ಕಲಬುರಗಿ : ದಿನೇದಿನೇ ಹೆಚ್ಚಳವಾಗುತ್ತಿರುವ ಕೊರೊನಾದಿಂದ ಕಂಗಾಲಾಗಿರುವ ಜನತೆ ಸೂಕ್ತ ಚಿಕಿತ್ಸೆಗೆ ಪರದಾಡುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಲ್ಲಾಡಳಿತ 48 ಕಡೆ ಕೋವಿಡ್-19 ಹೆಲ್ಪ್ ಡೆಸ್ಕ್ ಸ್ಥಾಪಿಸಲು ಕ್ರಮ ಕೈಗೊಂಡಿದೆ. ಮಂಗಳವಾರ ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿನ ಹೆಲ್ಪ್ ಡೆಸ್ಕ್ ಕಾರ್ಯಾರಂಭ ಮಾಡಿದ ನಂತರ ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ಕೋವಿಡ್-19 ಕುರಿತು ಸಾರ್ವಜನಿಕರಲ್ಲಿ ಅನೇಕ ಗೊಂದಲಗಳಿದ್ದು, ಅವುಗಳನ್ನು ಹೋಗಲಾಡಿಸಲು ಕಲಬುರಗಿ ನಗರದ 48 ಕಡೆಗಳಲ್ಲಿ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಹಕಾರದೊಂದಿಗೆ ಜಿಲ್ಲಾಡಳಿತ ಹೆಲ್ಪ್ ಡೆಸ್ಕ್ ಸ್ಥಾಪಿಸಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆ ಮತ್ತು ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಪಾಲಿಕೆ ಕಚೇರಿ, ಪ್ರಮುಖ ವೃತ್ತಗಳಲ್ಲಿ ಜನರು ಹೆಚ್ಚಾಗಿ ಓಡಾಡುವ ಜಾಗಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗುತ್ತಿದೆ ಎಂದರು.
ಹೆಲ್ಪ್ ಡೆಸ್ಕ್ನಲ್ಲಿ ಸರ್ಕಾರಿ ಹಾಗೂ ಖಾಸಗಿ ಕೋವಿಡ್ ಆಸ್ಪತ್ರೆ, ಕೋವಿಡ್ ಪರೀಕ್ಷಾ ಕೇಂದ್ರ, ವ್ಯಾಕ್ಸಿನ್ ಕೇಂದ್ರ, ಪೊಲೀಸ್ ಕಂಟ್ರೋಲ್ ರೂಮ್, ಆರೋಗ್ಯ ಸುರಕ್ಷಾ ಹೆಲ್ಪ್ ಸೆಂಟರ್‌ನ ಹೆಲ್ಪ್ ಲೈನ್, ಆ್ಯಂಬುಲೆನ್ಸ್ ಹಾಗೂ ತುರ್ತು ಕೋವಿಡ್ ಸಹಾಯವಾಣಿ ಸಂಖ್ಯೆ ಕುರಿತ ಮಾಹಿತಿ ನೀಡಲಾಗುತ್ತಿದೆ. ಅನಕ್ಷರಸ್ಥರಿಗೂ ಇದು ನೆರವಿಗೆ ಬರಲಿದೆ. ಅಲ್ಲದೇ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿಯಿರುವ ಬೆಡ್ (ಹಾಸಿಗೆ)ಗಳ ಮಾಹಿತಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ರೋಗಿಯ ಆರೋಗ್ಯ ಸ್ಥಿತಿ ತೀವ್ರ ಗಂಭೀರ ಸ್ಥಿತಿಯಲ್ಲಿದ್ದಲ್ಲಿ ಹಾಸಿಗೆ ಖಾಲಿಯಿರುವ ಆಸ್ಪತ್ರೆಯನ್ನು ಸಂಪರ್ಕಿಸಿ ರೋಗಿಯನ್ನು ಚಿಕಿತ್ಸೆಗೆ ಕಳುಹಿಸಲಾಗುತ್ತದೆ. ಪ್ರಮುಖವಾಗಿ ಸಾರ್ವಜನಿಕರಿಗೆ ಆತ್ಮಸ್ಥೈರ್ಯ ಮತ್ತು ಧೈರ್ಯ ನೀಡುವ ಕೆಲಸವನ್ನು ಸಹಾಯವಾಣಿ ಮಾಡಲಿದೆ ಎಂದರು. ಸಹಾಯವಾಣಿಯಲ್ಲಿ ಇಬ್ಬರು ಶಿಕ್ಷಕರು, ಒಬ್ಬರು ಹೋಂ ಗಾರ್ಡ್, ಕೆಕೆಆರ್‌ಡಿಬಿ ಪ್ರಾಯೋಜಿತ ಆರೋಗ್ಯ ಸುರಕ್ಷಾ ಚಕ್ರದ ಒಬ್ಬರು ಆರೋಗ್ಯ ಕಾರ್ಯಕರ್ತರು ಇರುತ್ತಾರೆ. ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆ ವರೆಗೆ ಸಹಾಯವಾಣಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು. ಇದೇ ಮಾದರಿಯಲ್ಲಿ ಪ್ರತಿ ತಾಲೂಕಿನಲ್ಲಿಯೂ ಎರಡ್ಮೂರು ಹೆಲ್ಪ್ ಡೆಸ್ಕ್ ತೆರೆಯಲಾಗುತ್ತಿದೆ. ಐದು ನಿಮಿಷದ ಅವ ಧಿಯೊಳಗೆ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲಾಗುತ್ತದೆ ಎಂದು ಹೆಲ್ಪ್ ಡೆಸ್ಕ್ ಕಾರ್ಯವೈಖರಿ ತಿಳಿಸಿದರು.
ಆಕ್ಸಿಜನ್ ಕೊರತೆಯಿಲ್ಲ: ಕಲಬುರಗಿ ನಗರದಲ್ಲಿ ಔಷಧಿ ಮತ್ತು ಆಕ್ಸಿಜನ್ ಕೊರತೆಯಿಲ್ಲ. ಬಳ್ಳಾರಿಯಿಂದ ಲಿಕ್ವಿಡ್ ಆಕ್ಸಜನ್ ತರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸಂಸದ ಡಾ| ಉಮೇಶ ಜಾಧವ ಸಹಕಾರ ನೀಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾದಲ್ಲಿ ತಕ್ಷಣ ಪೂರೈಸಲು ಎಮರ್ಜೆನ್ಸಿ ಆಕ್ಸಿಜನ್ ಬ್ಯಾಂಕ್ ಸ್ಥಾಪಿಸಿದ್ದು, ಆಸ್ಪತ್ರೆಯ ಕೋರಿಕೆ ಮೇರೆಗೆ ಆಕ್ಸಿಜನ್ ಟ್ಯಾಂಕ್ ಪೂರೈಸಲಾಗುತ್ತಿದೆ ಎಂದರು.
ಕೋವಿಡ್-19 ಕುರಿತು ಅನಗತ್ಯ ಭಯ ಬೇಡ. ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾಡಳಿತ ಸಕಲ ಕ್ರಮ ಕೈಗೊಂಡಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ. ಸಾರ್ವಜನಿಕರು ಕೋವಿಡ್ ನಿಯಮಾವಳಿ ಪಾಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಧಿಕಾರಿ ಮನವಿ ಮಾಡಿದರು. ಕಲಬುರಗಿ ಜಿಮ್ಸ್ ನಲ್ಲಿರುವ ಟ್ರಾಮಾ ಕೇರ್‌ನ್ನು ಸಂಪೂರ್ಣಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ್ದರಿಂದ ಹೆಚ್ಚುವರಿ 100 ಹಾಸಿಗೆ ಲಭ್ಯವಾಗಿವೆ.
ಜಿಮ್ಸ್‌ನಲ್ಲಿಯೇ 400ಕ್ಕೂ ಹೆಚ್ಚು ಹಾಸಿಗೆಗಳು ಕೋವಿಡ್ ರೋಗಿಗಳ ಚಿಕಿತ್ಸೆಗೆ ಮೀಸಲಿರಿಸಲಾಗಿದೆ ಎಂದರು. ಹೆಚ್ಚುವರಿ ಜಿಲ್ಲಾ ಧಿಕಾರಿ ಡಾ| ಶಂಕರ ವಣಿಕ್ಯಾಳ, ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ಡಿಡಿಪಿಐ ಅಶೋಕ ಭಜಂತ್ರಿ, ದಕ್ಷಿಣ ವಲಯ ಬಿಇಒ ಶಂಕ್ರೆಮ್ಮ ಡವಳಗಿ, ಉತ್ತರ ವಲಯ ಬಿಇಒ ಎಸ್. ಬನ್ನಿಕಟ್ಟಿ ಹಾಗೂ ಶಿಕ್ಷಕರು, ಕೋವಿಡ್ ಸುರಕ್ಷಾ ಚಕ್ರ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.