Advertisement

ರಾಜಧಾನಿಯಲ್ಲಿ 49 ಸಾವಿರ ಆರೋಗ್ಯ ಕಾರ್ಡ್‌ ವಿತರಣೆ

12:15 PM Jul 14, 2018 | |

ಬೆಂಗಳೂರು: ಯಶಸ್ವಿನಿ ಸೇರಿದಂತೆ ರಾಜ್ಯದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಆರೋಗ್ಯ ಯೋಜನೆಗಳನ್ನೆಲ್ಲಾ ವಿಲೀನಗೊಳಿಸಿ ಜಾರಿಗೆ ತಂದಿರುವ “ಆರೋಗ್ಯ ಕರ್ನಾಟಕ’ ಯೋಜನೆಯಡಿ ಬೆಂಗಳೂರಿನಲ್ಲಿ ಈವರೆಗೆ 49,480 ಮಂದಿ ಆರೋಗ್ಯ ಕಾರ್ಡ್‌ ಪಡೆದಿದ್ದಾರೆ.

Advertisement

ಏಪ್ರಿಲ್‌ನಿಂದ ಕಾರ್ಡ್‌ ವಿತರಣೆ ಆರಂಭವಾಗಿದ್ದರೂ ಆರಂಭದಲ್ಲಿ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಮೇ 31ರಂದು ಯಶಸ್ವಿನಿ ಯೋಜನೆಯು ಆರೋಗ್ಯ ಕರ್ನಾಟಕ ಯೋಜನೆಯಡಿ ವಿಲೀನಗೊಂಡ ಬಳಿಕ ಕಾರ್ಡ್‌ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗೆ ಮುಂಜಾನೆಯಿಂದಲೇ ಜನ ಕಾರ್ಡ್‌ಗಾಗಿ ಸಾಲುಗಟ್ಟಿ ನಿಲ್ಲುವುದು ಕಂಡುಬರುತ್ತಿದೆ.

ಆ ಹಿನ್ನೆಲೆಯಲ್ಲಿ ಕಾರ್ಡ್‌ ಪಡೆಯಲು ಸಾರ್ವಜನಿಕರು ಧಾವಂತ ತೋರದೆ ಚಿಕಿತ್ಸೆ ಅಗತ್ಯವಿದ್ದಾಗಲೇ ಕಾರ್ಡ್‌ ಪಡೆಯುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಕಾರ್ಡ್‌ ಇಲ್ಲದಿದ್ದರೂ ಬಿಪಿಎಲ್‌ ಪಡಿತರ ಕಾರ್ಡ್‌ ತೋರಿಸಿ ಚಿಕಿತ್ಸೆ ಪಡೆಯಬಹುದಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಆರೋಗ್ಯ ಕರ್ನಾಟಕ ಯೋಜನೆಯಡಿ ಏಪ್ರಿಲ್‌ನಿಂದ ಕಾರ್ಡ್‌ ವಿತರಣೆ ಆರಂಭವಾಗಿದ್ದರೂ ಇತ್ತೀಚೆಗೆ ಕಾರ್ಡ್‌ ಅಪೇಕ್ಷಿತರ ಸಂಖ್ಯೆ ಹೆಚ್ಚಾಗಿದೆ. ಕೆಲ ಆಸ್ಪತ್ರೆಗಳ ಬಳಿ ಮುಂಜಾನೆ 6ರಿಂದಲೇ ಜನ ಸಾಲುಗಟ್ಟಿ ನಿಲ್ಲಲಾರಂಭಿಸಿದ್ದಾರೆ. ಇದರಿಂದ ಜನರನ್ನು ನಿಯಂತ್ರಿಸಲು ಆಸ್ಪತ್ರೆ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.

ಮೊದಲ ಹಂತದಲ್ಲಿ ರಾಜ್ಯದ 11 ಆಸ್ಪತ್ರೆಗಳಲ್ಲಿ ಕಾರ್ಡ್‌ ವಿತರಿಸಲಾಗುತ್ತಿದ್ದು, ನಗರದ ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ವಿಕ್ಟೋರಿಯಾ ಆಸ್ಪತ್ರೆ ಸೇರಿವೆ. ಸದ್ಯ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಷ್ಟೇ ಕಾರ್ಡ್‌ ವಿತರಿಸುತ್ತಿದ್ದು, ನಿತ್ಯ 200ರಿಂದ 250 ಕಾರ್ಡ್‌ ವಿತರಣೆಯಾಗುತ್ತಿದೆ. ಉಳಿದೆರಡು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ಆರಂಭಿಕವಾಗಿ ಒಳರೋಗಿಗಳಿಗೆ ಕಾರ್ಡ್‌ ನೀಡಲಾಗುತ್ತಿದೆ. 

Advertisement

ಕಾರ್ಡ್‌ ಪಡೆಯಲು ಕಾಲಮಿತಿ ಇಲ್ಲ: ಆರೋಗ್ಯ ಕಾರ್ಡ್‌ ಪಡೆಯಲು ಸರ್ಕಾರ ಕಾಲಮಿತಿ ನಿಗದಿಪಡಿಸಿಲ್ಲ. ಅನಾರೋಗ್ಯಕ್ಕೆ ಒಳಗಾದಾಗ ಪಡಿತರ ಚೀಟಿ  ಹಾಗೂ ಆಧಾರ್‌ ಕಾರ್ಡ್‌ ತೋರಿಸಿ ಚಿಕಿತ್ಸೆ ಪಡೆಯಬಹುದಾಗಿದ್ದು, ಆಗ ಕಾರ್ಡ್‌ ತೆಗೆದುಕೊಳ್ಳಬಹುದು.

ಬಿಪಿಎಲ್‌ ಕಾರ್ಡ್‌ದಾರರಿಗೆ ಬಹುತೇಕ ಚಿಕಿತ್ಸೆ ಉಚಿತ. ಎಪಿಎಲ್‌ ಕಾರ್ಡ್‌ದಾರರು ಪಡೆಯುವ ಚಿಕಿತ್ಸೆಯಲ್ಲಿ ಶೇ.30ರಷ್ಟನ್ನು ಸರ್ಕಾರ ಭರಿಸಲಿದ್ದು, ಉಳಿದಿದ್ದನ್ನು ರೋಗಿಯೇ ಪಾವತಿಸಬೇಕು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಕಾರ್ಡ್‌ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ.

ಕಾರ್ಡ್‌ ಪಡೆಯುವುದು ಹೇಗೆ?: ಆರೋಗ್ಯ ಕಾರ್ಡ್‌ ಪಡೆಯಲು ಆಧಾರ್‌ ಕಾರ್ಡ್‌, ಪಡಿತರ ಚೀಟಿ ಕಡ್ಡಾಯ. ಪಡಿತರ ಚೀಟಿ ಇಲ್ಲದಿದ್ದರೆ ಆಧಾರ್‌ ಕಾರ್ಡ್‌ ತೆಗೆದುಕೊಂಡು ಹೋಗಬೇಕು. 10 ರೂ. ಪಾವತಿಸಿ ಅರ್ಜಿ ಪಡೆದು ಭರ್ತಿ ಮಾಡಬೇಕು. ದಾಖಲೆ ಪರಿಶೀಲಿಸಿ ಬೆರಳಚ್ಚು ಪಡೆದು ಕೆಲ ನಿಮಿಷದಲ್ಲೇ ಸ್ಥಳದಲ್ಲಿ ಕಾರ್ಡ್‌ ವಿತರಿಸುತ್ತಾರೆ. ಮೊದಲ ಕಾರ್ಡ್‌ಗೆ 10 ರೂ. ಕಾರ್ಡ್‌ ಕಳೆದರೆ 20 ರೂ. ಪಾವತಿಸಿ ಹೊಸ ಕಾರ್ಡ್‌ ಪಡೆಯಬಹುದು. ರಾಜ್ಯಾದ್ಯಂತ ಈವರೆಗೆ 2.55 ಲಕ್ಷ ಮಂದಿ ಕಾರ್ಡ್‌ ಪಡೆದಿದ್ದಾರೆ.

ಆರೋಗ್ಯ ಕಾರ್ಡ್‌ ಪಡೆಯಲು ಕಾಲಮಿತಿ ನಿಗದಿಪಡಿಸಿಲ್ಲ. ಅಲ್ಲದೆ ಚಿಕಿತ್ಸೆಗೆ ಈ ಕಾರ್ಡ್‌ ಕಡ್ಡಾಯವಲ್ಲ. ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿದಾಗ ಅಲ್ಲಿಯೇ ಆರೋಗ್ಯ ಕಾರ್ಡ್‌ ಮಾಡಿಸಿ ಚಿಕಿತ್ಸೆ ನೀಡಲಾಗುವುದು. ಹಾಗಾಗಿ ಜನ ತಕ್ಷಣ ಕಾರ್ಡ್‌ ಪಡೆಯಲು ಧಾವಿಸುವ ಅಗತ್ಯವಿಲ್ಲ.
-ಡಾ.ಬಿ.ಎಆರ್‌.ಮೋಹನ್‌, ಸ್ಥಾನೀಯ ವೈದ್ಯಾಧಿಕಾರಿ, ಕೆ.ಸಿ.ಜನರಲ್‌ ಆಸ್ಪತ್ರೆ

ಮೂರು ಆಸ್ಪತ್ರೆಗಳ ಜತೆಗೆ ಇನ್ನಷ್ಟು ಕೇಂದ್ರಗಳಲ್ಲಿ ಕಾರ್ಡ್‌ ವಿತರಿಸುವಂತಾಗಬೇಕು. ಬೆಂಗಳೂರು ಒನ್‌, ವಾರ್ಡ್‌ ಕಚೇರಿ ಇತರೆಡೆ ವಿತರಿಸಿದರೆ ಅನುಕೂಲವಾಗಲಿದೆ.
-ರಜಿಯಾ ಬೇಗಂ, ಕಾರ್ಡ್‌ ಆಕಾಂಕ್ಷಿ

Advertisement

Udayavani is now on Telegram. Click here to join our channel and stay updated with the latest news.

Next