Advertisement
ಸ್ಮಾರ್ಟ್‌ಸಿಟಿ ಯೋಜನೆಗೆ ಸೇರಿಕೊಂಡಿರುವ ಕೋರ್ಟ್, ಬಂದರು, ಕಂಟೋನ್‌ಮೆಂಟ್, ಮಿಲಾಗ್ರಿಸ್ ವಾರ್ಡ್‌ಗಳಿಗೆ ಸೀಮಿತವಾಗಿ 24×7 ಕುಡಿ ಯುವ ನೀರು ಒದಗಿಸುವ ಹಿನ್ನೆಲೆಯಲ್ಲಿ ನೂತನ ಟ್ಯಾಂಕ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇಲ್ಲಿನ ನೀರು ಸಂಗ್ರಹಣಾಗಾರಕ್ಕೆ ಮುಂದೆ ಒಟ್ಟು 2081 ನಳ್ಳಿ ಸಂಪರ್ಕಗಳು ದೊರೆಯಲಿವೆ. ಒಟ್ಟು 20 ಸಾವಿರ ಜನಸಂಖ್ಯೆಗೆ ಆಧರಿತವಾಗಿರುತ್ತದೆ. ಸದ್ಯ ಇಲ್ಲಿಗೆ ಬಾವುಟಗುಡ್ಡೆಯಲ್ಲಿರುವ ನೀರಿನ ಟ್ಯಾಂಕ್ ನಿಂದ ನೀರು ಸರಬರಾಜು ಆಗುತ್ತಿದೆ.
Related Articles
Advertisement
ಸದ್ಯ ಕೋರ್ಟ್, ಬಂದರು, ಕಂಟೋನ್‌ಮೆಂಟ್, ಮಿಲಾಗ್ರಿಸ್ ವಾರ್ಡ್‌ಗಳಿಗೆ ಬಾವುಟಗುಡ್ಡ ಹಾಗೂ ಬೆಂದೂರ್‌ನಿಂದ ನೀರು ಸರಬರಾಜಾಗುತ್ತಿದೆ. ಜತೆಗೆ ಈ ವಾರ್ಡ್‌ಗಳ ಅಕ್ಕ ಪಕ್ಕದ ವಾರ್ಡ್‌ಗಳಿಗೂ ಇಲ್ಲಿಂದಲೇ ನೀರು ಸರಬರಾಜಾಗುತ್ತಿದೆ. ಹೀಗಾಗಿ ಒತ್ತಡ ಅಧಿಕವಾಗಿ ಬಂದರು, ಸ್ಟೇಟ್‌ಬ್ಯಾಂಕ್ ಸಹಿತ ಕೊನೆಯ ಕೆಲವು ಭಾಗಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರವನ್ನು ಸ್ಟೇಟ್‌ಬ್ಯಾಂಕ್‌ನಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಜಲ ಸಂಗ್ರಹಣಾಗಾರ ಮಾಡಲಿದೆ.
ಯೋಜನೆ ಪ್ರಗತಿಯಲ್ಲಿ
ಮಂಗಳೂರು ಪಾಲಿಕೆಯ ಎಡಿಬಿ ನೆರವಿನ ಕ್ವಿಮಿಪ್ ಜಲಸಿರಿ ಯೋಜನೆಯಲ್ಲಿ ಕೆಯುಐಡಿಎಫ್‌ಸಿ ವತಿಯಿಂದ ಅನುಷ್ಠಾನಿಸಲಾಗುತ್ತಿರುವ 24×7 ಶುದ್ಧ ಕುಡಿಯುವ ನೀರಿನ ಯೋಜನೆ ಈಗಾಗಲೇ ಬಿರುಸಿನಿಂದ ನಡೆಯುತ್ತಿದೆ. ಒಟ್ಟು 792.42 ಕೋ.ರೂ. ವೆಚ್ಚದಲ್ಲಿ (ಕಾಮಗಾರಿ ವೆಚ್ಚ 587.67 ಕೋ.ರೂ. ಹಾಗೂ 8 ವರ್ಷಗಳ ಅವಧಿಗೆ ಕಾರ್ಯಾಚರಣೆ-ನಿರ್ವಹಣೆಗೆ 204.75 ಕೋ.ರೂ.) ಕಾಮಗಾರಿ ನಡೆಸಲಾಗುತ್ತಿದೆ. ಇದರಂತೆ ತುಂಬೆ ರಾಮಲ್‌ಕಟ್ಟೆಯಲ್ಲಿ 81.7 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ (ಡಬ್ಲ್ಯುಟಿಪಿ)ದ ಉನ್ನತೀಕರಣ, 8 ಸ್ಥಳಗಳಲ್ಲಿ ಇಂಟರ್‌ಮೀಡಿಯೆಟ್ ಪಂಪಿಂಗ್ ಸ್ಟೇಶನ್, 19 ಮೇಲ್ಮಟ್ಟದ ಜಲಸಂಗ್ರಹಣಾಗಾರ (ಒಎಚ್‌ಟಿ) ಹಾಗೂ 2 ನೆಲಮಟ್ಟದ ಜಲಸಂಗ್ರಹಣಾಗಾರಗಳ (ಜಿಎಲ್‌ಎಸ್‌ಆರ್) ನಿರ್ಮಾಣ, 7 ಮೀ. ಒತ್ತಡದೊಂದಿಗೆ 1500 ಕಿ.ಮೀ. ವಿತರಣಾ ಜಾಲ ಹಾಗೂ 96,300 ನೀರಿನ ಜೋಡಣೆಗಳನ್ನು ಉನ್ನತೀಕರಿಸಲು ಉದ್ದೇಶಿಸಲಾಗಿದೆ.
ಭವಿಷ್ಯದ ಮಂಗಳೂರಿಗೆ ರಕ್ಷಣೆ
ಮಂಗಳೂರಿನಲ್ಲಿ 24×7 ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜಲಸಿರಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಒಟ್ಟು 19 ಕಡೆಯಲ್ಲಿ ಮೇಲ್ಮಟ್ಟದ ಜಲಸಂಗ್ರಹಣಾಗಾರ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು, ಈ ಪೈಕಿ 6 ಸಂಗ್ರಹಣಾಗಾರಗಳ ಕಾಮಗಾರಿ ಬಹುತೇಕ ಕೊನೆಯ ಹಂತದಲ್ಲಿವೆ. ಸ್ಟೇಟ್‌ಬ್ಯಾಂಕ್‌ನಲ್ಲಿ ಹೊಸದಾಗಿ ಜಲಸಂಗ್ರಹಣಾಗಾರ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಮೂಲಕ ನಗರದ ಬಹುಮುಖ್ಯ ಕೇಂದ್ರಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ನಗರದ ಭವಿಷ್ಯದ ದೃಷ್ಟಿಯಿಂದ ಇದು ಪರಿಣಾಮಕಾರಿ ಯೋಜನೆಯಾಗಿದೆ. –ಡಿ. ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ
ದಿನೇಶ್ ಇರಾ