ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ಒಂದೇ ದಿನ ಕೋವಿಡ್-19 ಸೋಂಕಿತ ಐದು ಮಂದಿ ಪತ್ತೆಯಾಗಿದ್ದಾರೆ. ಇದರೊಂದಿಗೆ ಇಲ್ಲಿನ ಸೋಂಕಿತರ ಸಂಖ್ಯೆ 9ಕ್ಕೇರಿದೆ.
ಜಿಲ್ಲೆಯ ಗೌರಿಬಿದನೂರಲ್ಲಿ ಈ ಮೊದಲು ನಾಲ್ಕು ಪ್ರಕರಣಗಳು ದೃಢಪಟ್ಟು ಆ ಪೈಕಿ 70 ವರ್ಷದ ವೃದ್ದೆ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಕಳೆದ ಗುರುವಾರ ಅಸುನೀಗಿದ್ದರು. ಇದೀಗ ಈ ನಾಲ್ಕರ ಜೊತೆಗೆ ಹೊಸದಾಗಿ ಐದು ಕೋವಿಡ್-19 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 9ಕ್ಕೆ ಏರಿಕೆ ಆಗಿದೆ.
ಈಗ ಜಿಲ್ಲೆಯ ಮೊದಲ ಪ್ರಕರಣದ 31 ವರ್ಷದ ವ್ಯಕ್ತಿಯ ತಂದೆಗೂ ಕೋವಿಡ್-19 ಸೋಂಕು ದೃಢಪಟ್ಟಿದೆ. ಇತ್ತೀಚೆಗೆ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದ ಮಹಿಳೆಯ ಮಗ ಹಾಗೂ ಸೊಸೆ, ಅವರ ಮೊಮ್ಮಗ ಸೇರಿದಂತೆ ಸೊಸೆಯ ತಮ್ಮನಿಗೂ ಕೋವಿಡ್-19 ಸೋಂಕು ಪಾಸಿಟಿವ್ ಬಂದಿದೆ ಜಿಲ್ಲಾಧಿಕಾರಿ ಆರ್.ಲತಾ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಇನ್ನೂ ಮೊದಲ ಪ್ರಕರಣದ 31 ವರ್ಷದ ವ್ಯಕ್ತಿಯ ಸಹೋದರಿಯರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗೂ ಕೋವಿಡ್-19 ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಅವರಿಬ್ಬರ ಅಂತಿಮ ವರದಿಗಾಗಿ ಕಾಯುತ್ತಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಸದ್ಯ ಸೋಂಕು ದೃಢಪಟ್ಟಿರುವ 05 ಮಂದಿ ಸೇರಿದಂತೆ ಶಂಕಿತ ಇಬ್ಬರನ್ನೂ ಸಹ ಚಿಕ್ಕಬಳ್ಳಾಪುರ ನಗರದ ಹಳೇ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.