Advertisement
ಹೀಗಾಗಿ ಸರಣಿಯನ್ನು 2-2 ಸಮಬಲಕ್ಕೆ ತರಲು ಕೊಹ್ಲಿ ಪಡೆ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದುದು ಅನಿವಾರ್ಯ. ಅಣೆಕಟ್ಟಿನ ಎಲ್ಲ ಬಾಗಿಲನ್ನು ಒಮ್ಮೆಲೇ ತೆರೆದಾಗ ನುಗ್ಗಿ ಬರುವ ನೀರಿನಂತೆ ರನ್ ಪ್ರವಾಹ ಹರಿದು ಬರಬೇಕಿದೆ.ಇಲ್ಲಿ ಟಾಸ್ ಪಾತ್ರ ನಿರ್ಣಾಯಕ ಎಂಬುದು ಎಲ್ಲರ ಅನಿಸಿಕೆ. ಈ ವರೆಗೆ ಟಾಸ್ ಗೆದ್ದವರು ಮೊದಲು ಬೌಲಿಂಗ್ ಆಯ್ದುಕೊಂಡು, ಬಳಿಕ ಚೇಸ್ ಮಾಡಿ ಪಂದ್ಯವನ್ನು ಜಯಿಸಿದ್ದಾರೆ. ಮೊಟೆರಾದಲ್ಲಿ ಚೇಸಿಂಗ್ ಸುಲಭವಾಗಿ ಗೋಚರಿಸುತ್ತಿದೆ. ಆದರೆ, ಮೊದಲು ಬ್ಯಾಟಿಂಗ್ ನಡೆಸಿದ ತಂಡ ಸಾಮಾನ್ಯ ಮೊತ್ತ ದಾಖಲಿಸಿದ್ದರಿಂದ ಈ ಫಲಿತಾಂಶವೇ ಪುನರಾವರ್ತನೆಗೊಂಡಿದೆ. ಆಕಸ್ಮಾತ್ ದೊಡ್ಡ ಮೊತ್ತದ ಟಾರ್ಗೆಟ್ ಲಭಿಸಿದರೆ ಆಗೇನಾದೀತು? ಕುತೂಹಲ ಸಹಜ.
ಮೊದಲು ಬ್ಯಾಟಿಂಗ್ ನಡೆಸಿದ ತಂಡ ಬೃಹತ್ ಸ್ಕೋರ್ ದಾಖಲಿಸಬೇಕಾದರೆ ಓಪನಿಂಗ್ ಭರ್ಜರಿ ಆಗಿರಬೇಕು. ಆದರೆ ಟೀಮ್ ಇಂಡಿಯಾ ಇಲ್ಲಿಯೇ ಎಡವುತ್ತಿದೆ. ದ್ವಿತೀಯ ಪಂದ್ಯದಲ್ಲಿ ಇಶಾನ್ ಕಿಶನ್ ಅವರಿಂದ ಸ್ಫೋಟಕ ಬ್ಯಾಟಿಂಗ್ ಹೊರಹೊಮ್ಮಿದ್ದು ಬಿಟ್ಟರೆ ಬೇರೆಲ್ಲರದೂ ವೈಫಲ್ಯದ ಕತೆಯೇ ಆಗಿದೆ. ಮೊದಲ ಪಂದ್ಯದಲ್ಲಿ ಧವನ್ (4), ರಾಹುಲ್ (1); ಮೂರನೇ ಪಂದ್ಯದಲ್ಲಿ ರೋಹಿತ್ (15), ರಾಹುಲ್ (0) ಕೈಕೊಟ್ಟಿದ್ದರು. ಆರಂಭಿಕರು ಕ್ರೀಸ್ ಆಕ್ರಮಿಸಿಕೊಂಡು ಮುನ್ನುಗ್ಗುವಲ್ಲಿ ವಿಫಲರಾಗುತ್ತಿದ್ದಾರೆ. ಟಿ20 ಸ್ಪೆಷಲಿಸ್ಟ್ ರಾಹುಲ್ ಸತತವಾಗಿ ಮುಗ್ಗರಿಸಿರುವುದು ಚಿಂತೆಯ ಸಂಗತಿ. ಹೀಗಾಗಿ ಪವರ್ ಪ್ಲೇಯಲ್ಲಿ ರನ್ ಬರುತ್ತಿಲ್ಲ. ಮಧ್ಯಮ ಸರದಿಯಲ್ಲಿ ಒತ್ತಡ ಬೀಳುತ್ತಿದೆ.
ನಿರ್ಣಾಯಕ ಪಂದ್ಯದಲ್ಲೂ ರಾಹುಲ್ ಮೇಲೆ ತಂಡ ವಿಶ್ವಾಸ ಇರಿಸೀತೇ ಎಂಬುದೊಂದು ಪ್ರಶ್ನೆ. ರಾಹುಲ್ ಮತ್ತು ರೋಹಿತ್ ನಮ್ಮ ಪರಿಪೂರ್ಣ ಆರಂಭಿಕ ಜೋಡಿ ಎಂಬುದಾಗಿ ಕೊಹ್ಲಿ ಹೇಳಿರುವುದು, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೊಡ್ ಕೂಡ ರಾಹುಲ್ ಮೇಲೆ ಭರವಸೆ ಇರಿಸಿರುವುದನ್ನು ಕಂಡಾಗ ಇವರ ಸ್ಥಾನಕೆ ಚ್ಯುತಿ ಇಲ್ಲ ಎಂಬುದೊಂದು ಲೆಕ್ಕಾಚಾರ. ಹೀಗಾಗಿ ಸೂರ್ಯಕುಮಾರ್ ಮರಳುವುದು ಅನುಮಾನ.
Related Articles
Advertisement
ಕೊಹ್ಲಿ ಒಂದೇ ಸೊನ್ನೆಯ ಬಳಿಕ ಎಚ್ಚೆತ್ತು ಸತತ ಅರ್ಧ ಶತಕ ಬಾರಿಸಿರುವುದೊಂದು ಪ್ಲಸ್ ಪಾಯಿಂಟ್. ಇವರ ಆಟದಿಂದ ಉಳಿದವರಿಗೂ ಸ್ಫೂರ್ತಿ ಸಿಗುತ್ತಿದೆ. ಇಶಾನ್ ಕಿಶನ್, ಅಯ್ಯರ್, ಪಂತ್, ಪಾಂಡ್ಯ, ಸುಂದರ್ ಅವರೆಲ್ಲ ಜೋಶ್ ತೋರಿದರೆ ಮೇಲುಗೈ ಸಾಧಿಸುವುದು ಅಸಾಧ್ಯವೇನಲ್ಲ.
ಕೈಕೊಟ್ಟ ಬೌಲಿಂಗ್ ಟೀಮ್ ಇಂಡಿಯಾ ಬೌಲಿಂಗ್ ಟಾಪ್ ಲೆವೆಲ್‌ನಲ್ಲಿ ಇಲ್ಲದಿರುವುದು ಕೂಡ ಸಮಸ್ಯೆಯೇ ಆಗಿದೆ. ಆಂಗ್ಲರ ಎರಡೂ ಚೇಸಿಂಗ್ ವೇಳೆ ನಮ್ಮವರಿಗೆ ಉರುಳಿಸಲು ಸಾಧ್ಯವಾದದ್ದು ಎರಡು ವಿಕೆಟ್ ಮಾತ್ರ. ರಾಯ್-ಬಟ್ಲರ್ ಮುನ್ನುಗ್ಗಿ ಬಾರಿಸತೊಡಗಿದೊಡನೆಯೇ ಭಾರತದ ಬೌಲಿಂಗ್ ದಿಕ್ಕು ತಪ್ಪುತ್ತದೆ. ಈ ವರೆಗೆ ನಂ.1 ಬ್ಯಾಟ್ಸ್‌ಮನ್ ಮಾಲನ್ ಸಿಡಿದಿಲ್ಲವೆಂಬುದೇ ಸಮಾಧಾನಕರ ಸಂಗತಿ. ಆಲ್‌ರೌಂಡರ್ ಜಡೇಜ ಅನುಪಸ್ಥಿತಿ ತಂಡದ ಸಮತೋಲನವನ್ನು ತಪ್ಪಿಸಿರುವುದು ಸುಳ್ಳಲ್ಲ. ಸೈನಿ, ಚಹರ್, ತೇವಟಿಯಾ ಅವರೆಲ್ಲ ಸರತಿಯಲ್ಲಿದ್ದು, ಗುರುವಾರ ಇವರಲ್ಲೊಬ್ಬರು ಹನ್ನೊಂದರ ಬಳಗ ಪ್ರವೇಶಿಸಲೂಬಹುದು.