Advertisement

5 ಸಾವಿರ ಕೋಟಿ ರೂ. ನಷ್ಟ? ಮಳೆ ಹಾನಿ ಕುರಿತ ಸಮರ್ಪಕ ಸಮೀಕ್ಷೆ ನಡೆಸಲು ಸಿಎಂ ಸೂಚನೆ

12:26 AM Aug 09, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಐದು ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದ್ದು, ನೆರವಿಗಾಗಿ ಕೇಂದ್ರ ಸರಕಾರದ ಮೊರೆ ಹೋಗಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆ.

Advertisement

ಬೆಳೆ ನಷ್ಟ, ರಸ್ತೆ ಮತ್ತು ಸೇತುವೆ ಹಾನಿ ಸೇರಿ ಪ್ರಾಥಮಿಕ ಅಂದಾಜು ಪ್ರಕಾರ 5 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಆದರೆ ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಸುರಿದ ಮಳೆಯಿಂದ ಉಂಟಾದ ಹಾನಿಯ ಬಗ್ಗೆ ಅಧಿಕಾರಿಗಳು ಸಮರ್ಪಕ ಸಮೀಕ್ಷೆ ಮಾಡದಿರುವುದರಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಾಧ್ಯವಾಗಿಲ್ಲ.
ನಷ್ಟ 1 ಸಾವಿರ ಕೋ.ರೂ. ಮೇಲ್ಪಟ್ಟರೆ ಕೇಂದ್ರ ತಂಡದ ಭೇಟಿ ಮತ್ತು ನೆರವಿಗೆ ಪ್ರಸ್ತಾವನೆ ಸಲ್ಲಿಸಬಹುದಾಗಿದ್ದು, ಆ. 10ರ ವರೆಗಿನ ನಷ್ಟದ ವರದಿ ಸಿದ್ಧಪಡಿಸಲು ಅಧಿ ಕಾರಿಗಳಿಗೆ ಸೂಚಿಸಲಾಗಿದೆ.

ಬೆಳೆ ಹಾನಿ ಸಮೀಕ್ಷೆ ವರದಿ ಬಂದ ಅನಂತರ ಮುಂದಿನ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್‌. ಅಶೋಕ್‌ ದಿಲ್ಲಿಗೆ ತೆರಳಿ ರಾಜ್ಯಕ್ಕೆ ಹೆಚ್ಚಿನ ನೆರವು ಕೋರಿ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಅಸಮರ್ಪಕ ಸಮೀಕ್ಷೆ
ಜುಲೈ ಅಂತ್ಯಕ್ಕೆ 18,927 ಹೆಕ್ಟೇರ್‌ನಷ್ಟು ಬೆಳೆ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ವಾಸ್ತವವಾಗಿ 1 ಲಕ್ಷ ಹೆಕ್ಟೇರ್‌ ಬೆಳೆ ನಷ್ಟ ಉಂಟಾಗಿದೆ. ಆಗಸ್ಟ್‌ ಮೊದಲ ವಾರ ಸುರಿದ ಮಳೆಯಿಂದ 40 ಸಾವಿರ ಹೆಕ್ಟೇರ್‌ ಬೆಳೆನಷ್ಟ ಉಂಟಾಗಿದೆ. ಹೀಗಾಗಿ ನಿಖರ ಸಮೀಕ್ಷೆ ಮಾಡದಿದ್ದರೆ ಕೇಂದ್ರಕ್ಕೆ ನೆರವಿಗಾಗಿ ಪ್ರಸ್ತಾವನೆ ಸಲ್ಲಿಸಲು ಕಷ್ಟವಾಗಲಿದೆ. ಪ್ರತೀ ಗ್ರಾಮಕ್ಕೆ ಭೇಟಿ ನೀಡಿ ಬೆಳೆ ನಷ್ಟದ ಸಮೀಕ್ಷೆ ನಡೆಸಬೇಕಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಪ್ರತ್ಯೇಕ ಸಮೀಕ್ಷೆ ನಡೆಸಿ ನಷ್ಟದ ಅಂದಾಜು ಸಿದ್ಧಪಡಿಸಬೇಕು. ಆ ಬಗ್ಗೆ ಮೇಲುಸ್ತುವಾರಿ ವಹಿಸಬೇಕು ಎಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ. ಮಳೆ-ಪ್ರವಾಹದಿಂದ 12 ಸಾವಿರ ಕಿ.ಮೀ. ರಸ್ತೆ, 1,150 ಸೇತುವೆ, 5 ಸಾವಿರ ಶಾಲಾ ಕಟ್ಟಡಗಳಿಗೆ ಹಾನಿಯಾಗಿರುವುದರಿಂದ ದುರಸ್ತಿಗೆ ಅಗತ್ಯವಾದ ಮೊತ್ತದ ಅಂದಾಜು ಪಟ್ಟಿ ಸಿದ್ಧಪಡಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಮಳೆಯಿಂದ ಈ ವರ್ಷ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಕಾಫಿ, ಮೆಣಸು, ಏಲಕ್ಕಿ ಸೇರಿ ವಾಣಿಜ್ಯ ಬೆಳೆ ಹೆಚ್ಚು ನಷ್ಟವಾಗಿರುವುದರಿಂದ ಆ ಭಾಗದ ಸಂಸದರು ಮತ್ತು ಸಚಿವರ ಜತೆ ನಿಯೋಗದಲ್ಲಿ ತೆರಳಿ ಪ್ರತ್ಯೇಕ ಪ್ಯಾಕೇಜ್‌ ನೀಡುವಂತೆ ಕೇಂದ್ರಕ್ಕೆ ಕೋರಿಕೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

ರಾಜ್ಯದಲ್ಲಿ ಒಂದೂವರೆ ತಿಂಗಳಲ್ಲಿ 3.40 ಲಕ್ಷ ಹೆಕ್ಟೇರ್‌ ಬೆಳೆ ನಾಶ
ರಾಜ್ಯದಲ್ಲಿ ಒಂದೂವರೆ ತಿಂಗಳಲ್ಲಿ ಮಳೆಯಿಂದ ಉಂಟಾದ ಪ್ರವಾಹದಿಂದ 3.40¬ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಮಳೆಯಿಂದಾಗಿ ಪ್ರತೀ ಜಿಲ್ಲೆಯಲ್ಲಿ ಆಗಿರುವ ವಿವಿಧ ಬೆಳೆ ಹಾನಿಯ ಬಗ್ಗೆ ಕೃಷಿ ಇಲಾಖೆ ಸಮೀಕ್ಷೆ ನಡೆಸಿ ನಷ್ಟದ ಪಟ್ಟಿ ಸಿದ್ಧಪಡಿಸಿದೆ. ಮುಂಗಾರು ಹಂಗಾಮಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಬೆಳೆದ ಸೋಯಾಬಿನ್‌, ಭತ್ತ, ಹತ್ತಿ, ಕಬ್ಬು, ತಂಬಾಕು, ಹೆಸರು, ಅವರೆ, ರಾಗಿ, ಗೋವಿನ ಜೋಳ, ಉದ್ದು, ತೊಗರಿ ಬೆಳೆಗಳು ಹಾನಿಗೀಡಾಗಿದ್ದು, ಒಟ್ಟು 3,40,260 ಹೆಕ್ಟೇರ್‌ ಬೆಳೆ ನಾಶವಾಗಿದ್ದು, ಒಟ್ಟು ಬಿತ್ತನೆಯ ಶೇ. 5.62ರಷ್ಟು ಹಾನಿಯಾಗಿದೆ ಎಂದು ಆರಂಭಿಕ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

2022-23ನೇ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 82.67 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ 63.38 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ವಾಡಿಕೆಯಂತೆ ಆಗಸ್ಟ್‌ ಮೊದಲ ವಾರದಲ್ಲಿ 54.89 ಲಕ್ಷ ಹೆಕ್ಟೇರ್‌ ಬಿತ್ತನೆ ಮಾಡಲಾಗುತ್ತದೆ. ಆದರೆ ಈ ವರ್ಷ ಶೇ. 77ರಷ್ಟು ಗುರಿ ಸಾಧಿಸಲಾಗಿದೆ.

ಬೆಳೆಗಳು ನೀರುಪಾಲು; ರೈತ ಕಂಗಾಲು
ನಿರಂತರ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ತೊಗರಿ, ಹತ್ತಿ, ಸೂರ್ಯಕಾಂತಿ, ಮೆಕ್ಕೆಜೋಳ, ಹೆಸರು ಬೆಳೆಗಳಿಗೆ ಹೆಚ್ಚು ಹಾನಿಯಾಗಿದೆ. ರಾಯಚೂರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಭತ್ತ ಹಾಳಾಗಿದ್ದರೆ ಹತ್ತಿ, ತೊಗರಿ ಬೆಳೆಗೂ ಕಂಟಕ ಎದುರಾಗಿದೆ. ಕರಾವಳಿಯ ದ.ಕ. ಮತ್ತು ಉಡುಪಿಯಲ್ಲಿ ಅಡಿಕೆ ಮತ್ತು ಭತ್ತದ ಬೆಳೆಗೆ ರೋಗ ಭೀತಿ ಉಂಟಾಗಿದೆ. ಬೀದರ್‌ನಲ್ಲಿ ರೈತರು ಮರು ಬಿತ್ತನೆ ಮಾಡಿ ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಪ್ರಧಾನ ಬೆಳೆಯಾದ ರಾಗಿ ಬಿತ್ತನೆಗೆ ಮುಂದಾಗುತ್ತಿದ್ದಂತೆ, ಉಳುಮೆ ಮಾಡಲು ಆಗದಷ್ಟು ಮಳೆ ನೀರು ಹೊಲಗಳಲ್ಲಿ ನಿಂತಿದೆ. ಹಾಸನ ಜಿಲ್ಲೆಯ ಆಲೂಗಡ್ಡೆ ಬೆಳೆ ಗಡ್ಡೆ ಕಟ್ಟುವ ಹಂತದಲ್ಲಿ ನೀರು ನಿಂತು ಕೊಳೆಯಲಾರಂಭಿಸಿದೆ. ಮಲೆನಾಡಿನಲ್ಲಿ ಕಾಫಿಗೆ ಕೊಳೆರೋಗದ ಆತಂಕ ಎದುರಾಗಿದೆ. ಬೆಳಗಾವಿಯಲ್ಲಿ ಹೆಸರು, ಉದ್ದು, ಹತ್ತಿ, ಮೆಕ್ಕೆಜೋಳ ನೀರುಪಾಲಾಗಿವೆ.

ಪ್ರವಾಹ ಸಂತ್ರಸ್ತರಿಗೆ ಕಾಳಜಿ ಕಿಟ್‌: ಅಶೋಕ್‌
ಬೆಂಗಳೂರು: ಮಳೆಯಿಂದ ಮನೆಗೆ ನೀರು ನುಗ್ಗಿ ಬೇರೆಡೆಗೆ ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ದಿನಸಿ ಪದಾರ್ಥಗಳ “ಕಾಳಜಿ ಕಿಟ್‌’ ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ಪರಿಹಾರ ಕೇಂದ್ರಗಳಲ್ಲಿ ಉಳಿಯದೆ ನೆಂಟರು ಮತ್ತು ಸ್ನೇಹಿತರ ಮನೆಗಳಿಗೆ ಹೋಗಲು ಬಯಸುವವರಿಗೂ ಹತ್ತು ದಿನಕ್ಕೆ ಆಗುವಷ್ಟು ದಿನಸಿ ಪದಾರ್ಥಗಳ ಕಿಟ್‌ ನೀಡಲಾಗುವುದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಕಿಟ್‌ನಲ್ಲಿ ಏನಿರಲಿದೆ?
10 ಕೆ.ಜಿ. ಅಕ್ಕಿ, ತಲಾ 1 ಕೆ.ಜಿ. ತೊಗರಿ ಬೇಳೆ, ಉಪ್ಪು, ಸಕ್ಕರೆ, 1 ಲೀ. ಸನ್‌ಫ್ಲವರ್‌ ಎಣ್ಣೆ, 100 ಗ್ರಾಂ ಖಾರದ ಪುಡಿ, 100 ಗ್ರಾಂ ಸಾಸಿವೆ, 100 ಗ್ರಾಂ ಜೀರಿಗೆ, 100 ಗ್ರಾಂ ಸಾಂಬಾರ್‌ ಪುಡಿ, 100 ಗ್ರಾಂ ಟೀ ಪುಡಿ, 50 ಗ್ರಾಂ ಅರಶಿನ ಪುಡಿ ಇರಲಿದೆ. ಇದು 1 ಸಾವಿರ ರೂ. ಮೌಲ್ಯದ ಕಿಟ್‌ ಆಗಿದೆ. ಪರಿಹಾರ ಕೇಂದ್ರಗಳಿಂದ ಮನೆಗೆ ತೆರಳುವ ಸಂದರ್ಭ ಕುಟುಂಬಗಳಿಗೆ ಈ ಕಿಟ್‌ ನೀಡಲಾಗುವುದು. ಅಲ್ಲದೆ ಸಂತ್ರಸ್ತರ ಮನೆ ಬಾಗಿಲಿಗೂ ತಲುಪಿಸಲಾಗುವುದು. ತಹಸೀಲ್ದಾರ್‌, ಗ್ರಾಮ ಲೆಕ್ಕಿಗ, ಪಿಡಿಒ, ಕಂದಾಯ ನಿರೀಕ್ಷಕರಿಗೆ ಇದರ ಹೊಣೆ ನೀಡಲಾಗುವುದು ಎಂದರು.

ಪೇಸ್ಟ್‌-ಸಾಬೂನು ಪರಿಹಾರ ಕೇಂದ್ರಗಳಲ್ಲಿ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಪೌಷ್ಟಿಕ ಆಹಾರ ನೀಡಬೇಕು. ಮೊಟ್ಟೆ ತಿನ್ನುವವರಿಗೆ ಮೊಟ್ಟೆ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಜತೆಗೆ ಪೇಸ್ಟ್‌, ಬ್ರಶ್‌, ಸಾಬೂನು, ದಿಂಬು, ಬೆಡ್‌ಶೀಟ್‌ ನೀಡಿ ಅದನ್ನು ವಾಪಸ್‌ ಹೋಗುವಾಗ ಜತೆಯಲ್ಲೇ ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು. ಮಳೆಯಿಂದ ತೊಂದರೆಗೊಳಗಾದ ಗ್ರಾಮೀಣ ಭಾಗದವರಿಗೆ ಕೊಡೆ, ಟಾರ್ಚ್‌, ರೈನ್‌ ಕೋಟ್‌ ನೀಡುವ ಬಗ್ಗೆಯೂ ಚಿಂತನೆಯಿದೆ ಎಂದರು.

ಪ್ರವಾಹದಿಂದಾದ ನಷ್ಟದ ಬಗ್ಗೆ ಸಮರ್ಪಕ ಅಂದಾಜು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡ ಲಾಗಿದೆ. ಸಂಪೂರ್ಣ ವರದಿ ಬಂದ ತತ್‌ಕ್ಷಣ ಕೇಂದ್ರ ಸರಕಾರದ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಲಾಗು ವುದು. ದಿಲ್ಲಿಗೆ ತೆರಳಿ ಕೇಂದ್ರ ತಂಡ ಕಳುಹಿಸಲು ಕೋರಿಕೆ ಸಲ್ಲಿಸಲಾಗುವುದು.
– ಆರ್‌. ಅಶೋಕ್‌,
ಕಂದಾಯ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next