Advertisement

ಮೊದಲ ಹೆಣ್ಣು ಮಗುವಿಗೆ 5 ಲಕ್ಷ

12:20 PM Jan 02, 2018 | |

ಬೆಂಗಳೂರು: ಹೊಸ ವರ್ಷದ ಮೊದಲ ದಿನ ಅಂದರೆ, ಶುಭ ಸೋಮವಾರದಂದು ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹೆಣ್ಣು ಮಗುವಿನ ಹೆತ್ತವರಿಗೆ ಬಿಬಿಎಂಪಿಯಿಂದ 5 ಲಕ್ಷ ರೂ. ನೋಡಲಾಗಿದೆ. 

Advertisement

ಪಾಲಿಕೆಯ ರಾಜಾಜಿನಗರ ಹೆರಿಗೆ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯರಾತ್ರಿ 12.05 ನಿಮಿಷಕ್ಕೆ ಜನಿಸಿದ ಪುಷ್ಟ ಮತ್ತು ಗೋಪಿ ದಂಪತಿಯ ಹೆಣ್ಣು ಮಗು ಈ ಅದೃಷ್ಟಕ್ಕೆ ಪಾತ್ರವಾಗಿದೆ. ಇತ್ತೀಚೆಗೆ ನಡೆದ ಬಿಬಿಎಂಪಿ ಮಾಸಿಕ ಸಭೆಯಲ್ಲಿ ಸಂಪತ್‌ರಾಜ್‌ ಅವರು ಡಿಸೆಂಬರ್‌ 31ರ ಮಧ್ಯರಾತ್ರಿ 12 ಗಂಟೆಯಿಂದೀಚೆಗೆ ಪಾಲಿಕೆಯ ಆಸ್ಪತ್ರೆಗಳಲ್ಲಿ ಸಹಜವಾಗಿ ಜನಿಸಿದ ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕಾಗಿ ಪಾಲಿಕೆಯಿಂದ 5 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು.

ತಮಿಳುನಾಡು ಮೂಲದ ಗೋಪಿಯವರು ನಗರದ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿಕೊಂಡಿದ್ದು, ಪಾಲಿಕೆಯ ಆಸ್ಪತ್ರೆಯಲ್ಲಿಯೇ ಮೊದಲಿನಿಂದಲೂ ಪುಷ್ಪ ಅವರಿಗೆ ಚಿಕಿತ್ಸೆ ಕೊಡಿದ್ದಾರೆ. ಭಾನುವಾರ (ಡಿ.31) ರಾತ್ರಿ 9.30ಕ್ಕೆ ಪುಷ್ಟ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಧ್ಯರಾತ್ರಿ 12.05ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದ ಮೇಯರ್‌ ಆರ್‌.ಸಂಪತ್‌ರಾಜ್‌ ಅವರು, ತಾಯಿ-ಮಗುವಿನ ಆರೋಗ್ಯ ವಿಚಾರಿಸಿ, ಮಗುವಿನ ವಿದ್ಯಾಭ್ಯಾಸಕ್ಕೆ ಪಾಲಿಕೆಯಿಂದ 5 ಲಕ್ಷ ರೂ. ನೀಡುವ ಪ್ರಮಾಣ ಪತ್ರ ವಿತರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಪತ್‌ರಾಜ್‌ ಅವರು, ಪಾಲಿಕೆಯ ಸಭೆಯಲ್ಲಿ ಘೋಷಣೆ ಮಾಡಿದಂತೆ ಹೊಸ ವರ್ಷದ ಮೊದಲ ಹೆಣ್ಣು ಮಗುವಿಗೆ ಪಾಲಿಕೆಯಿಂದ 5 ಲಕ್ಷ ರೂ. ನೀಡಿದ್ದೇವೆ.

ಹಣವನ್ನು ಪೋಷಕರು ಹಾಗೂ ಪಾಲಿಕೆಯ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನ ಜಂಟಿ ಖಾತೆಯಲ್ಲಿ ಠೇವಣಿ ಇರಿಸಲಾಗುವುದು. ಮಗುವಿನ ವಿದ್ಯಾಭ್ಯಾಸ ಆರಂಭವಾದ ಕೂಡಲೇ ಪೋಷಕರು ಶಾಲೆಗೆ ಸೇರಿಸಿದ ರಸೀದಿ ಸಲ್ಲಿಸಿ ಹಣ ಪಡೆಯಬಹುದಾಗಿದೆ ಎಂದು ತಿಳಿಸಿದರು.

Advertisement

ಪ್ರತಿಯೊಬ್ಬರು ಗಂಡು ಮಗು ಬೇಕು ಎಂದು ಬಯಸುವುದರಿಂದ ಸಮಾಜದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಜತೆಗೆ ಹೆಣ್ಣು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಲು ಹಿಂದು ಮುಂದು ನೋಡುವಂತಹ ಪರಿಸ್ಥಿತಿಯಿದೆ. ಆ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಹೆಣ್ಣು ಮಗುವಿನ ವಿದ್ಯಾಭ್ಯಾಸದ ಕುರಿತು ಜಾಗೃತಿ ಮೂಡಿಸಲು 5 ಲಕ್ಷ ರೂ. ನೀಡಲಾಗುತ್ತಿದೆ ಎಂದು ಹೇಳಿದರು. 

ಪಾಲಿಕೆಯ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದ್ದರೂ, ಜನರು ಆಸ್ಪತ್ರೆಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿನ ಚಿಕಿತ್ಸಾ ಗುಣಮಟ್ಟದ ಕುರಿತು ನಗರದ ಜನತೆಗೆ ತಿಳಿಸುವ ಮತ್ತು ಪಾಲಿಕೆಯ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಪ್ರೋತ್ಸಾಹ ನೀಡುವುದು ಸಹ ಇದರ ಉದ್ದೇಶವಾಗಿದೆ ಎಂದು ತಿಳಿಸಿದರು. 

ಈ ವೇಳೆ ಉಪಮೇಯರ್‌ ಪದ್ಮಾವತಿ ನರಸಿಂಹ ಮೂರ್ತಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್‌ ಪಾಷಾ, ಪಾಲಿಕೆ ಸದಸ್ಯೆ ದೀಪಾ ನಾಗೇಶ್‌ ಸೇರಿದಂತೆ ಪ್ರಮುಖರು ಹಾಜರಿದ್ದರು. 

ಖಾಸಗಿ ಆಸ್ಪತ್ರೆಗಳಿಗಿಂತ ಪಾಲಿಕೆ ಆಸ್ಪತ್ರೆಗಳಲ್ಲೇ ಉತ್ತಮ ತಜ್ಞ ವೈದ್ಯರಿದ್ದು, ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ. ಅದೇ ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಸಾವಿರಾರು ರೂ. ಬಿಲ್‌ ಮಾಡುತ್ತಾರೆ. ಅದೇ ಚಿಕಿತ್ಸೆ ಪಾಲಿಕೆ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಮೊದಲಿನಿಂದಲೂ ರಾಜಾಜಿನಗರದ ಹೆರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಿದ್ದೆ. ವರ್ಷದ ಮೊದಲ ಹೆಣ್ಣು ಮಗುವಿಗೆ 5 ಲಕ್ಷ ರೂ. ನೀಡುವ ಬಗ್ಗೆ ತಿಳಿದಿರಲೇ ಇಲ್ಲ.
-ಗೋಪಿ, ಮಗುವಿನ ತಂದೆ

Advertisement

Udayavani is now on Telegram. Click here to join our channel and stay updated with the latest news.

Next