ಕುವೈಟ್: ಜೀವನಕ್ಕಾಗಿ ಕೆಲಸಕ್ಕೆಂದು ಕುವೈಟ್ ಗೆ ತೆರಳಿದ್ದ ಆಂಧ್ರಪ್ರದೇಶದ ಮಹಿಳೆಯೊಬ್ಬಳನ್ನು ಉದ್ಯೋಗ ನೀಡಿದ ವ್ಯಕ್ತಿ ಆಕೆಯನ್ನು ಕೂಡಿ ಹಾಕಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿರುವ ವಿಡಿಯೋ ಇದೀಗ ಹರಿದಾಡುತ್ತಿದೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕವಿತಾ ಎಂಬಾಕೆ, ಆಂಧ್ರಪ್ರದೇಶ ಸಚಿವ ರಾಮ್ ಪ್ರಸಾದ್ ರೆಡ್ಡಿ ಅವರಲ್ಲಿ ನನ್ನನ್ನು ಈ ಕಿರುಕುಳದಿಂದ ರಕ್ಷಿಸಿ…ದಯವಿಟ್ಟು ನನ್ನ ರಕ್ಷಿಸಿ ಸರ್ ಎಂದು ವಿಡಿಯೋದಲ್ಲಿ ವಿನಂತಿಸಿಕೊಂಡಿದ್ದಾರೆ.
“ನನಗೆ ಇಲ್ಲಿ ಚಿತ್ರಹಿಂಸೆ ನೀಡಲಾಗುತ್ತಿದೆ. ನನಗೆ ಇಬ್ಬರು ಮಕ್ಕಳು, ವಿಕಲಚೇತನ ಪತಿ ಊರಲ್ಲಿದ್ದಾರೆ. ಇವರನ್ನು ಸಾಕುವ ಹೊಣೆಯಿಂದ ಕುವೈಟ್ ಗೆ ಕೆಲಸಕ್ಕಾಗಿ ಬಂದಿದ್ದು, ನನಗಿಲ್ಲಿ ದಾರಿ ಕಾಣದಂತಾಗಿದೆ” ಎಂದು ವಿಡಿಯೋದಲ್ಲಿ ಅಲವತ್ತುಕೊಂಡಿದ್ದಾರೆ.
ಕುವೈಟ್ ನಲ್ಲಿ ಉದ್ಯೋಗ ನೀಡಿದ ವ್ಯಕ್ತಿ ಕವಿತಾಳನ್ನು ಕೋಣೆಯಲ್ಲಿ ಕೂಡಿ ಹಾಕಿದ್ದು, ಊಟೋಪಚಾರವನ್ನು ನೀಡುತ್ತಿಲ್ಲ. ತನ್ನನ್ನು ಆತ ಗೃಹಬಂಧನದಲ್ಲಿ ಇಟ್ಟಿರುವುದಾಗಿ ಕವಿತಾ ದೂರಿದ್ದು, ಆಕೆಯ ಟ್ರಾವೆಲ್ ಏಜೆಂಟ್, ಆಕೆಗೆ ಬೆದರಿಕೆಯೊಡ್ಡಿ, ಫೋನ್ ಅನ್ನು ಬ್ಲಾಕ್ ಮಾಡಿ ಕುಟುಂಬಸ್ಥರು ಸೇರಿದಂತೆ ಯಾರ ಜತೆಗೂ ಮಾತನಾಡದಂತೆ ನಿರ್ಬಂಧಿಸಿ ಇಟ್ಟಿರುವುದಾಗಿ ಆರೋಪಿಸಿದ್ದಾರೆ.
ಕವಿತಾ ಅವರು ವಿಡಿಯೋದಲ್ಲಿ ಮನವಿ ಮಾಡಿದಂತೆ ಸಚಿವ ರೆಡ್ಡಿ, ಕೇಂದ್ರ ಸಚಿವ ಕೊಂಡಪಲ್ಲಿ ಶ್ರೀನಿವಾಸ್ ಅವರಿಗೆ ಪತ್ರ ಬರೆದು, ಕವಿತಾ ಸುರಕ್ಷಿತವಾಗಿ ಕುವೈಟ್ ನಿಂದ ಭಾರತಕ್ಕೆ ಮರಳಲು ನೆರವು ನೀಡಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ. ಕವಿತಾಳ ರೀತಿ ಗಲ್ಫ್ ದೇಶಗಳಲ್ಲಿ ಹೀಗಾಗಿ ನೂರಾರು ಮಂದಿ ಕಿರುಕುಳ ಅನುಭವಿಸುತ್ತಿರುವುದಾಗಿ ವರದಿ ತಿಳಿಸಿದೆ.