ಯಾದಗಿರಿ: ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಭತ್ತ ಖರೀದಿಸಲು ಐದು ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯ ಆರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸುವ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಯಾದಗಿರಿ, ಸುರಪುರ ಹಾಗೂ ಶಹಾಪುರದ ಎಂಪಿಎಂಸಿಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು. ಬೇಡಿಕೆ ಮೇರೆಗೆ ಈ ಬಾರಿ ಹೆಚ್ಚುವರಿಯಾಗಿ ನಾಯಕಲ್ ಹಾಗೂ ವಡೇಗೆರಾಗಳಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು. ರೈತರು ನ.30ರಿಂದ ಡಿಸೆಂಬರ್ 30ರ ವರೆಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.
2020-21ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ 1.10 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಆದೇಶಿಸಿದೆ. ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 1868 ರೂ.ಗಳು ಹಾಗೂ ಗ್ರೇಡ್-ಎ ಭತ್ತ ಪ್ರತಿ ಕ್ವಿಂಟಲ್‌ಗೆ 1888 ರೂ.ಗಳ ಬೆಲೆ ನಿಗದಿಯಾಗಿದೆ. ಖರೀದಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವನ್ನು ಜಿಲ್ಲೆಯ ಸಂಗ್ರಹಣಾ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 32 ಅಕ್ಕಿ ಗಿರಣಿಗಳಿದ್ದು, ಅವುಗಳಲ್ಲಿ ಕಾರ್ಯನಿರತವಾಗಿರುವ ಗಿರಣಿಗಳನ್ನು ಪರಿಶೀಲಿಸಿ ವರದಿ ನೀಡಬೇಕು. ಅವುಗಳು ಹಲ್ಲಿಂಗ್ ಹಾಗೂ ಶೇಖರಣಾ ಸಾಮರ್ಥ್ಯಕ್ಕನುಗುಣವಾಗಿ ಸಂಗ್ರಹಣಾ ಕಾರ್ಯ ಮಾಡಬೇಕು. ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಪ್ರಚಾರ ಮಾಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಮಮದಾಪುರಗೆ ತಿಳಿಸಿದರು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರ ವಿಜಯಲಕ್ಷ್ಮೀ ಶಿವಾಜಿ, ಎಂಪಿಎಂಸಿ ಸಹಾಯಕ ನಿರ್ದೇಶಕ ಭೀಮರಾಯ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಇದ್ದರು.