ನವದೆಹಲಿ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಬುಧವಾರದಿಂದ 2 ದಿನಗಳ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ತೊಡಗಿದ್ದು, ನಗದು ತೆಗೆಯಲು ಹಾಗೂ ಠೇವಣಿ ಇಡೋದು ಸೇರಿದಂತೆ ದಿನದ ವಹಿವಾಟಿಗೆ ತೊಡಕು ಉಂಟಾಗಿದೆ.
ಖಾಸಗಿ ಬ್ಯಾಂಕ್ ಗಳಾದ ಐಸಿಐಸಿಐ, ಎಚ್ ಡಿ ಎಫ್ ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್ ವಹಿವಾಟು ನಡೆಸುವ ಸಾಧ್ಯತೆ ಇದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ತಿಂಗಳಾಂತ್ಯದ ಎರಡು ದಿನಗಳ ಬ್ಯಾಂಕ್ ನೌಕರರ ಮುಷ್ಕರ ವೇತನ ವಿತ್ ಡ್ರಾ ಹಾಗೂ ಎಟಿಎಂ ಮೇಲೂ ಪರಿಣಾಮ ಬೀರಲಿದ್ದು, ಆನ್ ಲೈನ್ ವಹಿವಾಟಿಗೆ ಗ್ರಾಹಕರು ಮೊರೆ ಹೋಗಬೇಕಾಗಿದೆ.
ಠೇವಣಿ ನವೀಕರಣ, ಸರ್ಕಾರಿ ಖಜಾನೆ ಕೆಲಸ, ಹಣಕಾಸು ಮಾರುಕಟ್ಟೆ ಮೇಲೆ ಬ್ಯಾಂಕ್ ನೌಕರರ ಮುಷ್ಕರದಿಂದ ಪರಿಣಾಮ ಉಂಟಾಗಲಿದೆ ಎಂದು ವರದಿ ವಿವರಿಸಿದೆ.
ಶೇ.2ರಷ್ಟು ವೇತನ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಬ್ಯಾಂಕ್ ಹಾಗೂ ಯೂನಿಯನ್ ಹಲವು ಸುತ್ತಿನ ಮಾತುಕತೆ ನಡೆಸಿದರೂ ಕೂಡಾ ಸಭೆ ವಿಫಲವಾಗಿತ್ತು. ವೇತನವನ್ನು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕೆಂದು ಯೂನೈಟೆಡ್ ಫೋರಂ ಆಫ್ ಬ್ಯಾಂಕಿಂಗ್ ಆಗ್ರಹಿಸಿದೆ.