ ಮಾಡಲಾಗಿದೆ. ಪೆಟ್ರೋಲ್‌- ಡಿಸೇಲ್‌ ಹಾಗೂ ಅಬಕಾರಿ ತೆರಿಗೆ ಹೆಚ್ಚಳ ಮಾಡಿ ಜನರಿಗೆ ಹೊರೆ ಹಾಕಿದ್ದಾರೆ.
-ಪ್ರಿಯಾಂಕ್‌ ಖರ್ಗೆ, ಮಾಜಿ ಸಚಿವ

ಬಜೆಟ್‌ ರಾಜ್ಯದ ಜನರು ಹಾಗೂ ರೈತರ ನಿರೀಕ್ಷೆ ಹುಸಿಗೊಳಿಸಿದೆ. ನೀರಾವರಿ ಯೋಜನೆಗಳಿಗೆ ನಿರೀಕ್ಷಿಸಿದಷ್ಟು ಅನುದಾನ ನೀಡಿಲ್ಲ. ಎಸ್ಸಿಪಿ ಟಿಎಸ್‌ಪಿ ಯೋಜನೆಗೂ ಹಣಕಾಸು ಕಡಿಮೆ ನೀಡಿದ್ದಾರೆ. ಅಭಿವೃದ್ಧಿ ಪರವಾದ ಹಾಗೂ ಸಾಮಾಜಿಕ ನ್ಯಾಯಕ್ಕೂ ಹೊಡೆತ ಬಿದ್ದಿದೆ.
-ಆರ್‌.ವಿ.ದೇಶಪಾಂಡೆ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next