ಬೆಂಗಳೂರು: ನಗರದ ಎಲ್ಲ ಬೀದಿ ದೀಪಗಳು ಮುಂಬರುವ ದಿನಗಳಲ್ಲಿ ಎಲ್‌ಇಡಿ ಬಲ್ಬ್ಗಳಿಂದ ಝಗಮಗಿಸಲಿವೆ. ಪ್ರಸ್ತುತ ನಗರದ ಬೀದಿ ದೀಪಗಳಿಗೆ ಸೋಡಿಯಂ ವೇಪರ್ ಬಲ್ಬ್ಗಳನ್ನು ಬಳಕೆ ಮಾಡಲಾಗುತ್ತಿದೆ.
ಇದಕ್ಕಾಗಿ ಪ್ರತಿ ತಿಂಗಳು 20 ಕೋಟಿ ರೂ. ಬರೀ ವಿದ್ಯುತ್ ಬಿಲ್ ಬರುತ್ತಿದ್ದು, ವಾರ್ಷಿಕ ಸುಮಾರು 300 ಕೋಟಿ ರೂ. ಬಿಬಿಎಂಪಿ ಪಾವತಿಸುತ್ತಿದೆ. ಆದ್ದರಿಂದ ವಿದ್ಯುತ್ ಉಳಿತಾಯಕ್ಕಾಗಿ ಎಲ್ಲ 4.85 ಲಕ್ಷ ಬಲ್ಬ್ಗಳನ್ನು ಎಲ್‌ಇಡಿಗೆ ಪರಿವರ್ತಿಸಲು ಪಾಲಿಕೆ ನಿರ್ಧರಿಸಿದೆ. ಮಂಗಳವಾರ ಬಿಬಿಎಂಪಿ ಸಭೆಯಲ್ಲಿ ಈ ಸಂಬಂಧ ಯೋಜನೆಗೆ ಅನುಮೋದನೆ ದೊರೆಯಿತು.
ಯೋಜನೆ ಕುರಿತು ಸಭೆಗೆ ಮಾಹಿತಿ ನೀಡಿದ ಆಯುಕ್ತ ಮಂಜುನಾಥ ಪ್ರಸಾದ್, ಈ ಯೋಜನೆಯಿಂದ ಪಾಲಿಕೆಗೂ ಆರ್ಥಿಕ ಹೊರೆ ತಗ್ಗಲಿದೆ. ಇದಕ್ಕಾಗಿ ಪಾಲಿಕೆ ಯಾವುದೇ ರೀತಿಯ ಹೂಡಿಕೆ ಮಾಡಬೇಕಾಗಿಲ್ಲ. ಟೆಂಡರ್ ಪಡೆದ ಕಂಪೆನಿಯೇ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸುವುದರ ಜತೆಗೆ ಹತ್ತು ವರ್ಷ ನಿರ್ವಹಣೆ ಮಾಡಲಿದೆ. ಎಲ್‌ಇಡಿ ಬೀದಿ ದೀಪಗಳು ವೈರ್‌ಲೆಸ್ ಆಗಿರುತ್ತವೆ. ಕುಳಿತಲ್ಲಿಂದಲೇ ನಿಯಂತ್ರಣ ಮಾಡಬಹುದು.
ದುರಸ್ತಿಗೆ ಬಂದರೆ, ಕೇವಲ 48 ಗಂಟೆಗಳಲ್ಲಿ ಆ ಬಲ್ಬ್ ಬದಲಿಸಲಿಸಲಾಗುವುದು. ಶಾಪೂರ್‌ಜಿ ಕನ್ಸೋರ್ಷಿಯಂ ಕಂಪೆನಿಯು ಇದಕ್ಕೆ ಮುಂದಾಗಿದ್ದು ಶೇ. 85.5ರಷ್ಟು ವಿದ್ಯುತ್ ಉಳಿತಾಯದ ಭರವಸೆ ನೀಡಿದೆ. ಇದರಿಂದ ಪಾಲಿಕೆಗೆ ಶೇ. 20ರಷ್ಟು ಹಣ ಅಂದರೆ ತಿಂಗಳಿಗೆ 3.5 ಕೋಟಿ ರೂ. ಉಳಿತಾಯವಾಗಲಿದೆ.
ಈಗಿರುವ ಎಲ್‌ಇಡಿಗಳ ಕತೆ?: ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ಹಾಗಿದ್ದರೆ ಈಗಾಗಲೇ ಹಲವೆಡೆ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ಅವುಗಳ ಕತೆ ಏನು ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಸದ್ಯ ಶೇ. 15ರಿಂದ 20ರಷ್ಟು ಎಲ್‌ಇಡಿ ಬಲ್ಬ್ಗಳು ಇವೆ. ಅವುಗಳನ್ನು ಉದ್ಯಾನ, ಕೆರೆಗಳು ಮತ್ತಿತರ ಕಡೆಗಳಲ್ಲಿ ಬಳಸಬಹುದಾಗಿದೆ ಎಂದು ಹೇಳಿದರು.