ಕಾಠ್ಮಂಡು: ಇಂದು ಬೆಳಗ್ಗೆ ನೇಪಾಳದ ಪೋಖರಾದಲ್ಲಿ ಪತನಗೊಂಡ ಯೇತಿ ಏರ್‌ಲೈನ್ಸ್ ವಿಮಾನದಲ್ಲಿ ಕನಿಷ್ಠ ಐವರು ಭಾರತೀಯರು ಪ್ರಯಾಣಿಸುತ್ತಿದ್ದರು ಎಂದು ರಾಷ್ಟ್ರದ ನಾಗರಿಕ ವಿಮಾನಯಾನ ಪ್ರಾಧಿಕಾರ ಟ್ವೀಟ್‌ನಲ್ಲಿ ಖಚಿತಪಡಿಸಿದೆ.
15 ವಿದೇಶಿಯರು ಸೇರಿದಂತೆ 72 ಜನರನ್ನು ಹೊತ್ತೊಯ್ಯುತ್ತಿದ್ದ ನೇಪಾಳದ ಪ್ರಯಾಣಿಕ ವಿಮಾನವು ಪ್ರಮುಖ ಪ್ರವಾಸಿ ತಾಣವಾದ ಪೋಖರಾದ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ನದಿಯ ಕಮರಿಗೆ ಬಿದ್ದು ಪತನಗೊಂಡಿದೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಐವರು ಭಾರತೀಯರು ಸೇರಿ ಎಲ್ಲಾ 72 ಮಂದಿ ನಿಧನರಾದ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ:ತೆಲುಗು ರಾಜ್ಯಗಳ ನಡುವೆ ಮೊದಲ ವಂದೇ ಭಾರತ್ ರೈಲು ಸೇವೆಗೆ ಪ್ರಧಾನಿ ಚಾಲನೆ
ಯೇತಿ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಅವಳಿ-ಎಂಜಿನ್ ಎಟಿಆರ್ 72 ವಿಮಾನವು ರಾಜಧಾನಿ ಕಠ್ಮಂಡುವಿನಿಂದ ಹೊರಟಿತ್ತು. ಟೇಕ್-ಆಫ್ ಆದ ಸುಮಾರು 20 ನಿಮಿಷಗಳ ನಂತರ ಹಳೆಯ ವಿಮಾನ ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣದ ನಡುವಿನ ಸೇಟಿ ನದಿಯ ದಡದಲ್ಲಿ ವಿಮಾನವು ಪತನಗೊಂಡಿದೆ. ಕೂಡಲೇ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿಮಾನ ಅಪಘಾತದಲ್ಲಿ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ.
“ನೇಪಾಳದಲ್ಲಿ ಸಂಭವಿಸಿದ ದುರಂತ ವಿಮಾನ ಅಪಘಾತದಲ್ಲಿ ಜೀವಹಾನಿಯು ಅತ್ಯಂತ ದುರದೃಷ್ಟಕರವಾಗಿದೆ. ನನ್ನ ಪ್ರಾರ್ಥನೆಗಳು ದುಃಖಿತರ ಕುಟುಂಬಗಳೊಂದಿಗೆ ಇವೆ. ಓಂ ಶಾಂತಿ” ಎಂದು ಸಿಂಧಿಯಾ ಟ್ವೀಟ್ ಮಾಡಿದ್ದಾರೆ.