Advertisement

ರಾಜ್ಯದಲ್ಲಿ ಈ ಬಾರಿ 5.11 ಕೋಟಿ ಮತದಾರರು: ಸಂಜೀವ್‌ ಕುಮಾರ್‌

10:58 PM Apr 08, 2019 | Lakshmi GovindaRaju |

ಬೆಂಗಳೂರು: ರಾಜ್ಯದಲ್ಲಿ ಮತದಾರರ ಸಂಖ್ಯೆ 5.11 ಕೋಟಿ ಆಗಿದ್ದು, ಇದರಲ್ಲಿ 43 ಸಾವಿರ ಸೇವಾ ಮತದಾರರನ್ನು ಸೇರಿಸಿದರೆ ಒಟ್ಟು ಮತದಾರರ ಸಂಖ್ಯೆ 5.11 ಆಗಲಿದೆ. 2014 ಲೋಕಸಭೆ ಚುನಾವಣೆಗೆ ಹೊಲಿಸಿದರೆ ಸುಮಾರು 49 ಲಕ್ಷ ಮತದಾರರು ಹೆಚ್ಚಾಗಿದ್ದು, 2018ರ ವಿಧಾನಸಭೆಗೆ ಹೊಲಿಸಿದರೆ ಮತದಾರರ ಸಂಖ್ಯೆಯಲ್ಲಿ 4 ಲಕ್ಷ ಏರಿಕೆಯಾಗಿದೆ.

Advertisement

ಒಟ್ಟು 5.11 ಕೋಟಿ ಮತದಾರರಲ್ಲಿ 2.58 ಕೋಟಿ ಪುರುಷರು, 2.52 ಕೋಟಿ ಮಹಿಳೆಯರು ಹಾಗೂ 43 ಸಾವಿರ ಸೇವಾ ಮತದಾರರು, 4,661 ತೃತೀಯ ಲಿಂಗಿ ಮತದಾರರು ಹಾಗೂ 4.34 ಲಕ್ಷ ದಿವ್ಯಾಂಗ ಮತದಾರರು ಇದ್ದಾರೆ.

ಇದರಲ್ಲಿ ಅತಿ ಹೆಚ್ಚು 28.48 ಲಕ್ಷ ಮತದಾರರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಹಾಗೂ ಅತಿ ಕಡಿಮೆ 15.13 ಲಕ್ಷ ಮತದಾರರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಇದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರು.

ಒಟ್ಟು 43 ಸಾವಿರ ಸೇವಾ ಮತದಾರರ ಪೈಕಿ 27 ಸಾವಿರ ಸಶಸ್ತ್ರ ಪಡೆ, 15 ಸಾವಿರ ಅರೆಸೇನಾ ಪಡೆ ಹಾಗೂ 35 ರಾಯಭಾರಿ ಕಚೇರಿಯಲ್ಲಿರುವವರು ಇದ್ದಾರೆ. ಅತಿ ಹೆಚ್ಚು 8 ಸಾವಿರ ಸೇವಾ ಮತದಾರರು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿದ್ದರೆ, ಅತಿ ಕಡಿಮೆ 94 ಸೇವಾ ಮತದಾರರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿದ್ದಾರೆ.

5 ಸಾವಿರ ಶತಾಯುಷಿ ಮತದಾರರು: ರಾಜ್ಯದಲ್ಲಿ ನೂರು ವರ್ಷ ದಾಟಿದ ಮತದಾರರು ಬರೋಬ್ಬರಿ 5,580 ಇದ್ದಾರೆ. ಉಳಿದಂತೆ 20ರಿಂದ 29 ವರ್ಷದ 1.07 ಕೋಟಿ, 30ರಿಂದ 39 ವರ್ಷದ 1.33 ಕೋಟಿ, 40ರಿಂದ 49 ವರ್ಷದ 1.04 ಕೋಟಿ, 50ರಿಂದ 59 ವರ್ಷದ 73.79 ಲಕ್ಷ, 60ರಿಂದ 69 ವರ್ಷದ 47.29 ಲಕ್ಷ, 70ರಿಂದ 79 ವರ್ಷದ 24.19 ಲಕ್ಷ, 80ರಿಂದ 89 ವರ್ಷದ 7.87 ಲಕ್ಷ, 90ರಿಂದ 99 ವರ್ಷದ 1.47 ಲಕ್ಷ ಮತದಾರರು ಇದ್ದಾರೆ.

Advertisement

10 ಲಕ್ಷ ಯುವ ಮತದಾರರು: ರಾಜ್ಯದಲ್ಲಿ 18 ಮತ್ತು 19ರ ವಯಸ್ಸಿನ 10.09 ಲಕ್ಷ ಯುವ ಮತದಾರರು ಇದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಯುವ ಮತದಾರರ ಸಂಖ್ಯೆ 10.72 ಲಕ್ಷ ಆಗಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಈ ಸಂಖ್ಯೆ 8 ಲಕ್ಷ ಇತ್ತು.

58 ಸಾವಿರ ಮತಗಟ್ಟೆ: ರಾಜ್ಯದಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಲಿರುವ 5.10 ಕೋಟಿ ಮತದಾರರಿಗೆ ಒಟ್ಟು 58,186 ಮತಗಟ್ಟೆಗಳ ಅವಶ್ಯಕತೆ ಇದೆ. ಇದರಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಅತಿ ಹೆಚ್ಚು 2,627 ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತಿ ಕಡಿಮೆ 1,837 ಮತಗಟ್ಟೆಗಳು ಇರಲಿವೆ. ಈ ಎಲ್ಲ ಮತಟ್ಟೆಗಳು ನೆಲಮಹಡಿಯಲ್ಲಿದ್ದು, ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಖಾತರಿಪಡಿಸಿಕೊಳ್ಳಲಾಗಿದೆ ಎಂದು ಸಂಜೀವ್‌ ಕುಮಾರ್‌ ತಿಳಿಸಿದರು.

639 ಸಖೀ ಮತಗಟ್ಟೆ: ರಾಜ್ಯದಲ್ಲಿ ಈ ಬಾರಿ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುವ ಸಖೀ ಮತಗಟ್ಟೆಗಳ ಸಂಖ್ಯೆ 639 ಆಗಿರಲಿದೆ. ಇದರಲ್ಲಿ ಅತಿ ಹೆಚ್ಚು 50 ಮತಗಟ್ಟೆಗಳು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಇರಲಿವೆ. ಅದೇ ರೀತಿ ದಿವ್ಯಾಂಗರು ನಿರ್ವಹಿಸಲಿರುವ 96 ಮತಗಟ್ಟೆಗಳಿರಲಿದ್ದು, ಇದರಲ್ಲಿ ಅತಿ ಹೆಚ್ಚು 16 ಮತಗಟ್ಟೆಗಳು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇರಲಿವೆ. ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸಲಿರುವ 39 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

ಬೆಳಗಾವಿಯಲ್ಲಿ ಅತಿ ಹೆಚ್ಚು ಇವಿಎಂ ಬಳಕೆ: ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಂತಿಮ ಕಣದಲ್ಲಿ ಅತಿ ಹೆಚ್ಚು 57 ಅಭ್ಯರ್ಥಿಗಳು ಇರುವುದರಿಂದ ಅಲ್ಲಿ ಇವಿಎಂನ 4 ಬ್ಯಾಲೆಟ್‌ ಯೂನಿಟ್‌ಗಳನ್ನು ಬಳಸಲಾಗುತ್ತದೆ. 9 ಕ್ಷೇತ್ರಗಳಲ್ಲಿ ತಲಾ ಎರಡು ಇವಿಎಂ ಬ್ಯಾಲೆಟ್‌ ಯೂನಿಟ್‌ ಬಳಸಲಾಗುವುದು. ಉಳಿದಂತೆ ಒಟ್ಟು 28 ಕ್ಷೇತ್ರಗಳಲ್ಲಿ 83,100 ಬ್ಯಾಲೆಟ್‌ ಯೂನಿಟ್‌, 68,580 ಕಂಟ್ರೋಲ್‌ ಯೂನಿಟ್‌, 74, 540 ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತದೆ. ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಎಮ್‌-3 ಇವಿಎಂಗಳನ್ನು ಬಳಸಲಾಗುತ್ತಿದ್ದರೆ, ಉಳಿದ 27 ಕ್ಷೇತ್ರಗಳಲ್ಲಿ ಎಮ್‌-2 ಇವಿಎಂಗಳನ್ನು ಬಳಸಲಾಗುತ್ತದೆ ಎಂದು ಚುನಾವಣಾ ಮುಖ್ಯಾಧಿಕಾರಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next