ಹಾಸನ: ನಿಶ್ಚಿತಾರ್ಥವಾಗಿದ್ದ ಹುಡುಗನನ್ನು ಬಿಟ್ಟು ಪ್ರೀತಿಸಿದ ಯುವಕನನ್ನು ಮಗಳು ವಿವಾಹವಾದಳು ಎಂಬ ಕಾರಣಕ್ಕೆ 5 ಲಕ್ಷ ರೂ.ಸುಪಾರಿ ನೀಡಿ ಮಾವನೇ ಅಳಿಯನ ಹತ್ಯೆ ಮಾಡಿಸಿರುವ ಪ್ರಕರಣವನ್ನು ಭೇದಿಸಿರುವ ಹೊಳೆನರಸೀಪುರ ನಗರ ಠಾಣೆ ಪೊಲೀಸರು, ಈ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೊತ್ತತ್ತಿ ಹೋಬಳಿಯ ಸಿದ್ದಯ್ಯನಕೊಪ್ಪಲು ಗ್ರಾಮದ ಮಂಜು ಹತ್ಯೆಯಾದ ಯುವಕ. ಕೊಲೆಗೆ ಸುಪಾರಿ ನೀಡಿದ್ದ ಸಿದ್ದಯ್ಯನಕೊಪ್ಪಲು ಗ್ರಾಮದ ದೇವರಾಜು, ಸಂಜಯ್, ಯಲಿಯೂರು ಸರ್ಕಲ್‌ನ ಯೋಗೇಶ್, ಕಾಳೇನಹಳ್ಳಿ ಗ್ರಾಮದ ರೌಡಿ ಶೀಟರ್ ಮಂಜು, ಹಿಂಡುವಾಳು ಗ್ರಾಮದ ಚೆಲುವ , ಮಾಯಣ್ಣನಕೊಪ್ಪಲು ಗ್ರಾಮದ ನಂದನ್ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಚಾಕು, ಮುಂಗಡ ಹಣ 1,10 ಲಕ್ಷ ರೂ, ಕಾರು ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ರಾಮ್ ನಿವಾಸ್ ಸೆಪೆಟ್ ಅವರು ಸುದ್ದಿಗೋಷ್ಠಿಯಲ್ಲಿ ಭಾನುವಾರ ವಿವರ ನೀಡಿದರು.
ಪ್ರಕರಣದ ವಿವರ: ಸಿದ್ದಯ್ಯ ಕೊಪ್ಪಲು ಗ್ರಾಮದ ಹಾಲಿನ ಡೇರಿಯಲ್ಲಿ ಕಾರ್ಯದರ್ಶಿಯಾಗಿರುವ ದೇವರಾಜು ಅವರ ಮಗಳಿಗೆ ಮಂಡ್ಯದ ರುದ್ರಾಕ್ಷಿಪುರದ ಕಿರಣ್ ಎಂಬಾತನ ಜತೆ ಮದುವೆ ನಿಶ್ಚಯವಾಗಿತ್ತು. ಆದರೆ, ಮಗಳು ತಾನು ಪ್ರೀತಿಸುತ್ತಿದ್ದ ಅದೇ ಗ್ರಾಮದ ಮಂಜು ಎಂಬಾತನ ಜತೆ ಓಡಿ ಹೋಗಿ 45 ದಿನಗಳ ಹಿಂದೆ ಮದುವೆಯಾಗಿದ್ದಳು. ದಂಪತಿ ಮಂಡ್ಯ ನಗರದಲ್ಲಿ ವಾಸವಿದ್ದರು. ಮಂಜು ದೂರದ ಸಂಬಂಧಿ, ವರಸೆಯಲ್ಲಿ ಅಣ್ಣ – ತಂಗಿಯಾಗಬೇಕು ಎನ್ನಲಾಗಿದೆ. ಈ ಬಗ್ಗೆ ಗ್ರಾಮದಲ್ಲಿ ಅಣ್ಣ, ತಂಗಿಯರೇ ವಿವಾಹವಾಗಿದ್ದಾರೆಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ದೇವರಾಜುಗೆ ಅವಮಾನವಾಗಿತ್ತು. ಮಂಜುಗೆ ಬುದ್ದಿ ಕಲಿಸುವ ಉದ್ದೇಶದಿಂದ ಕೊಲೆ ಮಾಡಿಸಲು ದೇವರಾಜು ನಿರ್ಧರಿಸಿದ್ದ ಎಂದು ಎಸ್ಪಿಯವರು ತಿಳಿಸಿದರು.
ನ.9ರಂದು ಮಂಜು ಅಪಹರಣ: ದೇವರಾಜು ತನ್ನ ಸಹೋದರ ನಿಂಗೇಗೌಡ ಮಗ ಸಂಜು ಜತೆ ಸೇರಿ ಮಂಜು ಕೊಲೆಗೆ ಯೋಜನೆ ರೂಪಿಸಿ 5 ಲಕ್ಷ ರೂ. ನೀಡುವುದಾಗಿ ಒಪ್ಪಿಸಿದರು. ಆನಂತರ ಸಂಜು ತನ್ನ ಸ್ನೇಹಿತರಾದ ಯೋಗೇಶ್, ಮಂಜು, ಚೆಲುವ, ನಂದನ್ ಎಂಬುವರಿಗೆ 5 ಲಕ್ಷ ರೂ.ಸುಪಾರಿ ನೀಡಿದ. ಮುಂಗಡವಾಗಿ 1.10 ಲಕ್ಷ ರೂ. ನೀಡಲಾಗಿತ್ತು. ಆರೋಪಿಗಳು ನ.9ರಂದು ಮಧ್ಯಾಹ್ನ ಮಂಜುವನ್ನು ಅಪಹರಿಸಿಕೊಂಡು ಕಾರಿನಲ್ಲಿ ಯಲಿಯೂರು, ಶ್ರೀರಂಗಪಟ್ಟಣ, ಪಾಲಹಳ್ಳಿ, ಪಂಪ್ ಹೌಸ್, ಮೈಸೂರು, ಬಿಳಿಕೆರೆ, ಲಕ್ಷ್ಮಣ ತೀರ್ಥ ನದಿ ನಂತರ ಕೆ.ಆರ್.ನಗರದ ಕಾವೇರಿ ನದಿ ಹತ್ತಿರ ಕೊಲೆ ಮಾಡಲು ಪ್ರಯತ್ನಿಸಿ ವಿಫಲವಾಗಿದ್ದರು ಎಂದು ಎಸ್ಪಿಯವರು ವಿವರಿಸಿದರು.
ಹೊಳೆ ನರಸೀಪುರದಲ್ಲಿ ಕೊಲೆ: ಅಂತಿಮವಾಗಿ ಹೊಳೆನರಸೀಪುರದ ಸ್ಮಶಾನದ ಹತ್ತಿರ ಹೇಮಾವತಿ ನದಿ ಬಳಿ ಚಾಕುವಿನಿಂದ ಮಂಜುನ ಕತ್ತು ಕೊಯ್ದು ಕೊಲೆ ಮಾಡಿ, ಬೆನ್ನಿಗೆ ಹಗ್ಗದಿಂದ ಕಲ್ಲು ಕಟ್ಟಿ ನದಿಯಲ್ಲಿ ಮುಳುಗಿಸಿ ಪರಾರಿಯಾಗಿದ್ದರು. ಕೃತ್ಯಕ್ಕೆ ಬಳಸಿದ್ದ ಬಟನ್ ಚಾಕುವನ್ನು ಫ್ಲಿಪ್ ಕಾರ್ಟ್‌ನಿಂದ ಆನೈಲೈನ್ ಮೂಲಕ ನಂದನ್ ತರಿಸಿಕೊಂಡಿದ್ದ ಎಂದು ಹೇಳಿದರು. ನ. 14ರಂದು ಹೊಳೆನರಸೀಪುರ ಸ್ಮಶಾನದ ಮುಂಭಾಗ ಹೇಮಾವತಿ ನದಿ ನೀರಿನಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು. ಬಲಗೈಯಲ್ಲಿ ಇಂಗ್ಲಿಷ್‌ನಲ್ಲಿ “ಅಚ್ಚು’ ಹಾಗೂ ಎಡಗೈನಲ್ಲಿ ಕನ್ನಡದಲ್ಲಿ “ಅಂಬಿ’ ಎಂಬ ಹಚ್ಚೆ ಗುರುತು ಇತ್ತು.
ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಯುವಕೊಬ್ಬನ ನಾಪತ್ತೆ ಪ್ರಕರಣ ಪ್ರಕರಣ ದಾಖಲಾಗಿತ್ತು. ಹೊಳೆನರಸೀಪುರದ ಬಳಿ ಹೇಮಾವತಿ ನದಿಯಲ್ಲಿ ಸಿಕ್ಕಿದ ಶವ ಮತ್ತು ಮಂಡ್ಯದಲ್ಲಿನ ನಾಪತ್ತೆ ಪ್ರಕರಣಕ್ಕೂ ಹೋಲಿಕೆಯಿದ್ದುದರಿಂದ ಪ್ರಕರಣವನ್ನು ಪೊಲೀಸರು ಬೆನ್ನತ್ತಿದಾಗ ಕೊಲೆ ಎಂಬುದು ಗೊತ್ತಾಯಿತು. ಆರೋಪಿಗಳು ವಿಚಾರಣೆ ವೇಳೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದರು. ಆರೋಪಿಗಳ ಪತ್ತೆಗೆ ಶ್ರಮಿಸಿದ ಪೊಲೀಸ್ ಸಿಬ್ಬಂದಿಗೆ ಎಸ್ಪಿಯವರು ಬಹುಮಾನ ಘೋಷಣೆ ಮಾಡಿದರು. ಎ.ಎಸ್ಪಿ ನಂದಿನಿ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.