ಚಿತ್ರದುರ್ಗ: ನಗರದ ವಿವಿಧೆಡೆ ನಿರ್ಮಿಸುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಶನಿವಾರ ಚಾಲನೆ ನೀಡಿದರು.
ಹೊಳಲ್ಕೆರೆ ರಸ್ತೆ, ದ್ವಾರಕಾ ಬಡಾವಣೆ, ಸಂಗಮೇಶ್ವರ ಬಡಾವಣೆ ಸೇರಿದಂತೆ ಹಲವು ಕಡೆಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ವೇಳೆಗೆ ಕೆಲ ಕಾಮಗಾರಿಗಳು ಮುಗಿದು ಇನ್ನೂ ಕೆಲವು ಅರ್ಧ ಮುಗಿದಿರುತ್ತಿದ್ದವು. ಆದರೆ ಲಾಕ್‌ಡೌನ್ ಕಾರಣಕ್ಕೆ ವಿಳಂಬವಾಗಿದ್ದು, ಈಗ ಸರ್ಕಾರ ಮತ್ತೆ ಕಾಮಗಾರಿ ಆರಂಭಿಸಲು ಸೂಚನೆ ನೀಡಿದೆ ಎಂದು ಶಾಸಕರು ತಿಳಿಸಿದರು.
ನಗರದಲ್ಲಿ ಸುಮಾರು 380 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ. ರಸ್ತೆ ನಿರ್ಮಾಣ ಸಮಯದಲ್ಲಿ ಮನೆಯ ಬಳಿ ಮೆಟ್ಟಿಲು ಸೇರಿದಂತೆ ಇತರೆ ಅಡ್ಡ ಬಂದರೆ ಅದನ್ನು ತೆರವು ಮಾಡಿ ನಿರ್ಮಾಣ ಮಾಡಲಾಗುವುದು. ಅಲ್ಲದೆ ಗಿಡಗಳು ಇದ್ದರೂ ಅದನ್ನು ತೆಗೆದು ಜೂನ್‌ನಲ್ಲಿ ಹೊಸದಾಗಿ ಸಸಿಗಳನ್ನು ನೆಡಿಸಲಾಗುವುದು, ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ನಿರ್ಮಾಣ ಮಾಡಲು 2 ಕೋಟಿ ರೂ.ಗಳನ್ನು ನೀಡಲಾಗುತ್ತದೆ. ರಸ್ತೆ ನಿರ್ಮಾಣದಲ್ಲಿ ಹೋದ ಮರಗಳ ಬದಲಾಗಿ ಹೊಸದಾಗಿ ಸಸಿಗಳನ್ನು ನೆಡಲಾಗುವುದು. ಇದಕ್ಕೆ ನಗರಸಭೆಯಿಂದಲೂ ಹಣವನ್ನು ತೆಗಿದಿರಿಸಲಾಗಿದೆ ಎಂದರು.
ಕೇಂದ್ರ ಸರ್ಕಾರ ಅಮೃತ್ ಯೋಜನೆಯಡಿ ಅನುದಾನ ನೀಡಿದೆ. ಮನೆ ಮನೆಗೆ ಪೈಪ್‌ಲೈನ್‌ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾಮಗಾರಿ ಮುಂದಿನ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸ್ವತ್ಛತೆಯಲ್ಲೂ ನಗರ ಮುಂಚೂಣಿಯಲ್ಲಿದ್ದು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಗರಸಭಾ ಸದಸ್ಯರಾದ ಹರೀಶ್, ಶಶಿಧರ, ಅನುರಾಧ ರವಿಶಂಕರ್, ಭಾಗ್ಯಮ್ಮ, ಪೌರಾಯುಕ್ತ ಹನುಮಂತರಾಜು, ಇಂಜಿನಿಯರ್ ಮನೋಹರ್, ಶರತ್ ಇದ್ದರು.