ಬೆಂಗಳೂರು: ಐದನೇ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಭರದ ಸಿದ್ಧತೆ ನಡೆಸಿರುವ ಸರ್ಕಾರ, 2022ನೇ ಸಾಲಿನ ಹೂಡಿಕೆದಾರರಿಗಾಗಿಯೇ ಸುಮಾರು ಐವತ್ತು ಸಾವಿರ ಎಕರೆ ಭೂಮಿಯನ್ನು ತೆಗೆದಿಡಲು ಉದ್ದೇಶಿಸಿದೆ.
ಸಮಾವೇಶದ ತಯಾರಿ ಜತೆಯಲ್ಲೇ ಅದರಲ್ಲಿ ಹೂಡಿಕೆಗೆ ಮುಂದೆಬರುವವರಿಗೆ ಅಗತ್ಯ ಭೂಮಿ ಪೂರೈಸಲು ಸಿದ್ಧತೆ ನಡೆದಿದೆ. ಈ ಸಂಬಂಧ ಬೆಂಗಳೂರು ಸುತ್ತಲಿನ ಪ್ರದೇಶದಲ್ಲಿ ಸುಮಾರು ಐವತ್ತು ಸಾವಿರ ಎಕರೆ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಗುರುತಿಸಿ ಮೀಸಲಿಡುವ ಪ್ರಕ್ರಿಯೆ ಸದ್ದಿಲ್ಲದೆ ನಡೆದಿದೆ. ಅಂದು ಕೊಂಡಂತೆ ಎಲ್ಲವೂ ನಡೆದರೆ, “ಜಿಮ್’ (ಜಾಗತಿಕ ಹೂಡಿಕೆದಾರರ ಸಮಾವೇಶ) ಮುಗಿದು ಆರು ತಿಂಗಳಲ್ಲಿ ಭೂಮಿಯ ಹಂಚಿಕೆ ಮತ್ತು ಅನು ಷ್ಠಾನ ಪ್ರಕ್ರಿಯೆಗೆ ಚಾಲನೆ ನೀಡುವ ಗುರಿ ಸರ್ಕಾರದ ಮುಂದಿದೆ.
ರಾಜ್ಯದಲ್ಲಿ ಭೂಮಿಯ ಲಭ್ಯತೆ ಸಾಕಷ್ಟಿದೆ. ಮತ್ತಷ್ಟು ಭೂಮಿಯನ್ನು ನೀಡಲು ಜನ ಕೂಡ ತಯಾರಿದ್ದಾರೆ. ಆದರೆ, ಅದು ಹೂಡಿಕೆದಾರರಿಗೆ ಬೇಕಾದ ಕಡೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಇದು ಸರ್ಕಾರಕ್ಕೆ ತುಸು ತಲೆನೋವಾಗಿದೆ. ಇದಕ್ಕಾಗಿ ಹುಡುಕಾಟ ನಡೆದಿದೆ. 50 ಸಾವಿರ ಎಕರೆಯಲ್ಲಿ ಸುಮಾರು ಮೂರ ರಿಂದ ನಾಲ್ಕು ಸಾವಿರ ಎಕರೆ ಭೂಮಿ ದೇವನಹಳ್ಳಿ ಆಸುಪಾಸಿನಲ್ಲೇ ಲಭ್ಯವಿದೆ. ಇದಲ್ಲದೆ, ಬೇರೆ ಬೇರೆ ಕಡೆಗಳಲ್ಲೂ ಗುರುತಿಸಿ, ಜಿಮ್‌ಗಾಗಿಯೇ ತೆಗೆದಿಡಲು ಉದ್ದೇಶಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಮತ್ತೂಂದೆಡೆ ರಾಜ್ಯದಲ್ಲಿ ಕಳೆದೆರಡು ದಶಕಗಳಿಂದ ಸುಮಾರು 10,800 ಎಕರೆ ಕೈಗಾರಿಕಾ ಪ್ರದೇಶ ಖಾಲಿ ಬಿದ್ದಿದೆ. ಇದರಲ್ಲಿ 7,500 ಎಕರೆ ಸ್ಟೀಲ್ ಘಟಕಕ್ಕೆ ಸಂಬಂಧಿಸಿದ್ದಾಗಿದೆ. ಉಳಿದದ್ದು ವಿವಿಧ ಕೈಗಾರಿಕೆಗಳ ಉದ್ದೇಶಕ್ಕೆ ಪಡೆದಿದ್ದಾಗಿದೆ. ಕೈಗಾರಿಕೆ ಸ್ಥಾಪನೆ ವಿಳಂಬ ವಾದ ಹಿನ್ನೆಲೆಯಲ್ಲಿ 1,117 ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ಈಗಾಗಲೇ 69 ಉದ್ಯಮಿಗಳಿಂದ 386 ಎಕರೆ ವಾಪಸ್ ಪಡೆಯಲಾಗಿದೆ. ರಾಜ್ಯದಲ್ಲಿ 52,008 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಭೂಮಿಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲೇ 20 ಸಾವಿರ ಎಕರೆ ಭೂಸ್ವಾಧೀನ ಗುರಿ ಇದೆ ಎನ್ನಲಾಗಿದೆ.
100 ಕಿ.ಮೀ.ಗೊಂದು ಏರ್‌ಪೋರ್ಟ್: ಈ ಮಧ್ಯೆ ರಾಜ್ಯದಲ್ಲಿ ಪ್ರತಿ ನೂರು ಕಿ.ಮೀ.ಗೊಂದು ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಯೋಜನೆ ರೂಪಿ ಸಿದೆ. ಪ್ರಸ್ತುತ 11 ನಿಲ್ದಾಣಗಳಿದ್ದು, ಇನ್ನೂ 5ರಿಂದ 6 ನಿಲ್ದಾಣಗಳು ಮುಂದಿನ 18 ತಿಂಗಳಲ್ಲಿ ತಲೆಯೆತ್ತಲಿವೆ.
“ಬಾದಾಮಿ, ರಾಯಚೂರು, ಕೊಪ್ಪಳ, ದಾವಣ ಗೆರೆ, ಚಿಕ್ಕಮಗಳೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾ ಣಕ್ಕೆ ಯೋಜನೆ ರೂಪಿಸಲಾಗಿದೆ. ಪ್ರತಿ ನಿಲ್ದಾಣಕ್ಕೆ ಕನಿಷ್ಠ 400-500 ಎಕರೆ ಭೂಮಿಯ ಅವಶ್ಯಕತೆ ಇದ್ದು, ಇದನ್ನು ಗುರುತಿಸುವ ಕೆಲಸ ನಡೆದಿದೆ. ವಿಮಾನಯಾನ ಸಂಪರ್ಕದ ಜತೆಗೆ ಮತ್ತೂಂದೆಡೆ ಕೈಗಾರಿಕಾ ಕಾರಿಡಾರ್‌ಗಳ ನಿರ್ಮಾಣಕ್ಕೂ ಸಿದ್ಧತೆ ನಡೆದಿದೆ. ಇದಕ್ಕೆ ಪೂರಕವಾಗಿ ವಿದ್ಯುತ್ ಲಭ್ಯತೆ ರಾಜ್ಯದಲ್ಲಿ ಸಾಕಷ್ಟಿದೆ. ಹಾಗಾಗಿ, ಭವಿಷ್ಯದಲ್ಲಿ ಎರಡು- ಮೂರನೇ ಹಂತದ ನಗರಗಳ ಭಾಗ್ಯದ ಬಾಗಿಲು ತೆರೆಯಲಿದೆ’ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
-ವಿಜಯಕುಮಾರ ಚಂದರಗಿ