ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ಪೂರ್ವಭಾವಿಯಾಗಿ ಇಲಾಖಾವಾರು ಸಚಿವರ ಜತೆ ಸೋಮವಾರ ದಿನವಿಡೀ ಸಭೆ ನಡೆಸಿದರು. 2019-20 ನೇ ಸಾಲಿನ ಬಜೆಟ್‌ನಲ್ಲಿ ಇಲಾಖಾವಾರು ಮೀಸಲಿಟ್ಟಿದ್ದ ಹಣ, ಘೋಷಿಸಿದ್ದ ಯೋಜನೆ ಹಾಗೂ ಅನುಷ್ಠಾನದ ಪ್ರಮಾಣದ ಬಗ್ಗೆ ಮಾಹಿತಿ ಪಡೆದು 2020-21 ಬಜೆಟ್‌ನಲ್ಲಿ ನಿಗದಿ ಪಡಿಸಬಹುದಾದ ಅನುದಾನ ಕುರಿತು ಸಚಿವರ ಜತೆ ಚರ್ಚಿಸಿದರು.
ಕೆಪಿಸಿ ಭವನದಲ್ಲಿ ನಡೆದ ಸಭೆಯಲ್ಲಿ ಉನ್ನತ ಶಿಕ್ಷಣ, ಐಟಿ-ಬಿಟಿ, ವೈದ್ಯಕೀಯ ಶಿಕ್ಷಣ, ವಸತಿ, ಕಂದಾಯ, ತೋಟಗಾರಿಕೆ ರೇಷ್ಮೆ , ಪೌರಾಡಳಿತ ಇಲಾಖೆಗಳ ಸಚಿವರ ಜತೆ ಸಮಾಲೋಚನೆ ನಡೆಸಿದರು ಇದೇ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಗೆ 4500 ಕೋಟಿ ರೂ. ಅನುದಾನ ಒದಗಿಸುವಂತೆ ಉಪ ಮುಖ್ಯಮಂತ್ರಿಯೂ ಆಗಿರುವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮನವಿ ಮಾಡಿದರು.
ಮುಖ್ಯಮಂತ್ರಿಯವರ ಜತೆಗಿನ ಸಭೆಯ ನಂತರ ಮಾತನಾಡಿದ ಡಾ.ಸಿ.ಎನ್.ಅಶ್ವತ್ಥನಾರಾ ಯಣ, ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ನಮ್ಮ ಪ್ರಮುಖ ಆದ್ಯತೆ. ಅದಕ್ಕಾಗಿಯೇ ಈ ಬಜೆಟ್‌ನಲ್ಲಿ 4500 ಕೋಟಿ ರೂ. ಅನದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದ್ದೇನೆ. ಉನ್ನತ ಶಿಕ್ಷಣ, ವಿಜ್ಞಾನ- ತಂತ್ರಜ್ಞಾನ, ಐಟಿ-ಬಿಟಿ ಹಾಹೂ ವೈದ್ಯಕೀಯ ಶಿಕ್ಷಣ ಇಲಾಖೆ ಯೋಜನೆಗಳಿಗೆ ಹೆಚ್ಚು ಅನು ದಾನ ಕೋರಿದ್ದೇನೆ.
ನಮ್ಮ ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟ ಹೆಚ್ಚಿಸು ವುದು ಪ್ರಮುಖ ವಿಚಾರ. ಪದವಿ ಕಾಲೇಜುಗಳ ಗುಣಮಟ್ಟ ಹೆಚ್ಚಿಸುವ ಜತೆಗೆ ಹೊಸದಾಗಿ ಪ್ರಾರಂಭವಾಗಿರುವ ವಿಶ್ವವಿದ್ಯಾಲಯಗಳ ಸುಧಾ ರಣೆಗೆ ಒತ್ತು ನೀಡಬೇಕು. ಕಾಲೇಜು ಶಿಕ್ಷಣಕ್ಕೆ 1463 ಕೋಟಿ ರೂ., ತಾಂತ್ರಿಕ ಶಿಕ್ಷಣಕ್ಕೆ 369 ಕೋಟಿ ರೂ., ಬೆಂಗಳೂರು ಕೇಂದ್ರ ವಿವಿ ಹಾಗೂ ಉತ್ತರ ವಿವಿಗೆ ತಲಾ 500 ಕೋಟಿ ರೂ. ಸಂಸ್ಕೃತ ವಿವಿಗೆ 300 ಕೋಟಿ ರೂ. ರಾಣಿ ಚೆನ್ನಮ್ಮ ವಿವಿಗೆ 500 ಕೋಟಿ ರೂ. ಸೇರಿ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ 3800 ಕೋಟಿ ರೂ. ಬೇಡಿಕೆ ಸಲ್ಲಿಸಲಾಗಿದೆ.
ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೋಮಾ ಕಾಲೇಜು ಹಾಗೂ ಹೊಸ ಎಂಜಿನಿಯರಿಂಗ್ ಕಾಲೇಜುಗಳ ಸುಧಾರಣೆಗೆ ಬಹಳಷ್ಟು ಹಣ ಬೇಕಿರುವುದರಿಂದ ಒಟ್ಟಾರೆ 4500 ಕೋಟಿ ರೂ.ಅನುದಾನ ಕೇಳಲಾಗಿದೆ. ಐಟಿ-ಬಿಟಿ ಕ್ಷೇತ್ರದ ಅಭವೃದ್ಧಿಗೆ ಒಲವು ತೋರಿರುವ ಮುಖ್ಯಮಂತ್ರಿಯವರು ಅನುದಾನ ಹೆಚ್ಚಿಸಲು ಆಸಕ್ತಿ ತೋರಿದ್ದಾರೆ. ಈಗಿನ 120 ಕೋಟಿ ರೂ. ಗಿಂತ ಮೂರು ಪಟ್ಟು ಹೆಚ್ಚು ಅಂದರೆ 342 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು. ವಿಜ್ಞಾನ ತಂತ್ರಜ್ಞಾನ ಇಲಾಖೆಯಲ್ಲಿ ನಾಲೆಡ್ಜ್ ಸಿಟಿ, ರಾಜ್ಯ ಸಂಶೋಧನಾ ನಿಧಿಗಾಗಿ 188.4 ಕೋಟಿ ರೂ. ಕೇಳಿದೇವೆ. ಹೊಸ ವೈದ್ಯಕೀಯ ಕಾಲೇಜುಗಳ ಬೇಡಿಕೆ ಇರುವುದರಿಂದ ಸಮಗ್ರ ಅಭಿವೃದ್ಧಿಗೆ 1500 ಕೋಟಿ ರೂ. ಕೋರಲಾಗಿದೆ ಎಂದು ತಿಳಿಸಿದರು.