Advertisement

ಎನ್‌ಕೌಂಟರ್‌: ಐವರು ಉಗ್ರರ ಹತ್ಯೆ

12:30 AM Mar 23, 2019 | |

ಶ್ರೀನಗರ/ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಬಂಡಿಪೋರಾ ಮತ್ತು ಶೋಪಿಯಾನ್‌ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಐವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಆದರೆ, ಈ ಕಾರ್ಯಾಚರಣೆ ವೇಳೆ ಉಗ್ರರ ಒತ್ತೆಯಲ್ಲಿದ್ದ ಬಾಲಕನೊಬ್ಬನೂ ಅಸುನೀಗಿದ್ದಾನೆ.  ಮೃತ ಉಗ್ರರಲ್ಲಿ ಇಬ್ಬರು ಪಾಕಿಸ್ಥಾನಿ ಪ್ರಜೆಗಳಾಗಿದ್ದು, ಲಷ್ಕರ್‌-ಎ-ತೋಯ್ಬಾ ಉಗ್ರ ಸಂಘಟನೆಗೆ ಸೇರಿದವರು ಎಂದು ಭದ್ರತಾ ಪಡೆ ಮಾಹಿತಿ ನೀಡಿದೆ. ಈ ಮೂಲಕ 24 ಗಂಟೆಗಳ ಅವಧಿಯಲ್ಲಿ ಒಟ್ಟು ಏಳು ಭಯೋತ್ಪಾದಕರನ್ನು ಸದೆಬಡಿದಂತಾಗಿದೆ. ಇಬ್ಬರು ನಾಗರಿಕರನ್ನು ಉಗ್ರರು ಒತ್ತೆಯಲ್ಲಿಟ್ಟಿದ್ದರು. ಒಬ್ಬರನ್ನು ಗುರುವಾರ ರಾತ್ರಿಯೇ ರಕ್ಷಿಸಲಾಯಿತು. ಆದರೆ, 12 ವರ್ಷದ ಬಾಲಕನನ್ನು ಉಗ್ರರು ಗುಂಡಿಕ್ಕಿ ಕೊಂದರು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

Advertisement

ಇದು ಜಿಹಾದ್‌ ಅಲ್ಲ: ಒತ್ತೆಯಲ್ಲಿದ್ದ 12ರ ಬಾಲಕ ಆತಿಫ್ ಮಿರ್‌ನನ್ನು ಬಿಡುಗಡೆ ಮಾಡುವಂತೆ ಗ್ರಾಮದ ಹಿರಿಯರೊಬ್ಬರು ಒತ್ತಾಯಿಸಿದ ವೀಡಿಯೋವೊಂದು ಶುಕ್ರವಾರ ಬಹಿರಂಗವಾಗಿದೆ. ಅದರಲ್ಲಿ ಅವರು, “ನೀವು ಮಾಡುತ್ತಿರುವುದು ಜಿಹಾದ್‌(ಧರ್ಮ ಯುದ್ಧ) ಅಲ್ಲ, ಜಹಾಲತ್‌ (ವಿವೇಕರಹಿತ ಕ್ರಮ)’ ಎಂದು ಉಗ್ರರಿಗೆ ಹೇಳಿರುವುದು ಸೆರೆಯಾಗಿದೆ. ಆತಿಫ್ನ ಮನೆಯೊಳಗೆ ನುಗ್ಗಿದ್ದ ಉಗ್ರರು, ಮೊದಲಿಗೆ ಆತನ ಸಹೋದರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾದರು. ಆದರೆ, ಕುಟುಂಬ ಸದಸ್ಯರು ಹರಸಾಹಸ ಪಟ್ಟು ಅಲ್ಲಿಂದ ತಪ್ಪಿಸಿಕೊಳ್ಳಲು ಆಕೆಗೆ ನೆರವಾದರು. ಇದರಿಂದ ಕ್ರುದ್ಧರಾದ ಉಗ್ರರು, ಆ ಮನೆಯ ಸದಸ್ಯರ ಮೇಲೆ ಗಂಭೀರ ಹಲ್ಲೆ ನಡೆಸಿದರು. ಕೊನೆಗೆ ಭದ್ರತಾ ಪಡೆಯ ಸಹಾಯದಿಂದ ಎಲ್ಲರನ್ನೂ ಹೊರತರಲಾಯಿತಾದರೂ, ಬಾಲಕ ಮಾತ್ರ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಾಸ್ಟರ್‌ಮೈಂಡ್‌ನ‌ ಆಪ್ತ ಸೆರೆ: ಫೆ.14ರ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌, ಜೈಶ್‌ ಉಗ್ರ ಮುದಸ್ಸಿರ್‌ನ ಆಪ್ತ ಸಜ್ಜದ್‌ ಖಾನ್‌(27) ಎಂಬಾತನನ್ನು ದಿಲ್ಲಿಯ ಲಜಪತ್‌ರಾಯ್‌ ಮಾರು ಕಟ್ಟೆ ಪ್ರದೇಶದಲ್ಲಿ ಗುರುವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾ ಗಿದ್ದು, ಮಾ. 29ರವರೆಗೆ ಎನ್‌ಐಎ ವಶಕ್ಕೊಪ್ಪಿಸಿ ಕೋರ್ಟ್‌ ಆದೇಶ ನೀಡಿದೆ.

14.40 ಲಕ್ಷ ರೂ. ದಂಡ: ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ(ಫೆಮಾ) ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿ ಕಾಶ್ಮೀರ ಮೂಲದ ಪ್ರತ್ಯೇಕತವಾದಿ ಸೈಯದ್‌ ಅಲಿ ಶಾ ಗಿಲಾನಿಗೆ ಜಾರಿ ನಿರ್ದೇಶನಾಲಯ 14.40 ಲಕ್ಷ ರೂ. ದಂಡ ವಿಧಿಸಿದೆ. ಜತೆಗೆ ಆತನ ಬಳಿಯಿದ್ದ 6.8 ಲಕ್ಷ ರೂ.ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಪಾಕ್‌ ರಾಷ್ಟ್ರೀಯ ದಿನದ ಕಾರ್ಯಕ್ರಮಕ್ಕೆ ಬಹಿಷ್ಕಾರ
ಉಗ್ರವಾದ, ಪ್ರತ್ಯೇಕತಾವಾದದ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಲೇ ಕುತಂತ್ರಿ ಬುದ್ಧಿ ತೋರಿಸುತ್ತಿರುವಂಥ ಪಾಕಿಸ್ಥಾನದ ರಾಷ್ಟ್ರೀಯ ದಿನದ ಕಾರ್ಯಕ್ರಮವನ್ನು ಬಹಿಷ್ಕರಿಸಲು ಭಾರತ ನಿರ್ಧರಿಸಿದೆ. ಕಾಶ್ಮೀರದ ಪ್ರತ್ಯೇಕತಾ ವಾದಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವ ಹಿನ್ನೆಲೆ ಯಲ್ಲಿ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿದೆ. ಶನಿವಾರ ದಿಲ್ಲಿಯಲ್ಲಿರುವ ಪಾಕ್‌ ಹೈಕಮಿಷನ್‌ನಲ್ಲಿ ಕಾರ್ಯಕ್ರಮ ಜರುಗಲಿದ್ದು, ಸರಕಾರದ ಪ್ರತಿನಿಧಿ ಯನ್ನು ಕಳುಹಿಸಲೇ ಇರಲು ತೀರ್ಮಾನಿಸಲಾಗಿದೆ. ಈ ನಡುವೆಯೇ, ಶುಕ್ರವಾರ ಪಾಕ್‌ನ ಮಾಧ್ಯಮಗಳ ಜತೆ ಮಾತನಾಡಿರುವ ಪ್ರಧಾನಿ ಇಮ್ರಾನ್‌ ಖಾನ್‌, “ಪಾಕಿಸ್ಥಾನದಲ್ಲಿ ಜಿಹಾದಿ ಸಂಘಟನೆಗಳು ಹಾಗೂ ಜಿಹಾದಿ ಸಂಸ್ಕೃತಿಗೆ ಅವಕಾಶವಿಲ್ಲ’ ಎಂದು ಘೋಷಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next