Advertisement

ಒನ್‌ ಡೇ ಕ್ರಿಕೆಟ್‌ ಗೆ 50ರ ಸಂಭ್ರಮ: ಉದಯವೇ ವಿಸ್ಮಯ, ಅಚ್ಚರಿ, ಅನಿರೀಕ್ಷಿತ, ರೋಮಾಂಚನ!

09:19 AM Jan 05, 2021 | Team Udayavani |

ಕ್ರಿಕೆಟಿನ ವ್ಯಾಕರಣ, ಸ್ವರೂಪವನ್ನು ಬದಲಿಸಿದ ಏಕದಿನ ಕ್ರಿಕೆಟ್‌ ಪರಂಪರೆಗೆ ಈಗ ಸುವರ್ಣ ಸಂಭ್ರಮ. ಅರ್ಧ ಶತಮಾನದ ಕಾಲಘಟ್ಟದ ಯಶಸ್ವಿ ಪಯಣದಲ್ಲಿ ಬರೀ ರೋಮಾಂಚನ! ಟಿ20 ಇರಲಿ, ಟಿ10 ಬಂದರೂ ಏಕದಿನ ಜೈತ್ರಯಾತ್ರೆಗೆ ಯಾವುದೇ ಅಡ್ಡಿ ಬಾರದೆಂಬುದು ಕ್ರಿಕೆಟ್‌ ಪ್ರಿಯರ ಲೆಕ್ಕಾಚಾರ. ಈ ಹಿನ್ನೆಲೆಯಲ್ಲಿ ಏಕದಿನ ಕ್ರಿಕೆಟ್‌ ಜಗತ್ತಿನ ಕೌತುಕ ತೆರೆದಿಡಲೆಂದೇ ಈ ವಿಶೇಷ ಪುಟ.

Advertisement

ಸರಿಯಾಗಿ 50 ವರ್ಷಗಳ ಹಿಂದಿನ ದಿನ. 5 ಜನವರಿ, 1971… ಅಂತಾರಾಷ್ಟ್ರೀಯ ಕ್ರಿಕೆಟ್‌ ಮಗ್ಗುಲು ಬದಲಾಯಿಸಿದ ಸುದಿನ. ಕ್ರಿಕೆಟಿನ ನೂತನ ಶಕೆಯೊಂದು ಕುಡಿಯೊಡೆದ ಕಾಲ. “ಕ್ರಿಕೆಟ್‌ ಸಂಕ್ರಮಣ’ದ ಸಮಯ. ಅಂದು ಕ್ರಿಕೆಟ್‌ ಹೊಸ ಅವತಾರ ತಾಳಿತ್ತು. ಇಂದು ಅತ್ಯಂತ ಜನಪ್ರಿಯಗೊಂಡಿ ರುವ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಉದಯವಾಗಿತ್ತು!

ಆಸ್ಟ್ರೇಲಿಯ-ಇಂಗ್ಲೆಂಡ್‌ ತಂಡಗಳು ಮೆಲ್ಬರ್ನ್ ಅಂಗಳದಲ್ಲಿ ವಿಶ್ವದ ಪ್ರಪ್ರಥಮ ಏಕದಿನ ಪಂದ್ಯವನ್ನಾಡಿ ಜಾಗತಿಕ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದವು. ಮುಂದೆ ಇದು ಕ್ರಾಂತಿಕಾರಿ ಪರಿವರ್ತನೆಗೆ ನಾಂದಿಯಾಯಿತೆಂಬುದು ಈಗ ಇತಿಹಾಸ.

ಇದಕ್ಕೂ ಸರಿಸುಮಾರು ಒಂದು ಶತಮಾನದಷ್ಟು ಹಿಂದೆ ಇವೇ ತಂಡಗಳು ಇದೇ ಮೆಲ್ಬರ್ನ್ ಅಂಗಳದಲ್ಲಿ ವಿಶ್ವದ ಮೊದಲ ಟೆಸ್ಟ್‌ ಪಂದ್ಯವಾಡಿದ್ದವು (1877). ಅಂದಿನಿಂದ ಕ್ರಿಕೆಟ್‌ ಎನ್ನುವುದು ಕೇವಲ ಟೆಸ್ಟ್‌ ಪಂದ್ಯಕ್ಕಷ್ಟೇ ಸೀಮಿತವಾಗಿತ್ತು. ನಿಂತ ನೀರಾಗಿತ್ತು. ಇಲ್ಲಿ ಯಾವುದೇ “ಅಪ್‌ಡೇಟ್‌’ ಆಗಿರಲಿಲ್ಲ.  ಆದರೆ ಈ ಏಕದಿನ ಕ್ರಿಕೆಟಿನ ಉಗಮಕ್ಕೆ ಕಾರಣವಾದದ್ದು ಕೂಡ ಟೆಸ್ಟ್‌ ಕ್ರಿಕೆಟ್‌ ಎಂಬುದನ್ನು ಮರೆಯುವಂತಿಲ್ಲ. ಇದೊಂದು ಆಕಸ್ಮಿಕ. ಇದೊಂದು ವಿಸ್ಮಯ!

ಮಳೆಯ ಲೀಲೆ!

Advertisement

1970-71ರ ಆ್ಯಶಸ್‌ ಸರಣಿಗಾಗಿ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯಕ್ಕೆ ಆಗಮಿಸಿತ್ತು. ಮೆಲ್ಬರ್ನ್ನ ಮೂರನೇ ಟೆಸ್ಟ್‌ ಪಂದ್ಯಕ್ಕೆ ಮಳೆ ಕಾಟ. ಮೊದ ಲೆರಡು ದಿನ ವಾಶೌಟ್‌. ಸಂಘಟಕರು ಒಂದು ಮೀಸಲು ದಿನವನ್ನಿಡಲು ನಿರ್ಧರಿಸಿದರು. ಆದರೆ ಮೂರನೇ ದಿನದಾಟಕ್ಕೂ ಮಳೆ ಬಿಡಲಿಲ್ಲ. ಪಂದ್ಯ ರದ್ದುಗೊಂಡರೆ ಮೆಲ್ಬರ್ನ್ ಕ್ರಿಕೆಟ್‌ ಆಡಳಿತಕ್ಕೆ ಭಾರೀ ಆರ್ಥಿಕ ನಷ್ಟ ಸಂಭವಿಸುತ್ತಿತ್ತು. ಹೀಗಾಗಿ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ ಹೆಚ್ಚುವರಿ ಟೆಸ್ಟ್‌ ಪ್ರಸ್ತಾವವನ್ನೂ ಮುಂದಿಟ್ಟಿತು.

ಆದರೆ ಪಂದ್ಯದ ಕೊನೆಯ ದಿನ ವಾತಾವರಣ ತಿಳಿಯಾಯಿತು. ಸಂಘಟಕರು ಇದರ ಲಾಭವೆತ್ತಲು ಮುಂದಾದರು. ಈ ಅವಧಿಯಲ್ಲಿ ಯಾವುದೇ ರೀತಿಯಲ್ಲಾದರೂ ಕ್ರಿಕೆಟ್‌ ಪಂದ್ಯವಾಡಿಸಿ ನಿರಾಸೆಗೊಂಡ ವೀಕ್ಷಕರನ್ನು ರಂಜಿಸಲು ಯೋಜನೆ ರೂಪಿಸಲಾಯಿತು. ಆಗ ಜನಿಸಿದ್ದೇ ಒನ್‌ಡೇ ಕ್ರಿಕೆಟ್‌!

ಬ್ರಾಡ್‌ಮನ್‌ ವಿಶೇಷ ಅತಿಥಿ

ಕ್ರಿಕೆಟ್‌ ದಂತಕತೆ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌ ಅವರನ್ನು ಈ ಪಂದ್ಯದ ವೇಳೆ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಪಂದ್ಯದ ಆರಂಭಕ್ಕೂ ಮುನ್ನ ಅವರು ನೂತನ ಮಾದರಿಯ ಕ್ರಿಕೆಟ್‌ ಹಾಗೂ ಇತ್ತಂಡಗಳನ್ನು ಉದ್ದೇಶಿಸಿ ಮಾತಾಡಿದರು.

ಕೊನೆಯಲ್ಲಿ ಸುಮ್ಮನೆ ಹೀಗೊಂದು ಪ್ರಶ್ನೆ ಅಥವಾ ಕುತೂಹಲ. ಅಕಸ್ಮಾತ್‌ ಅಂದಿನ ಮೆಲ್ಬರ್ನ್ ಟೆಸ್ಟ್‌ ಪಂದ್ಯ ಮಳೆ ಕಾಟವಿಲ್ಲದೆ ಸಾಂಗವಾಗಿ ನಡೆದದ್ದಿದ್ದರೆ….?!

40 ಓವರ್‌ಗಳ ಪಂದ್ಯ

ಇತ್ತಂಡಗಳ ನಡುವೆ ತಲಾ 40 ಓವರ್‌ಗಳ, ಒಂದೇ ಇನ್ನಿಂಗ್ಸಿನ ಪಂದ್ಯವೊಂದನ್ನು ನಡೆಸಲು ನಿರ್ಧರಿಸಲಾಯಿತು. ಓವರಿಗೆ 8 ಎಸೆತ. ಬೌಲರ್‌ಗಳಿಗೆ ಗರಿಷ್ಠ 8 ಓವರ್‌ ಎಸೆಯುವ ಆವಕಾಶ. ಹೆಚ್ಚು ರನ್‌ ಬಾರಿಸಿದ ತಂಡ ವಿನ್‌. ವಿಕೆಟ್‌ ಮಿತಿ ಇಲ್ಲ. ಇಷ್ಟೇ ನಿಯಮಾವಳಿ. ಅಂದರೆ, ಟೆಸ್ಟ್‌ ನಂತೆ ಪಂದ್ಯ ಡ್ರಾ ಆಗದು!

ಪಂದ್ಯದ ಸ್ಪಾನ್ಸರ್‌ ಆಗಿದ್ದ “ರಾಥ್ಥನ್ಸ್‌ ಕಂಪೆನಿ’ 5 ಸಾವಿರ ಡಾಲರ್‌ ನೀಡಿತು. ಇದರಲ್ಲಿ ಪಂದ್ಯಶ್ರೇಷ್ಠ ಕ್ರಿಕೆಟಿಗನ 90 ಡಾಲರ್‌ ಮೊತ್ತವೂ ಸೇರಿತ್ತು.

ನೆನಪಿರಲಿ, ಆರಂಭದಲ್ಲಿ ಇದು ಅಧಿಕೃತ ಪಂದ್ಯವಾಗಿರಲಿಲ್ಲ. ಆಸ್ಟ್ರೇಲಿಯ ಇಲೆವೆನ್‌, ಇಂಗ್ಲೆಂಡ್‌ ಇಲೆವೆನ್‌ ಹೆಸರಲ್ಲಿ ತಂಡಗಳು ಕಣಕ್ಕಿಳಿದಿದ್ದವು. ಅಂತಾರಾಷ್ಟ್ರೀಯ ಪಂದ್ಯ ಅಲ್ಲ ಎಂಬ ಕಾರಣಕ್ಕೆ “ವಿಸ್ಡನ್‌’ ಪತ್ರಿಕೆ ಇದರ ವರದಿ ಪ್ರಕಟಿಸಲು ನಿರಾಕರಿಸಿತ್ತು. ಕೆಲವು ದಿನಗಳ ಬಳಿಕ ಇದಕ್ಕೆ ಅಧಿಕೃತ ಮಾನ್ಯತೆ ಲಭಿಸಿತು. ಇದು ಏಕದಿನ ಇತಿಹಾಸದ ಮೊದಲ ಪಂದ್ಯವಾಗಿ ದಾಖಲಾಯಿತು. “ಗಾರ್ಡಿಯನ್‌’ ಇದನ್ನು “ಒನ್‌ಡೇ ಟೆಸ್ಟ್‌’ ಎಂದು ಕರೆದಿತ್ತು.

ಆಸ್ಟ್ರೇಲಿಯಕ್ಕೆ 5 ವಿಕೆಟ್‌ ಜಯ

ಬಿಲ್‌ ಲಾರೀ ನಾಯಕತ್ವದ ಆಸ್ಟ್ರೇಲಿಯ ಈ ಪಂದ್ಯವನ್ನು 5 ವಿಕೆಟ್‌ಗಳಿಂದ ಜಯಿಸಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 39.4 ಓವರ್‌ಗಳಲ್ಲಿ 190ಕ್ಕೆ ಆಲೌಟಾಗಿತ್ತು. ಆಸೀಸ್‌ 34.6 ಓವರ್‌ಗಳಲ್ಲಿ 5 ವಿಕೆಟಿಗೆ 191 ರನ್‌ ಮಾಡಿ ಚೊಚ್ಚಲ ಏಕದಿನ ಗೆಲುವನ್ನು ತನ್ನದಾಗಿ ಸಿಕೊಂಡಿತು.

ಭಾರತ ಸೋಲಿನ ಆರಂಭ

ಭಾರತ ತನ್ನ ಏಕದಿನ ಅಭಿಯಾನವನ್ನು 1974ರ ಇಂಗ್ಲೆಂಡ್‌ ಪ್ರವಾಸದಲ್ಲಿ ಆರಂಭಿಸಿತು. ಈ ಸರಣಿ ವೇಳೆ 2 ಪಂದ್ಯಗಳನ್ನು ಆಡಲಾಗಿತ್ತು. ಭಾರತ ಎರಡನ್ನೂ ಕಳೆದುಕೊಂಡಿತು.1974ರ ಜುಲೈ 13ರಂದು ಲೀಡ್ಸ್‌ನಲ್ಲಿ ಏಕದಿನ ಇತಿಹಾಸದ ತನ್ನ ಮೊದಲ ಪಂದ್ಯವಾಡಿದ ಭಾರತ ಇದನ್ನು 4 ವಿಕೆಟ್‌ಗಳಿಂದ ಸೋತಿತು. ಭಾರತ 53.5 ಓವರ್‌ಗಳಲ್ಲಿ 265ಕ್ಕೆ ಆಲೌಟಾದರೆ, ಇಂಗ್ಲೆಂಡ್‌ 51.1 ಓವರ್‌ಗಳಲ್ಲಿ 6 ವಿಕೆಟಿಗೆ 266 ರನ್‌ ಬಾರಿಸಿತು. ನಾಯಕ ಅಜಿತ್‌ ವಾಡೇಕರ್‌ (67) ಮತ್ತು ಬೃಜೇಶ್‌ ಪಟೇಲ್‌ (82) ಅರ್ಧ ಶತಕ ಬಾರಿಸಿದರು. ಏಕನಾಥ್‌ ಸೋಲ್ಕರ್‌ ಮತ್ತು ಬೇಡಿ ತಲಾ 2 ವಿಕೆಟ್‌ ಉರುಳಿಸಿದರು.

ಮೊದಲ ಗೆಲುವಿನ ಸಂಭ್ರಮ

ಭಾರತಕ್ಕೆ ಮೊದಲ ಏಕದಿನ ಗೆಲುವು ಲೀಡ್ಸ್‌ ಅಂಗಳದಲ್ಲೇ ಒಲಿದಿತ್ತು. ಅದು 1975ರ ವಿಶ್ವಕಪ್‌ ಪಂದ್ಯಾವಳಿಯ ಪೂರ್ವ ಆಫ್ರಿಕಾ ಎದುರಿನ ಪಂದ್ಯವಾಗಿತ್ತು. ಅಂತರ 10 ವಿಕೆಟ್‌. ಆಗ ವೆಂಕಟರಾಘವನ್‌ ನಾಯಕರಾಗಿದ್ದರು. ಪೂರ್ವ ಆಫ್ರಿಕಾ 120ಕ್ಕೆ ಕುಸಿದರೆ, ಭಾರತ 29.5 ಓವರ್‌ಗಳಲ್ಲಿ ನೋಲಾಸ್‌ 123 ರನ್‌ ಬಾರಿಸಿತು. ಗಾವಸ್ಕರ್‌ 65, ಎಂಜಿನಿಯರ್‌ 54 ರನ್‌ ಹೊಡೆದರು.

ಆಸ್ಟ್ರೇಲಿಯ, ಭಾರತ: 500 ಗೆಲುವಿನ ಸಾಧನೆ

ಈ ವರೆಗೆ 25 ದೇಶಗಳು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿವೆ. ಇವುಗಳಲ್ಲಿ ಕೇವಲ 2 ದೇಶಗಳಷ್ಟೇ 500 ಗೆಲುವು ಸಾಧಿಸಿವೆ. 579 ಜಯ ಕಂಡ ಆಸ್ಟ್ರೇಲಿಯಕ್ಕೆ ಅಗ್ರಸ್ಥಾನ. 514 ಗೆಲುವು ಸಾಧಿಸಿದ ಭಾರತ ದ್ವಿತೀಯ ಸ್ಥಾನದಲ್ಲಿದೆ. ಅತೀ ಹೆಚ್ಚು ಪಂದ್ಯಗಳನ್ನಾಡಿದ ದಾಖಲೆ ಭಾರತದ ಹೆಸರಲ್ಲಿರುವುದು ವಿಶೇಷ. 990 ಪಂದ್ಯಗಳನ್ನಾಡಿರುವ ಭಾರತವೀಗ ಸಾವಿರ ಪಂದ್ಯಗಳನ್ನು ಸಮೀಪಿಸಿದೆ. ಆಸ್ಟ್ರೇಲಿಯ 955, ಪಾಕಿಸ್ಥಾನ 930 ಪಂದ್ಯಗಳನ್ನಾಡಿವೆ. ಅತೀ ಹೆಚ್ಚು 426 ಸೋಲನುಭವಿಸಿದ್ದು ಭಾರತ ತಂಡಕ್ಕೆ ಅಂಟಿದ ಕಳಂಕವಾಗಿದೆ!

ನಾಲ್ಕೇ ವರ್ಷಗಳಲ್ಲಿ ವಿಶ್ವಕಪ್!

ನಿಧಾನ ಗತಿಯ ಟೆಸ್ಟ್‌ ಕ್ರಿಕೆಟ್‌ಗಿಂತ ಭಿನ್ನವಾದ ಏಕದಿನ ಕ್ರಿಕೆಟ್‌ ಕೆಲವೇ ದಿನಗಳಲ್ಲಿ ವೀಕ್ಷಕರನ್ನು ಸೆಳೆದು ಜನಪ್ರಿಯಗೊಂಡಿತು. ಪ್ರತೀ ಟೆಸ್ಟ್‌ ಸರಣಿ ವೇಳೆ ಎರಡಾದರೂ ಏಕದಿನ ಪಂದ್ಯಗಳನ್ನು ಆಡಿಸಲು ಎಲ್ಲ ದೇಶಗಳು ಮುಂದಾದದ್ದು, ನಾಲ್ಕೇ ವರ್ಷಗಳಲ್ಲಿ ಏಕದಿನ ವಿಶ್ವಕಪ್‌ ಮೊದಲ್ಗೊಂಡಿದ್ದೆಲ್ಲ ಇದಕ್ಕೆ ಸಾಕ್ಷಿ. 1975ರಲ್ಲಿ ಆರಂಭಗೊಂಡ ಏಕದಿನ ವಿಶ್ವಕಪ್‌ 4 ವರ್ಷಗಳಿಗೊಮ್ಮೆ ನಡೆಯುತ್ತಲೇ ಇದೆ.

ಜಾಗತಿಕ ಕ್ರಿಕೆಟಿಗೆ ಸಡ್ಡು ಹೊಡೆದ ಕೆರ್ರಿ ಪ್ಯಾಕರ್‌

ನಾವಿಂದು ಕಾಣುವ ಹಗಲು-ರಾತ್ರಿ ಪಂದ್ಯ, ಬಣ್ಣದ ಉಡುಗೆ, ಸ್ಟಂಪ್‌ ಮೈಕ್ರೋಫೋನ್‌ ಅಳವಡಿಕೆ ಮುಂತಾದುವೆಲ್ಲ ಆಧುನಿಕ ಏಕದಿನದ ಕ್ರಾಂತಿಕಾರಕ ಪರಿವರ್ತನೆ ಎಂದೇ ಭಾವಿಸಿದ್ದೇವೆ. ಆದರೆ ಇದನ್ನೆಲ್ಲ ಎಪ್ಪತ್ತರ ದಶಕದಲ್ಲೇ ಆಸ್ಟ್ರೇಲಿಯದ ಮಾಧ್ಯಮ ದೈತ್ಯ ಕೆರ್ರಿ ಪ್ಯಾಕರ್‌ ಜಾರಿಗೆ ತಂದು ಅಂದೇ ಜಾಗತಿಕ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದರು! 1976ರಲ್ಲಿ ಪ್ಯಾಕರ್‌ ಮಾಲಕತ್ವದ “ಚಾನೆಲ್‌ ನೈನ್‌’ಗೆ ಆಸ್ಟ್ರೇಲಿಯ ಕ್ರಿಕೆಟ್‌ ಪ್ರಸಾರದ ಆತಿಥ್ಯ ನೀಡಲು ಹಿಂದೇಟು ಹಾಕಿತ್ತು. ಆಗ ಬಂಡೆದ್ದ ಪ್ಯಾಕರ್‌ ವಿಶ್ವದ ಖ್ಯಾತ ಕ್ರಿಕೆಟಿಗರಿಗೆಲ್ಲ ಬಲೆ ಬೀಸಿ ತಮ್ಮದೇ ಆದ “ವರ್ಲ್ಡ್ ಸೀರಿಸ್‌ ಕ್ರಿಕೆಟ್‌’ ಆರಂಭಿಸಿದರು.

ಪಂದ್ಯವನ್ನೇ ಪಾಕಿಸ್ಥಾನಕ್ಕೆ ಬಿಟ್ಟುಕೊಟ್ಟ ಬೇಡಿ

1978-79ರ ಪಾಕ್‌ ಪ್ರವಾಸದ ಸರಣಿ ನಿರ್ಣಾಯಕ ಸಾಹಿವಾಲ್‌ ಪಂದ್ಯ. ಭಾರತಕ್ಕೆ 40 ಓವರ್‌ಗಳಲ್ಲಿ 206 ರನ್‌ ಟಾರ್ಗೆಟ್‌. 37 ಓವರ್‌ಗಳಲ್ಲಿ ಎರಡಕ್ಕೆ 183 ರನ್‌ ಮಾಡಿದ್ದ ಭಾರತ ಗೆಲುವಿನ ಹಾದಿಯಲ್ಲಿತ್ತು. ಅದು ಸರ್ಫರಾಜ್‌ ನವಾಜ್‌ ಓವರ್‌. ಎಸೆತವೊಂದು ಬ್ಯಾಟ್ಸ್‌ಮನ್‌ ತಲೆಯಿಂದ ಹಾದು ಹೋಯಿತು. ಅಂಪಾಯರ್‌ ಮಿಸುಕಾಡಲಿಲ್ಲ. ನವಾಜ್‌ ಅವರಿಂದ ಮತ್ತೆ ಇಂಥದೇ ಎಸೆತಗಳು ಚಿಮ್ಮಿದವು. ಅಂಪಾಯರ್‌ ಮತ್ತೆ ತಟಸ್ಥ. ನಾಯಕ ಬೇಡಿ ಕೋಪ ತಾರಕಕ್ಕೇರಿತು. ನಾವು ಆಡುವುದಿಲ್ಲ, ಇದು ನಿಮಗೇ ಎಂದು ಪಂದ್ಯವನ್ನು ಪಾಕಿಸ್ಥಾನಕ್ಕೆ ಬಿಟ್ಟುಕೊಟ್ಟರು!

ಕೆಲವು ಅಪರೂಪದ ದಾಖಲೆಗಳು!

*ರಿಚರ್ಡ್ಸ್‌ ವಿಶ್ವಕಪ್‌ ಕ್ರಿಕೆಟ್‌ ಮತ್ತು ವಿಶ್ವಕಪ್‌ ಫ‌ುಟ್‌ಬಾಲ್‌ ಆಡಿದ ಏಕೈಕ ಆಟಗಾರ. ಅವರು 1974ರಲ್ಲಿ ಆ್ಯಂಟಿಗುವಾ ಪರ ವಿಶ್ವಕಪ್‌ ಫ‌ುಟ್‌ಬಾಲ್‌ ಅರ್ಹತಾ ಸುತ್ತಿನಲ್ಲಿ ಆಡಿದ್ದರು.

*ಆಸ್ಟ್ರೇಲಿಯದ ಅಲನ್‌ ಥಾಮ್ಸನ್‌ ಮೊದಲ ವಿಕೆಟ್‌ ಕಿತ್ತ ಸಾಧಕ. ಔಟ್‌ ಆದವರು ಜೆಫ್ ಬಾಯ್ಕಟ್‌. ಬಿಲ್‌ ಲಾರಿ ಇವರ ಕ್ಯಾಚ್‌ ಪಡೆದಿದ್ದರು.

*ಏಕದಿನದಲ್ಲಿ 1983ರ ತನಕ 60 ಓವರ್‌ ಬಳಕೆಯಲ್ಲಿತ್ತು. ಇನ್ನಿಂಗ್ಸ್‌ ಅವಧಿ 4 ಗಂಟೆಯಾಗಿತ್ತು. ಆದರೆ ಏಕದಿನ ಇತಿಹಾಸದ ಮೊದಲ ಪಂದ್ಯ ತಲಾ 40 ಓವರ್‌ಗಳದ್ದಾಗಿತ್ತು.

*ಆಸ್ಟ್ರೇಲಿಯದ ಗ್ರಹಾಂ ಮೆಕೆಂಝಿ ಏಕದಿನದ ಮೊದಲ ಎಸೆತವಿಕ್ಕಿದ ಬೌಲರ್‌. ಇದನ್ನು ಎದುರಿಸಿದವರು ಜೆಫ್ ಬಾಯ್ಕಟ್‌.

*ಕಪಿಲ್‌ದೇವ್‌ ಭಾರತದ ಮೊದಲ ಶತಕವೀರ. 1983ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಅವರು ಅಜೇಯ 175 ರನ್‌ ಬಾರಿಸಿದ್ದರು. ಆ ಕಾಲದಲ್ಲಿ ಅದು ವಿಶ್ವದಾಖಲೆಯ ಮೊತ್ತವಾಗಿತ್ತು!

*ರಿಕಿ ಪಾಂಟಿಂಗ್‌ ಮತ್ತು ಆ್ಯಡಂ ಗಿಲ್‌ಕ್ರಿಸ್ಟ್‌ ಅತ್ಯಧಿಕ 3 ವಿಶ್ವಕಪ್‌ ವಿಜೇತ ತಂಡದ ಸದಸ್ಯರೆನಿಸಿದ ಇಬ್ಬರು ಕ್ರಿಕೆಟಿಗರು.

*ಎಂ.ಎಸ್‌.ಧೋನಿ ಪಂದ್ಯದಲ್ಲಿ ಅತ್ಯಧಿಕ ರನ್‌ ಬಾರಿಸಿದ ಕೀಪರ್‌ ಆಗಿದ್ದಾರೆ (ಅಜೇಯ 183).

*ಈ ವರೆಗೆ ಇಡೀ ತಂಡ 2 ಸಲ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರವಾಗಿವೆ. ಇವುಗಳೆಂದರೆ ನ್ಯೂಜಿಲ್ಯಾಂಡ್‌ ಮತ್ತು ಪಾಕಿಸ್ಥಾನ.

*ಏಕದಿನದಲ್ಲಿ 1983ರ ತನಕ 60 ಓವರ್‌ ಬಳಕೆಯಲ್ಲಿತ್ತು. ಇನ್ನಿಂಗ್ಸ್‌ ಅವಧಿ 4 ಗಂಟೆಯಾಗಿತ್ತು. ಆದರೆ ಏಕದಿನ ಇತಿಹಾಸದ ಮೊದಲ ಪಂದ್ಯ ತಲಾ 40 ಓವರ್‌ಗಳದ್ದಾಗಿತ್ತು.

*ಜಾಂಟಿ ರೋಡ್ಸ್‌ ಫೀಲ್ಡಿಂಗಿಗೆ, ಬಾಬ್‌ ವಿಲ್ಲೀಸ್‌ ಕ್ಯಾಪ್ಟನ್ಸಿಗೆ ಪಂದ್ಯಶ್ರೇಷ್ಠ ಗೌರವ ಪಡೆದಿದ್ದಾರೆ.

*ವೇಗದ ಶತಕದ ದಾಖಲೆ (31 ಎಸೆತ) ಮತ್ತು ಅರ್ಧ ಶತಕದ ದಾಖಲೆ (16 ಎಸೆತ) ಎಬಿಡಿ ಹೆಸರಲ್ಲಿದೆ. ಅವರು 30 ಓವರ್‌ ಬಳಿಕ ಕ್ರೀಸ್‌ ಇಳಿದು 2 ಸೆಂಚುರಿ ಬಾರಿಸಿದ ಏಕೈಕ ಆಟಗಾರ.

*ಅತೀ ವೇಗದ ಬೌಲಿಂಗ್‌ ಎಸೆತದ ದಾಖಲೆ ಶೋಯಿಬ್‌ ಅಖ್ತರ್‌ ಹೆಸರಲ್ಲಿದೆ. 2003ರ ಇಂಗ್ಲೆಂಡ್‌ ಎದುರಿನ ವಿಶ್ವಕಪ್‌ ಪಂದ್ಯದಲ್ಲಿ 161.3 ಕಿ.ಮೀ. ವೇಗದ ಎಸೆತವಿಕ್ಕಿದ್ದರು.

*ರಿಕಿ ಪಾಂಟಿಂಗ್‌ ಮತ್ತು ಆ್ಯಡಂ ಗಿಲ್‌ಕ್ರಿಸ್ಟ್‌ ಅತ್ಯಧಿಕ 3 ವಿಶ್ವಕಪ್‌ ವಿಜೇತ ತಂಡದ ಸದಸ್ಯರೆನಿಸಿದ ಇಬ್ಬರು ಕ್ರಿಕೆಟಿಗರು.

*ಇಂಗ್ಲೆಂಡಿನ ಜಾನ್‌ ಎಡ್ರಿಚ್‌ ಏಕದಿನದಲ್ಲಿ ಮೊದಲ ಬೌಂಡರಿ ಹಾಗೂ ಮೊದಲ ಅರ್ಧ ಶತಕ ದಾಖಲಿಸಿದ ಆಟಗಾರ. ಮೊದಲ ಸಿಕ್ಸರ್‌ ಸಿಡಿಸಿದವರು ಇಯಾನ್‌ ಚಾಪೆಲ್‌.

*ನಾಯಕನಾಗಿ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್‌ ಬಾರಿಸಿದ ದಾಖಲೆ ಸೆಹವಾಗ್‌ ಹೆಸರಲ್ಲಿದೆ (219).

*ಅತೀ ವೇಗದ ದ್ವಿಶತಕದ ದಾಖಲೆ ಕ್ರಿಸ್‌ ಗೇಲ್‌ ಹೆಸರಲ್ಲಿದೆ (138 ಎಸೆತ).

*ದಕ್ಷಿಣ ಆಫ್ರಿಕಾದ ಹರ್ಶಲ್‌ ಗಿಬ್ಸ್ ಓವರಿನ ಆರೂ ಎಸೆತಗಳಲ್ಲಿ ಸಿಕ್ಸರ್‌ ಸಿಡಿಸಿದ ಏಕೈಕ ಕ್ರಿಕೆಟಿಗ.

*ಚೇತನ್‌ ಶರ್ಮ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಸಾಧನೆಗೈದ ಮೊದಲ ಕ್ರಿಕೆಟಿಗ (1987ರ ಕಿವೀಸ್‌ ಎದುರಿನ ನಾಗ್ಪುರ ಪಂದ್ಯ).

*ಈ ವರೆಗೆ 14 ಮಂದಿ ಕ್ರಿಕೆಟಿಗರು ಎರಡು ದೇಶಗಳನ್ನು ಪ್ರತಿನಿಧಿಸಿದ್ದಾರೆ.  ಆದರೆ ಇದರಲ್ಲಿ ಭಾರತದ ಆಟಗಾರರ್ಯಾರೂ ಸೇರಿಲ್ಲ.

*ಸಚಿನ್‌ ತೆಂಡುಲ್ಕರ್‌ ಏಕದಿನದಲ್ಲಿ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗ.

*ಸಚಿನ್‌ ಅತೀ ಹೆಚ್ಚು 18 ಸಲ ನರ್ವಸ್‌ ನೈಂಟಿಗೆ ವಿಕೆಟ್‌ ಒಪ್ಪಿಸಿದ ಕ್ರಿಕೆಟಿಗ.

*ರಶೀದ್‌ ಖಾನ್‌ ಅತೀ ಕಿರಿಯ ಕಪ್ತಾನ. 2018ರಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ನಾಯಕ ರಾದಾಗ ಅವರ ವಯಸ್ಸು 19 ವರ್ಷ, 165 ದಿನ.

*ವಿಂಡೀಸಿನ ಗೇಲ್‌-ಸಾಮ್ಯಯೆಲ್ಸ್‌ ಅತೀ ಹೆಚ್ಚು 372 ರನ್ನುಗಳ ದಾಖಲೆ ಜತೆಯಾಟ ನಡೆಸಿದ ಜೋಡಿಯಾಗಿದೆ.

*ಭಾರತ-ಶ್ರೀಲಂಕಾ ನಡುವಿನ 1992ರ ಮೆಕಾಯ್‌ ಪಂದ್ಯ ಅತೀ ಕಡಿಮೆ ಎಸೆತ ಗಳಿಗೆ ಸಾಕ್ಷಿ ಯಾಗಿತ್ತು. ಇಲ್ಲಿ ಕೇವಲ 2 ಎಸೆತ ಗಳನ್ನು ಎಸೆಯಲಾಗಿತ್ತು.

*ಲಸಿತ ಮಾಲಿಂಗ 3 ಸಲ ಹ್ಯಾಟ್ರಿಕ್‌ ಸಾಧನೆಗೈದ ವಿಶ್ವದ ಏಕೈಕ ಬೌಲರ್‌.

Advertisement

Udayavani is now on Telegram. Click here to join our channel and stay updated with the latest news.

Next