ಬೆಂಗಳೂರು: ‘ಲವ್ ಯು ರಚ್ಚು’ ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಮೃತಪಟ್ಟ ಫೈಟರ್ ವಿವೇಕ್ ಕುಟುಂಬಕ್ಕೆ ನಿರ್ಮಾಪಕ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಇಂದು 5 ಲಕ್ಷ. ರೂ. ನೀಡಿದ್ದಾರೆ.
ಇಂದು ಪತ್ನಿ ಪ್ರೀತಿಕಾ, ಜಿ ಸಿನಿಮಾಸ್ ಅಕಾಡೆಮಿ ವಕೀಲ ನಾಗಭೂಷಣ್, ಗುರು ದೇಶಪಾಂಡೆ ವಕೀಲ ಕೆಂಪೇಗೌಡ ಅವರುಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ವಿವೇಕ್ ಕುಟುಂಬಕ್ಕೆ ಈಗ ಐದು ಲಕ್ಷ ಮತ್ತು ಗುರು ದೇಶಪಾಂಡೆಗೆ ಜಾಮೀನು ದೊರೆತ ಬಳಿಕ ಇನ್ನೈದು ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದರು.
ಮೃತನ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಗುರು ದೇಶಪಾಂಡೆ ಇಮೇಲ್ ಮೂಲಕ ನಮಗೆ ತಿಳಿಸಿದ್ದಾರೆ ಎಂದು ಗುರು ದೇಶಪಾಂಡೆ ಪರ ವಕೀಲ ಕೆಂಪೇಗೌಡ ತಿಳಿಸಿದ್ದಾರೆ. ಪರಿಹಾರ ನೀಡುವ ವಿಚಾರವಾಗಿ ನಿನ್ನೆಯೇ ನಾವು ಮೃತ ವಿವೇಕ್ ಚಿಕ್ಕಪ್ಪನ ಬಳಿ ಮಾತನಾಡಿದ್ದೇವೆ. ಜಿ ಸಿನಿಮಾಸ್ ಕಡೆಯಿಂದಲೂ ಮೃತನ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವುದಾಗಿಯೂ ಹೇಳಿದ್ದೇವೆ. ಇನ್ನು ಅದೇ ಅವಘಡದಲ್ಲಿ ಗಾಯಾಳು ಆಗಿರುವ ರಂಜಿತ್‌ನ ಪೂರ್ಣ ಆಸ್ಪತ್ರೆ ವೆಚ್ಚವನ್ನು ಚಿತ್ರತಂಡವೆ ಭರಿಸಲಿದೆ ಎಂದು ಸಹ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ ಹೇಳಿದ್ದಾರೆ.
ಇನ್ನು ಲವ್ ಯೂ ರಚ್ಚು ಸಿನಿಮಾದಲ್ಲಿ ಅಜಯ್ ರಾವ್ ಹಾಗು ರಚಿತಾ ರಾಮ್ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಿಡದಿ ಸಮೀಪದ ಜೋಗಿಪಾಳ್ಯ ಗ್ರಾಮದಲ್ಲಿ ನಡೆಯುತ್ತಿತ್ತು. ಫೈಟ್ ದೃಶ್ಯದ ಚಿತ್ರೀಕರಣವನ್ನು ತೆಂಗಿನ ತೋಟದಲ್ಲಿ ಏರ್ಪಡಿಸಲಾಗಿತ್ತು. ಫೈಟರ್‌ಗಳು ಹಾರಿ ನೀರಿನ ತೊಟ್ಟಿಗೆ ಬೀಳುವ ದೃಶ್ಯದ ಚಿತ್ರೀಕರಣ ನಡೆಯುತ್ತಿರಬೇಕಾದರೆ ರಂಜಿತ್ ಎಂಬ ಫೈಟರ್‌ಗೆ ರೋಪ್ ಹಾಕಿ ಆ ರೋಪ್ ಅನ್ನು ಕ್ರೇನ್ ಒಂದಕ್ಕೆ ಕಟ್ಟಲಾಗಿತ್ತು. ಆ ರೋಪ್‌ನ ಇನ್ನೊಂದು ತುದಿಯನ್ನು ಫೈಟರ್ ವಿವೇಕ್ ಹಿಡಿದು ರೋಪ್ ಕಟ್ಟಿಕೊಂಡ ವ್ಯಕ್ತಿ ಗಾಳಿಯಲ್ಲಿ ತೇಲುವಂತೆ ಎಳೆದು ಆಡಿಸುತ್ತಿದ್ದ. ಕ್ರೇನ್ ಆಪರೇಟ್ ಮಾಡುತ್ತಿದ್ದ ವ್ಯಕ್ತಿ ಕ್ರೇನ್ ಅನ್ನು ಎತ್ತರಕ್ಕೆ ಏರಿಸಿದ. ಆಗ ಅಲ್ಲಿಯೇ ಮೇಲೆ ಹಾದು ಹೋಗಿದ್ದ 11 ಕೆ.ವಿ ವಿದ್ಯುತ್ ತಂತಿಗೆ ಕ್ರೇನ್ ತಗುಲಿ ಕಬ್ಬಿಣದ ರೋಪ್‌ಮೂಲಕ ವಿದ್ಯುತ್ ಪ್ರವಹಿಸಿ ರೋಪ್ ಹಿಡಿದಿದ್ದ ವಿವೇಕ್ ಮೃತಪಟ್ಟಿದ್ದಾನೆ.
ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಈಗಾಗಲೇ ಸಿನಿಮಾ ನಿರ್ದೇಶಕ, ಸಾಹಸ ನಿರ್ದೇಶಕ ಸೇರಿದಂತೆ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಅವರು ನಾಪತ್ತೆಯಾಗಿದ್ದಾರೆ.