Advertisement

ವಿಸ್ಮಯ: ಮೆದುಳು ಕುರಿತ 5 ರಹಸ್ಯಗಳು

03:50 AM Mar 16, 2017 | |

ಜಗತ್ತಿನಲ್ಲಿರುವ ಸೂಪರ್‌ ಕಂಪ್ಯೂಟರ್‌ಗಳಿಗೆ ಸ್ಫೂರ್ತಿ ನಮ್ಮಲ್ಲಿರುವ ಮೆದುಳು. ಈ ಶಕ್ತಿಶಾಲಿ ಸೂಪರ್‌ ಕಂಪ್ಯೂಟರ್‌ಗಳು ಮೆದುಳಿಗಿಂತ ವೇಗವಾಗಿ ಲೆಕ್ಕಾಚಾರ ಮಾಡಬಲ್ಲದಾದರೂ ಮೆದುಳಿಗೆ ಸರಿಸಾಟಿಯಾಗದು. ಮೆದುಳು ಅಷ್ಟು ಸಂಕೀರ್ಣವಾದುದು. ಹೀಗಿದ್ದರೂ ಮೆದುಳಿನಂತೆ ಕಾರ್ಯ ನಿರ್ವಹಿಸುವ ಯಂತ್ರವನ್ನು ಕಂಡುಹಿಡಿಯುವ ಮಾನವನ ಪ್ರಯತ್ನ ಇನ್ನೂ ನಡೆಯುತ್ತಿದೆ. ಈ ಹೊತ್ತಿನಲ್ಲಿ ಮೆದುಳು ಕುರಿತ 5 ವಿಷಯಗಳು ಇಲ್ಲಿವೆ. 

Advertisement

1. ಮೆದುಳಿನಲ್ಲಿ ವಿದ್ಯುತ್‌ ಹರಿಯುತ್ತಿದೆ!
ಮೆದುಳಿನಲ್ಲಿ ವಿದ್ಯುತ್‌ ಎಂದ ಮಾತ್ರಕ್ಕೆ ಇದು ಪ್ರಾಣಕ್ಕೆ ಆಪತ್ತು ತರುವಷ್ಟು ಪ್ರಮಾಣದ ವಿದ್ಯುತ್‌ ಅಲ್ಲ. ಚಿಕ್ಕ ಪ್ರಮಾಣದ್ದು. ನಮ್ಮ ದೇಹ ಎಲ್ಲಾ ಚಟುವಟಿಕೆಗಳು, ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕೆಂದರೆ ಮೆದುಳಿನಲ್ಲಿರುವ ಕೋಶಗಳಾದ ನ್ಯೂರಾನ್‌ಗಳು ರಾಸಾಯನಿಕ ಮತ್ತು ವಿದ್ಯುತ್‌ ತರಂಗಗಳ ಮೂಲಕ ಸೂಚನೆಗಳನ್ನು ರವಾನಿಸುತ್ತವೆ. ಯೋಚನಾ ಪ್ರಕ್ರಿಯೆಗೂ ನ್ಯೂರಾನ್‌ಗಳು ವಿದ್ಯುತ್‌ ತರಂಗಗಳನ್ನು ಪ್ರವಹಿಸುತ್ತವೆ.

2.  ಮೆದುಳು- ಮಾಹಿತಿಗಳಿಂದ ತುಂಬಿರುವ ಲೈಬ್ರರಿ
ಮೆದುಳು ನಾವು ಎಣಿಸಲಾರದಷ್ಟು ಪ್ರಮಾಣದ ಮಾಹಿತಿ- ವಿವರಗಳನ್ನು ದಾಖಲಿಸಿಟ್ಟುಕೊಂಡಿರುತ್ತದೆ. ಗ್ರಂಥಾಲಯದಲ್ಲಿ ಪುಸ್ತಕವನ್ನು ಕ್ರಮವಾಗಿ ಜೋಡಿಸಿಟ್ಟಂತೆ ಮಾಹಿತಿಗಳನ್ನು ಕ್ರಮವಾಗಿ ಶೇಖರಿಸಿಡುತ್ತದೆ ಮೆದುಳು. ಅವಶ್ಯಕತೆ ಬಿದ್ದಾಗ, ಬೇಕಾದ ಮಾಹಿತಿಯನ್ನು ಹೆಕ್ಕಿ ಕೊಡುತ್ತದೆ. ನಮಗೆ ಬೇಕಾದ ಪುಸ್ತಕವನ್ನು ಕ್ಷಣಾರ್ಧದಲ್ಲಿಯೇ ಗ್ರಂಥಾಲಯದ ಶೆಲು#ಗಳಲ್ಲಿ ಹುಡುಕಿ ಕೊಡುವ ಗ್ರಂಥಪಾಲಕನಂತೆ.

3. ಪುಟ್ಟದಾದರೂ ಕೀರ್ತಿ ದೊಡ್ಡದು
ಮೆದುಳಿನ ಗಾತ್ರ ನಮ್ಮ ಮುಷ್ಟಿಯಷ್ಟು. ಅದರ ತೂಕ ಸುಮಾರು ಒಂದೂ ಕಾಲು ಕೆ.ಜಿಯಷ್ಟು. ಇಷ್ಟು ಪುಟ್ಟ ಅಂಗದಲ್ಲಿರುವ ರಕ್ತನಾಳಗಳನ್ನು ಉದ್ದಕ್ಕೆ ಜೋಡಿಸುತ್ತಾ ಹೋದರೆ 400 ಮೈಲಿಗಳೇ ಆಗುತ್ತವೆ. ಮತ್ತು ಹಿಂದೆ ಹೇಳಿದ ನ್ಯೂರಾನ್‌ಗಳು ಕೋಟ್ಯಂತರ ಸಂಖ್ಯೆಯಲ್ಲಿವೆ. ಹೀಗಾಗಿ ಮೆದುಳು ಎಷ್ಟು ಪುಟ್ಟದೋ, ಅಷ್ಟೇ ಸಂಕೀರ್ಣ ಕೂಡ.

4. ತುಂಬಾ ಶ್ರಮಜೀವಿ
ಮೆದುಳು ದಿನದ 24 ಗಂಟೆಗಳ ಕಾಲವೂ ಅವಿರತವಾಗಿ ಕೆಲಸ ಮಾಡುತ್ತಿರುತ್ತದೆ. ಎಚ್ಚರವಿದ್ದಾಗಲೂ, ನಿದ್ದೆ ಮಾಡುವಾಗಲೂ. ವಿಜ್ಞಾನಿಗಳು ಅಂದಾಜಿಸುವಂತೆ ವ್ಯಕ್ತಿಯೊಬ್ಬ ದಿನವೊಂದಕ್ಕೆ 70,000 ಯೋಚನೆಗಳನ್ನು ಮಾಡುತ್ತಾನಂತೆ.

Advertisement

5. ಮೆದುಳಿನಲ್ಲೊಂದು ಸಿ.ಪಿ.ಯು
ಹೊಸ ಭಾಷೆ ಕಲಿಯುವುದು, ವ್ಯಾಯಾಮದಂತಹ ಕಸರತ್ತಿನ ಚಟುವಟಿಕೆಗಳಿಂದ ಮೆದುಳಲ್ಲಿರುವ ಗ್ರೇ ಮ್ಯಾಟರ್‌ ಎನ್ನುವ ಅಂಗಾಂಶದ ಸಾಮರ್ಥಯವನ್ನು ಹೆಚ್ಚಿಸುತ್ತದೆ. ಗ್ರೇ ಮ್ಯಾಟರ್‌ ಅಂಗಾಂಶ ಕಂಪ್ಯೂಟರ್‌ನ ಸಿ.ಪಿ.ಯು ಇದ್ದ ಹಾಗೆ. ಮೆದುಳಿನಲ್ಲಿ ಮಾಹಿತಿಗಳನ್ನು ಹೆಕ್ಕಿಕೊಡುವ ಕೆಲಸ ಮಾಡುವುದು ಇದೇ. ಗ್ರೇ ಮ್ಯಾಟರ್‌ ಶಕ್ತಿ ವೃದ್ದಿಯಾದ ಹಾಗೆ ಮೆದುಳು ಚುರುಕಾಗುತ್ತದೆ. ಬುದ್ಧಿಮತ್ತೆ ಹೆಚ್ಚುತ್ತದೆ.

ಹರ್ಷವರ್ಧನ್‌, ಸುಳ್ಯ
 

Advertisement

Udayavani is now on Telegram. Click here to join our channel and stay updated with the latest news.

Next