ರಾಯಚೂರು: ಉತ್ತರ ಕರ್ನಾಟಕದ ಹದಿಮೂರು ಜಿಲ್ಲೆಗಳಲ್ಲಿ ನಕಲಿ ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜಗಳ ಮಾರಾಟ ಮಾಡುತ್ತಿದ್ದ ಸುಮಾರು 79 ಕಡೆ ದಾಳಿ ನಡೆಸಿದ್ದು, 5.27 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಬೆಳಗಾವಿ ವಿಭಾಗದ ವಿಚಕ್ಷಣಾ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂಡದ ಅಧಿಕಾರಿಗಳು ಸತತ ದಾಳಿ ನಡೆಸುತ್ತಲೇ ಇದ್ದಾರೆ. ನಕಲಿ ಉತ್ಪನ್ನಗಳ ಮಾರಾಟ ಹೆಚ್ಚಾಗುತ್ತಿದ್ದು, ಗುಣಮಟ್ಟ ನಿಯಂತ್ರಣ ವಿಭಾಗ ಬಲಾಡ್ಯವಾಗಿ ಕೆಲಸ ಮಾಡುತ್ತಿದೆ. ಅದರಲ್ಲೂ ಸೀಡೋಬಯಾಸ್ ನಕಲಿ ಜಾಲ ಹೆಚ್ಚಾಗಿದೆ. ಇಂಥ ಕ್ರಿಮಿನಾಶಕ ಬಳಸುವುದರಿಂದ ಒಂದೆಡೆ ಕೀಟಗಳ ನಿಯಂತ್ರಣ ಸಾಧ್ಯವಾಗುವುದಿಲ್ಲ. ಜತೆಗೆ ಮಾನವನ ಆರೋಗ್ಯದ ಮೇಲೆಯೂ ಸಾಕಷ್ಟು ಪರಿಣಾಮ ಬೀರುತ್ತದೆ ಎಂದರು.
ರಾಯಚೂರು ಜಿಲ್ಲೆಯಲ್ಲೂ ನಕಲಿ ಕ್ರಿಮಿನಾಶಕ ಮಾರಾಟಕ್ಕೆ ಸಂಬಂಧಿಸಿ 85 ಮಾದರಿ ಸಂಗ್ರಹಿಸಿದ್ದು, ಅದರಲ್ಲಿ ನಾಲ್ಕು ಕಳಪೆಯಾಗಿರುವುದು ದೃಢಪಟ್ಟಿದೆ. ಅಂಥ ಅಂಗಡಿಗಳ ಪರವಾನಗಿ ರದ್ದುಗೊಳಿಸುವ ಜತೆಗೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಲಿಂಗಸುಗೂರು, ರಾಯಚೂರು ತಾಲೂಕಿನಲ್ಲಿ ಕಲರ್ ಮಿಕ್ಸ್ , ಹ್ಯೂಮಿಸಿಲ್, ಆಲ್ವಿನ್ ಎನ್ನುವ ನಕಲಿ ಉತ್ಪನ್ನಗಳ ಮಾರಾಟ ನಡೆದಿದ್ದು, ಈಗಾಗಲೇ ಕ್ರಮಕ್ಕೆ ಮುಂದಾಗಿದ್ದಾಗಿ ವಿವರಿಸಿದರು. ಅಧಿಕೃತ ಪರವಾನಗಿ ಪಡೆದು ನೋಂದಣಿಯಾಗದ ಕ್ರಿಮಿನಾಶಕಗಳು ಕೂಡ ಲಭ್ಯವಾಗಿದೆ. ಮೂರು ಕಡೆ ದಾಳಿ ನಡೆಸಿದ್ದು, ಅಂಥ ಕ್ರಿಮಿನಾಶಕಗಳನ್ನು ಸೀಜ್ ಮಾಡಲಾಗಿದೆ. ಎರಡು ಕಡೆ ನಕಲಿ ಡಿಎಪಿ ಮಾರಾಟ ಜಾಲ ಪತ್ತೆಯಾಗಿದೆ. 10 ಲಕ್ಷ ರೂ. ಮೌಲ್ಯದ ಕ್ರಿಮಿನಾಶಕ, ರಸಗೊಬ್ಬರ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಮ್ಮ ಅಧಿಕಾರಿಗಳು ನಿರಂತರ ದಾಳಿ ಮಾಡುತ್ತಲೇ ಇರುತ್ತಾರೆ. ನಕಲಿ ಉತ್ಪನ್ನಗಳು ಸಿಕ್ಕ ಕೂಡಲೇ ನಾವು ಕ್ರಮ ಕೈಗೊಳ್ಳಲು ಬರುವುದಿಲ್ಲ. ಆದರೆ, ವಿಧಿ ವಿಜ್ಞಾನ ಪ್ರಯೋಗಾಲಯ ಬೆಂಗಳೂರಿನಲ್ಲಿ ಮಾತ್ರ ಇದೆ. ಹೀಗಾಗಿ ಪರೀಕ್ಷಾ ವರದಿಗಳು ಬರಲು ಸಾಕಷ್ಟು ಸಮಯ ಹಿಡಿಯುತ್ತದೆ. ಆದರೆ, ವರದಿಯಲ್ಲಿ ನಕಲಿ ಎಂದು ಗೊತ್ತಾದ ಕೂಡಲೇ ಅಂಥ ಅಂಗಡಿಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು. ರೈತರು ಯಾವುದೇ ಕಾರಣಕ್ಕೂ ಇಂಥ ಮೋಸದ ಜಾಲಕ್ಕೆ ಸಿಲುಕಬಾರದು. ತಾವು ಅಧಿ ಕೃತ, ಗುಣಮಟ್ಟದ ಕಂಪನಿಗಳ ಉತ್ಪನ್ನಗಳನ್ನೇ ಖರೀದಿಸಬೇಕು. ಒಂದು ವೇಳೆ ಬೇರೆಡೆ ಖರೀದಿಸಿದರೂ ಕಡ್ಡಾಯವಾಗಿ ರಶೀದಿ ಪಡೆಯಲೇಬೇಕು. ಆಗ ಮಾತ್ರ ನಾವು ಕಂಪನಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕನ್ನಡ ಗೀತ ಗಾಯನ: ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶ
ಕೃಷಿ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ನಯೀಮ್ ಹುಸೇನ್ ಮಾತನಾಡಿ, ಸ್ಥಳೀಯ ಮಟ್ಟದಲ್ಲೂ ನಾವು ನಿರಂತರ ದಾಳಿ ನಡೆಸಿ ಅಕ್ರಮಗಳಿಗೆ ಕಡಿವಾಣ ಹಾಕುತ್ತಲೇ ಇದ್ದೇವೆ. ಈಗಾಗಲೇ ಜಿಲ್ಲೆಯಲ್ಲಿ ನಕಲಿ ಡಿಎಪಿ ಮಾರಾಟ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ 595 ಮಿ.ಮೀ ಮಳೆ ಸುರಿದಿದೆ. ಹಿಂಗಾರಿನಲ್ಲಿ 2.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 18,330 ಕ್ವಿಂಟಲ್ ಕಡಲೆ, 10,556 ಕ್ವಿಂಟಲ್ ಶೇಂಗಾ ಬಿತ್ತನೆ ಬೀಜ ವಿತರಿಸಲಾಗಿದೆ. ಹತ್ತಿ ಬಿತ್ತನೆ ಬೀಜ ಬೆಳೆಯಲ್ಲಿ ಕೆಲವೊಂದು ರೋಗ ಕಂಡು ಬಂದಿದ್ದು, ಯಾವ ಕಂಪನಿ ಬೀಜ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಇಲಾಖೆ ಅಧಿಕಾರಿಗಳಾದ ಮಹಾಂತೇಶ ಕೆ., ದೀಪಾ, ರೆಹಮಾನ್ ಸೇರಿದಂತೆ ಇತರರಿದ್ದರು.