ಬೆಳಗಾವಿ: ಮಹಾರಾಷ್ಟ್ರದ ಕೊಯ್ನಾದಿಂದ 1.09 ಲಕ್ಷ ಹಾಗೂ ರಾಜಾಪುರ ಬ್ಯಾರೇಜ್‌ದಿಂದ ಹರಿದು ಬರುವ 2.95 ಲಕ್ಷ ಕ್ಯೂಸೆಕ್ ಸೇರಿ ವಿವಿಧ ಜಲಾಶಯ ಹಾಗೂ ನದಿಗಳಿಂದ ಕೃಷ್ಣಾ ನದಿಗೆ 5.76 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬೆಳಗಾವಿ ತಾಲೂಕಿನ ಚಂದನಹೊಸೂರ ಗ್ರಾಮದಲ್ಲಿ ಮನೆ ಕುಸಿದು ಯಲ್ಲೇಶ ಬಣ್ಣವರ ಮೃತಪಟ್ಟಿದ್ದು, ಗೋಕಾಕ ತಾಲೂಕು ಲೋಳಸೂರ ಗ್ರಾಮದಲ್ಲಿ ಮಳೆಯಲ್ಲಿ ನೆನೆದಿದ್ದ ಪದ್ಮಾವತಿ ಪಾಟೀಲ (21) ತೀವ್ರ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾಳೆ. ಅಥಣಿ ತಾಲೂಕಿನ ತೀರ್ಥ ಗ್ರಾಮದ ಬಸವರಾಜ ಮಾನಿಕ ಕಾಂಬಳೆ(14) ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಬೆಳಗಾವಿ ಹಾಗೂ ಇತರ ತಾಲೂಕುಗಳಿಗೆ ಹೊರ ಜಿಲ್ಲೆಗಳಿಗೆ ಸಂಪರ್ಕ ಕಡಿತಗೊಂಡು ತರಕಾರಿ, ಹಾಲು ಹಾಗೂ ದಿನನಿತ್ಯದ ವಸ್ತುಗಳು ಸಿಗದಂತಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ದೊರಕದೇ ಪರದಾಟ ಹೆಚ್ಚಿದೆ. 106 ಗ್ರಾಮಗಳು ಪ್ರವಾಹ ಬಾಧಿತವಾಗಿ 22,682 ಜನ ಹಾಗೂ 9519 ಜಾನುವಾರುಗಳನ್ನು ರಕ್ಷಿಸಲಾಗಿದೆ. 79 ಪರಿಹಾರ ಕೇಂದ್ರಗಳಲ್ಲಿ 6970 ಜನರು ಆಶ್ರಯ ಪಡೆದಿದ್ದಾರೆ.
ಹಿಡಕಲ್ ಜಲಾಶಯದಿಂದ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ಗೋಕಾಕ ನಗರದ ಅರ್ಧ ಭಾಗ ಜಲಾವೃತವಾಗಿದೆ. ಘಟಪ್ರಭಾ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮನೆಗೂ ನೀರು ನುಗ್ಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲ ತಾಲೂಕಿನ ಶಾಲಾ ಕಾಲೇಜುಗಳಿಗೆ ಆ.8ರಿಂದ ಮೂರು ದಿನ ರಜೆ ಘೋಷಿಸಲಾಗಿದೆ.
ಕೃಷ್ಣಾ, ವೇದಗಂಗಾ ನದಿಗಳ ಪ್ರವಾಹದಿಂದ ಚಿಕ್ಕೋಡಿ, ಅಥಣಿ, ರಾಯಬಾಗ ಹಾಗೂ ಕಾಗವಾಡ ತಾಲೂಕುಗಳ ಸುಮಾರು 40 ಹಳ್ಳಿಗಳು ಜಲಾವೃತವಾಗಿವೆ. ಗೋಕಾಕ ಹಾಗೂ ಚಿಕ್ಕೋಡಿಗಳ ಖಾಸಗಿ ಆಸ್ಪತ್ರೆಗೆ ನೀರು ನುಗ್ಗಿ ಒಳಗೆ ಸಿಲುಕಿದ್ದ ವೈದ್ಯರು ಹಾಗೂ 25ಕ್ಕೂ ಹೆಚ್ಚು ರೋಗಿಗಳನ್ನು ಪ್ರಕೃತಿ ವಿಕೋಪ ರಕ್ಷಣಾ ಪಡೆ ರಕ್ಷಿಸಿದೆ.
ಬೆಳಗಾವಿ ಕಬಲಾಪುರ ಬಳಿಯ ಬಳ್ಳಾರಿ ನಾಲಾ ಬಳಿ ಇರುವ ಮನೆಯೊಂದರಲ್ಲಿ ಸಿಕ್ಕಿಕೊಂಡ ದಂಪತಿ ರಕ್ಷಣೆಗೆ ಒಂದೂವರೆ ದಿನದಿಂದ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಪ್ರಯತ್ನ ಫಲಿಸಿಲ್ಲ. ಖಾನಾಪುರದ ಬೀಡಿ ಗ್ರಾಮದಲ್ಲಿ ಎಮ್ಮೆ ಸಾವಿಗೀಡಾಗಿ ತಾಲೂಕಿನಲ್ಲಿ 75 ಮನೆ ಕುಸಿತವಾಗಿವೆ. ಜಾಂಬೋಟಿ ಬಳಿ ಕುಸಮಳಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ.