– ಭಯೋತ್ಪಾದನೆ ವಿರುದ್ಧ ಕುವೈತ್ ಬಿಗಿ ನಿಲುವು
– 2015ರಲ್ಲಿ ಶಿಯಾ ಮಸೀದಿ ಸ್ಫೋಟದ ನಂತರ ಕಠಿಣ ಧೋರಣೆ
– ದಿಟ್ಟ ನಿರ್ಧಾರ ಕೈಗೊಂಡ ಮೊದಲ ಗಲ್ಫ್ ರಾಷ್ಟ್ರ ಕುವೈತ್
– ಪಾಕಿಸ್ತಾನ ಕುರಿತೂ ಧೋರಣೆ ಸಡಿಲಿಸದ ಮುಸ್ಲಿಂ ರಾಷ್ಟ್ರ
ಕುವೈತ್: ಭಯೋತ್ಪಾದನೆಯ ಕಾರಣದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಳು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ ನಿಷೇಧ ಹೇರಿರುವುದು ಜಾಗತಿಕ ಮಟ್ಟದಲ್ಲಿ ಟೀಕೆಗೊಳಗಾಗಿದೆ. ಸ್ವತಃ ಅಮೆರಿಕದಲ್ಲಿಯೇ ಈ ಕುರಿತು ಭಾರೀ ವಿರೋಧ ವ್ಯಕ್ತವಾಗಿದೆ. ಆದರೆ, ಸ್ವತಃ ಮುಸ್ಲಿಂ ಬಹುಸಂಖ್ಯಾತ ಗಲ್ಫ್ ರಾಷ್ಟ್ರವಾಗಿರುವ ಕುವೈತ್ ಈಗ ಟ್ರಂಪ್ ಮಾದರಿಯನ್ನು ಅನುಸರಿಸಿದೆ!
Advertisement
ಪಾಕಿಸ್ತಾನ, ಸಿರಿಯಾ, ಇರಾಕ್, ಅಫ್ಘಾನಿಸ್ತಾನ ಹಾಗೂ ಇರಾನ್‌ನ ರಾಷ್ಟ್ರಗಳ ನಾಗರಿಕರಿಗೆ ವೀಸಾ ಕೊಡದೇ ಇರಲು ಕುವೈತ್ ಸರ್ಕಾರ ನಿರ್ಧರಿಸಿದೆ. ಇದರಿಂದ ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಅಮೆರಿಕ ಆರಂಭಿಸಿರುವ ಹೋರಾಟಕ್ಕೆ ಕುವೈತ್ ಕೈಗೂಡಿಸಿದಂತಾಗಿದೆ. ಅಲ್ಲದೇ, ಭಯೋತ್ಪಾದನೆ ಉತ್ಪಾದಿಸುತ್ತಿರುವ ದೇಶಗಳು ಎನ್ನಲಾದ ಮುಸ್ಲಿಂ ರಾಷ್ಟ್ರಗಳ ವಿರುದ್ಧ ಕಠಿಣ ನಿಲುವು ತಳೆದ ಪ್ರಥಮ ಗಲ್ಫ್ ರಾಷ್ಟ್ರ ಎಂಬ ಖ್ಯಾತಿಗೂ ಕುವೈತ್ ಒಳಗಾಗಿದೆ.ಸಿರಿಯಾ ಹಾಗೂ ಇರಾಕ್‌ನಲ್ಲಿ ಸುನ್ನಿ ಉಗ್ರರಿಂದ ಮಾರಣ ಹೋಮ ಭುಗಿಲೆದ್ದಾಗಲೂ ಅಲ್ಲಿಂದ ಜೀವ ಉಳಿಸಿಕೊಳ್ಳಲು ಓಡಿಬಂದ ನಿರಾಶ್ರಿತರಿಗೆ ಕುವೈತ್ ತನ್ನ ಭೂಮಿಯೊಳಗೆ ಪ್ರವೇಶ ನಿರಾಕರಿಸಿತ್ತು. ಬಹುತೇಕ ಗಲ್ಫ್ ರಾಷ್ಟ್ರಗಳು ನಿರಾಶ್ರಿತರಿಗೆ ಆಶ್ರಯ ಕೊಡಲು ಮನಸ್ಸು ಮಾಡಿರಲಿಲ್ಲ. ಈ ಕುರಿತು ಜಾಗತಿಕ ಮಟ್ಟದಲ್ಲಿ ಭಾರೀ ಟೀಕೆ ವ್ಯಕ್ತವಾದರೂ ಪ್ರತಿಕ್ರಿಯಿಸಿರಲಿಲ್ಲ. ಆಗ ಯೂರೋಪಿಯನ್ ಒಕ್ಕೂಟ, ಅಮೆರಿಕ ಹಾಗೂ ಕೆನಡಾ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳು ಆಶ್ರಯ ನೀಡಲು ಮುಂದೆ ಬಂದಿದ್ದವು.