ವಾಡಿ: ಶತಮಾನಗಳ ಕಾಲ ನಾಡ ದೋಣಿ ಸಂಪರ್ಕ ಹೊಂದಿದ್ದ ಚಿತ್ತಾಪುರ ತಾಲೂಕಿನ ಚಾಮನೂರ ಹಾಗೂ ಜೇವರ್ಗಿ ತಾಲೂಕಿನ ನರಿಬೋಳಿ ಗ್ರಾಮಕ್ಕೆ ಸೇತುವೆ ಮಂಜೂರಾಗಿ ಉಭಯ ಗ್ರಾಮಸ್ಥರ ಹರ್ಷಕ್ಕೆ ಕಾರಣವಾಗಿತ್ತು.
2017ನೇ ಸಾಲಿನಲ್ಲಿ ಆಗಿನ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದ್ದರು. ಸರ್ಕಾರದ ಟೆಂಡರ್ ಪ್ರಕಾರ 18 ತಿಂಗಳಲ್ಲಿ ಲೋಕಾರ್ಪಣೆ ಆಗಬೇಕಿದ್ದ ಈ ಸೇತುವೆ, ಐದು ವರ್ಷ ಕಳೆದರೂ ಪೂರ್ಣವಾಗಿಲ್ಲ. ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಗ್ರಾಮಸ್ಥರಿಗೆ ದೋಣಿಯೇ ಆಸರೆ ಎನ್ನುವಂತಾಗಿದೆ.
ಒಟ್ಟು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಭೀಮಾ ಸೇತುವೆ ನೀಲನಕ್ಷೆ 17 ಆಧಾರ ಸ್ತಂಭಗಳಿಂದ ಕೂಡಿದೆ. ಸದ್ಯ 12 ಸ್ತಂಭಗಳು ಪೂರ್ಣಗೊಂಡಿವೆ. ಇನ್ನು ಐದು ಸ್ತಂಭಗಳ ನಿರ್ಮಾಣ ಕಾರ್ಯ ನಡೆಯಬೇಕಿದೆ.
ಚಾಮನೂರ ಭೀಮಾ ದಂಡೆಯಲ್ಲಿ ಕಾರ್ಖಾನೆಯನ್ನೇ ಸ್ಥಾಪಿಸಿರುವ ಹೈದ್ರಾಬಾದ್ ಮೂಲದ ಕೆಎಂವಿ ಸಂಸ್ಥೆಯ ಗುತ್ತಿಗೆದಾರ, ಸಾವಿರಾರು ಜನ ಕಾರ್ಮಿಕರನ್ನು ಪ್ರದರ್ಶಿಸಿ ಈಗ ಕಾಮಗಾರಿ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಾಮಗಾರಿ ಸ್ಥಳದಲ್ಲಿ ಯಾವೊಬ್ಬ ಕಾರ್ಮಿಕರು ಕಂಡುಬರುತ್ತಿಲ್ಲ. ದೂರವಾಣಿ ಕರೆ ಸಂಪರ್ಕಕ್ಕೂ ಗುತ್ತಿಗೆದಾರ ಸಿಗುತ್ತಿಲ್ಲ. ಸೇತುವೆ ಜಾಗದಲ್ಲೀಗ ಯಂತ್ರಗಳ ನಿಗರಾಣಿಗಾಗಿ ಕೇವಲ ಐದಾರು ಜನ ಕಾರ್ಮಿಕರಿದ್ದಾರೆ. ನನೆಗುದಿಗೆ ಬಿದ್ದಿರುವ ನಿರ್ಮಾಣ ಹಂತದ ಭೀಮಾ ಸೇತುವೆಯ ಕೆಳಗೆ ಮೀನುಗಾರರು ಮತ್ತು ಅಲೆಮಾರಿ ಕುರಿಗಾಹಿಗಳು ವಾಸವಾಗಿದ್ದಾರೆ. ಚಾಮನೂರ-ನರಿಬೋಳ ನಡುವಿನ ಸೇತುವೆ ಚಿತ್ತಾಪುರ ತಾಲೂಕಿನ ಜನರ ಹಲವು ವರ್ಷಗಳ ಬೇಡಿಕೆಯಾಗಿದೆ.
ಇದನ್ನೂ ಓದಿ: ಕಾಲೇಜುಗಳಲ್ಲಿ ಯುವತಿಯರಿಗೆ ಸ್ವಯಂ ರಕ್ಷಣಾ ತರಬೇತಿ: ಸಿಎಂ ಬೊಮ್ಮಾಯಿ
ಕಾಮಗಾರಿ ಪೂರ್ಣವಾದರೆ ಚಿತ್ತಾಪುರ-ಜೇವರ್ಗಿ ನಡುವೆ ಕ್ರಮಿಸಬೇಕಾದ 40 ಕಿ.ಮೀ ಹೆಚ್ಚುವರಿ ಅಂತರಕ್ಕೆ ಕಡಿವಾಣ ಬೀಳುತ್ತದೆ. ಚಾಮನೂರು ಮೂಲಕ ಜೇವರ್ಗಿ ತಲುಪಲು ಬಹಳಷ್ಟು ಅನುಕೂಲ ಆಗುತ್ತದೆ. ವಿಪರ್ಯಾಸವೆಂದರೆ ಕಾಂಗ್ರೆಸ್ ಸರ್ಕಾರ ಪತನವಾದ ಬಳಿಕ ಸೇತುವೆ ನಿರ್ಮಾಣಕ್ಕೆ ಗ್ರಹಣ ಬಡಿದಂತಾಗಿದೆ. ಅಲ್ಲದೇ ಸರ್ಕಾರದಿಂದ ಅನುದಾನ ಬಿಡುಗಡೆಗೂ ವಿಘ್ನ ಎದುರಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ.
ಅನುದಾನ ಕೊರತೆಯಿಂದ ಯೋಜನೆ ಸ್ಥಗಿತಗೊಂಡಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸೇತುವೆಗೆ ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸಿರುವ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಜೇವರ್ಗಿ ಶಾಸಕ ಡಾ| ಅಜಯಸಿಂಗ್ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಕಾಮಗಾರಿ ಕುಂಟುತ್ತಾ ಸಾಗಿ ಇದೀಗ ಸಂಪೂರ್ಣ ಸ್ಥಗಿತವಾಗಿದ್ದರೂ ಒಮ್ಮೆಯೂ ಕಾಮಗಾರಿ ವೀಕ್ಷಣೆಗೆ ಇವರು ಆಗಮಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕಚೇರಿಯಿಂದ ಹೊರ ಬಂದಿಲ್ಲ ಎನ್ನುವುದು ಚಾಮನೂರ ಮತ್ತು ನರಿಬೋಳ ಗ್ರಾಮಸ್ಥರ ಆರೋಪವಾಗಿದೆ.
ದೋಣಿ ಸಂಚಾರ ಢವಢವ
ಸೇತುವೆ ನಿರ್ಮಾಣ ಕಾರ್ಯ ಸ್ಥಗಿತವಾಗಿದ್ದರಿಂದ ಲೋಕಾರ್ಪಣೆ ಸಮಾರಂಭ ಇನ್ನಷ್ಟು ವರ್ಷಗಳ ಕಾಲ ಮುಂದೂಡಲಿದೆ. ನರಿಬೋಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯನ್ನೇ ಅವಲಂಬಿಸಿರುವ ಚಾಮನೂರ ಗ್ರಾಮದ ನೂರಾರು ವಿದ್ಯಾರ್ಥಿಗಳು, ಎಂದಿನಂತೆ ದೋಣಿ ಸಂಚಾರ ಮುಂದುವರಿಸಿದ್ದಾರೆ. ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ಹೋಗುವ ಪ್ರಯಾಣಿಕರು ದೋಣಿ ಆಸರೆ ಪಡೆಯುತ್ತಿದ್ದಾರೆ. ತುಂಬಿದ ನದಿಯಲ್ಲಿ ಯಂತ್ರಾಧಾರಿತ ದೋಣಿ ಹತ್ತಿ ಹೊರಡುವ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವುದು ಅನಿವಾರ್ಯವಾಗಿದೆ.
-ಮಡಿವಾಳಪ್ಪ ಹೇರೂರ