Advertisement

ಹಂಪಿ ಉತ್ಸವಕ್ಕೆ 5 ವೇದಿಕೆ ನಿರ್ಮಾಣ

11:25 AM Feb 22, 2019 | Team Udayavani |

ಬಳ್ಳಾರಿ: ಈ ಬಾರಿಯ ಹಂಪಿ ಉತ್ಸವವನ್ನು ಮಾ. 2 ಮತ್ತು 3 ರಂದು ಆಚರಿಸಲಾಗುತ್ತಿದ್ದು, ಹಲವು ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಿ ಉತ್ಸವವನ್ನು ಜನೋತ್ಸವ ವಾಗಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಹಂಪಿ ಉತ್ಸವ ಆಚರಣೆ ಸಂಬಂಧ ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ತೀವ್ರ ಬರ ಇರುವುದರಿಂದ, ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದ್ದರೂ,
ಈ ಬಾರಿ ವಿಜಯನಗರ ವೈಭವವನ್ನು ಬಿಂಬಿಸುವ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಹಂಪಿ ಉತ್ಸವದ ಅಂಗವಾಗಿ ಈ ಬಾರಿ 5 ವೇದಿಕೆಗಳನ್ನು ನಿರ್ಮಿಸಿ, ರಾಜ್ಯ ಮಟ್ಟದ ಮತ್ತು ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬಸವಣ್ಣ ಹಂಪಿ ಬಜಾರ್‌, ವಿರೂಪಾಕ್ಷೇಶ್ವರ ದೇವಸ್ಥಾನ ಆವರಣ, ಕಡಲೆಕಾಳು, ಸಾಸಿವೆಕಾಳು ಗಣಪ ಮುಂಭಾಗ ಹಾಗೂ ರತ್ನಕೂಟ ಮಹದ್ವಾರ ಬಳಿ ಸೇರಿದಂತೆ ಒಟ್ಟು ಐದು ವೇದಿಕೆಗಳಲ್ಲಿ ಹಂಪಿ ಉತ್ಸವ ಆಚರಿಸಲಾಗುವುದು ಎಂದರು.

ಉತ್ಸವ ಅಂಗವಾಗಿ ಫೆ.22 ರಿಂದಲೇ ಹಲವು ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಿ, ಸ್ಥಳೀಯರೇ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡುವ ಮೂಲಕ ಹಂಪಿ ಉತ್ಸವವನ್ನು ಜನೋತ್ಸವವನ್ನಾಗಿಸಲಾಗುವುದು.
 
ಪ್ರಮುಖ ವೇದಿಕೆಯಲ್ಲಿ ಮಾ. 2 ರಂದು ಕನ್ನಡ ಚಿತ್ರರಂಗದ ಖ್ಯಾತ ಗಾಯಕ ರಾಜೇಶ್‌ ಕೃಷ್ಣನ್‌ ಅವರ ತಂಡ ಹಾಗೂ ಮಾ.3 ರಂದು ಮತ್ತೂಬ್ಬ ಖ್ಯಾತ ಗಾಯಕ ವಿಜಯಪ್ರಕಾಶ್‌ ಅವರ ತಂಡದಿಂದ ರಸಮಂಜರಿ ಕಾರ್ಯಕ್ರಮ ಈ ಬಾರಿಯ ಆಕರ್ಷಣೆಯಾಗಲಿದೆ.

ಉಳಿದಂತೆ ರಾಜ್ಯ ಮತ್ತು ಸ್ಥಳೀಯ ಮಟ್ಟದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಎಲ್ಲ ಸಾರ್ವಜನಿಕರು, ಕನ್ನಡ ನಾಡಿನ ಹೆಮ್ಮೆಯ ಅಭಿಮಾನಿಗಳು ಎಲ್ಲರೂ ಹಂಪಿ ಉತ್ಸವದಲ್ಲಿ ಪಾಲ್ಗೊಂಡು, ಉತ್ಸವವನ್ನು ಯಶಸ್ವಿಯನ್ನಾಗಿಸಬೇಕು ಎಂದು ಕೋರಿದರು.
 
ಸಂಸದ ವಿ.ಎಸ್‌. ಉಗ್ರಪ್ಪ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಜಿಲ್ಲೆಯ ಕಲಾವಿದರು, ನೃತ್ಯ ಪಟುಗಳು ಸೇರಿದಂತೆ ವಿವಿಧ ಪ್ರತಿಭೆಗಳನ್ನು ಗುರುತಿಸಿ, ಉತ್ಸವಕ್ಕೆ ಆಹ್ವಾನಿಸಿ, ಕಾರ್ಯಕ್ರಮಗಳನ್ನು ನೀಡಬೇಕು. ಈ ಬಾರಿ ಹೊಸತನದ ಕಾರ್ಯಕ್ರಮ
ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದರು.

ಡಿಸಿ ಡಾ. ವಿ.ರಾಮ್‌ ಪ್ರಸಾತ್‌ ಮನೋಹರ್‌, ಜಿಪಂ ಸಿಇಒ ಕೆ.ನಿತೀಶ್‌, ಎಸ್‌ಪಿ ಅರುಣ್‌ ರಂಗರಾಜನ್‌, ಪಾಲಿಕೆ ಮೇಯರ್‌ ಆರ್‌.ಸುಶೀಲಾಬಾಯಿ ಇತರರು ಹಾಜರಿದ್ದರು. 

Advertisement

ತಲೆಯಲ್ಲಿ ಬುದ್ಧಿ ಇದೆಯಾ….!
ಹಂಪಿ ಉತ್ಸವದಲ್ಲಿ ಆಯೋಜಿಸಲಾಗುವ ತುಂಗಾ ಆರತಿ ಪ್ರಸ್ತಾಪಿಸಿದ ಸಂಸದ ವಿ.ಎಸ್‌.ಉಗ್ರಪ್ಪ, ತುಂಗಾ ಆರತಿಯನ್ನು ಕಳೆದ ಸಭೆಯಲ್ಲಿ ಬದಲಾವಣೆ ಮಾಡುವಂತೆ ಸೂಚಿಸಲಾಗಿತ್ತು. ಆ ಬಗ್ಗೆ ಏನು ಮಾಡಿದ್ದೀರಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್‌ ಅವರನ್ನು ಪ್ರಶ್ನಿಸಿದರು. ಅಲ್ಲಿ ಹರಿಯುತ್ತಿರುವ ನದಿ ಯಾವುದು? ಕಳೆದ ಸಭೆಯಲ್ಲಿ ನಾನು ಏನು ಹೇಳಿದ್ದೆ? ಎಂದೆಲ್ಲ ಪ್ರಶ್ನಿಸಿದರು. ಈ ವೇಳೆ ನಾಗರಾಜ್‌ ಅವರು ಸಮರ್ಪಕವಾಗಿ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ತಲೆಯಲ್ಲಿ ಬುದ್ಧಿ ಇದೆಯಾ ಎಂದು ತರಾಟೆಗೆ ತೆಗೆದುಕೊಂಡರು. ನಂತರ ಸಭೆಯ ಕೊನೆಯಲ್ಲಿ ಡಿಸಿ ರಾಮ್‌ ಪ್ರಸಾತ್‌ ಮನೋಹರ್‌ ಅವರು, ಸಂಸದರ ಸಲಹೆಯಂತೆ ತುಂಗಾ ಆರತಿಯನ್ನು ತುಂಗಭದ್ರಾ ಆರತಿಯನ್ನಾಗಿ ಬದಲಿಸುವುದಾಗಿ ತಿಳಿಸಿದರು.

ಅಧಿಕಾರಿಯಿಂದ ಆದೇಶ ಪತ್ರ ಓದಿಸಿದ ಉಗ್ರಪ್ಪ ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕ ಕಾಳಿಮುತ್ತು ಅವರನ್ನು ಹಂಪಿಯಲ್ಲಿ ಪ್ರವಾಸಿಗರಿಂದ ಸಂಗ್ರಹವಾಗುವ ಶುಲ್ಕದ ಹಣವನ್ನು ಯಾವುದಕ್ಕೆ ಬಳಸುತ್ತೀರಿ ಎಂದು ಸಂಸದ ಉಗ್ರಪ್ಪ ಪ್ರಶ್ನಿಸಿದರು. ಇದಕ್ಕೆ ಸಮರ್ಪಕ ಉತ್ತರ ನೀಡದ
ಹಿನ್ನೆಲೆಯಲ್ಲಿ ಇಲಾಖೆಯ ಆದೇಶ ಪ್ರತಿಯನ್ನು ಸಭೆಯಲ್ಲೇ ಓದಿಸಿದರು. ಬಳಿಕ ಪ್ರವಾಸಿಗರಿಂದ ಸಂಗ್ರಹಿಸಿದ ಹಣವನ್ನು ಅವರಿಗೆ ಮೂಲಸೌಲಭ್ಯ ಕಲ್ಪಿಸುವ ಸಲುವಾಗಿಯಾದರೂ ಬಳಸಿ ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next