ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸರಕಾರಿ ನಿವಾಸ ನವೀಕರಣಕ್ಕೆ 45 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಬಿಜೆಪಿ ಪ್ರತಿಭಟನೆ ನಡೆಸಿತ್ತು. ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಅದಕ್ಕಿಂತ ಬಹಳ ಮುಂದೆ ಹೋಗಿದ್ದಾರೆ. ವೆಚ್ಚ ಆಗಿದ್ದು ಕೇವಲ 45 ಕೋಟಿ ರೂ. ಅಲ್ಲ 171 ಕೋಟಿ ರೂ. ಎಂದು ಬಾಂಬ್ ಸಿಡಿಸಿದ್ದಾರೆ. ಅವರ ಪ್ರಕಾರ ಲ್ಯೂಟೆನ್ಸ್ ಬಂಗಲೆ ಏರಿಯಾದಲ್ಲಿ ಅನುಪಾತಕ್ಕಿಂತ ಹೆಚ್ಚು ಅಭಿವೃದ್ಧಿ ಮಾಡುವಂತಿಲ್ಲ. ಆದರೆ 20 ಸಾವಿರ ಚದರಡಿ ವ್ಯಾಪ್ತಿಯಲ್ಲಿರುವ ಕೇಜ್ರಿವಾಲ್ ಬಂಗಲೆಯನ್ನು ಮೂರು ಅಂತಸ್ತಿಗೆ ಏರಿಸಲಾಗುತ್ತಿದೆ. ಇದು ನಿಯಮ ಉಲ್ಲಂಘನೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮುಂಚೆ ಮುಖ್ಯಮಂತ್ರಿ ಬಂಗ ಲೆಯ ಸುತ್ತ 22 ಅಧಿಕಾರಿಗಳ ನಿವಾಸಗಳೂ ಇದ್ದವು. ಈಗ ಕೇಜ್ರಿ ಬಂಗಲೆಯನ್ನು ವಿಸ್ತರಿಸಲು ಈ ಬಂಗಲೆಯನ್ನು ಖಾಲಿ ಮಾಡಿಸಿ, ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಗ್ರಾಮದಲ್ಲಿ 5 ಫ್ಲಾಟ್‌ಗಳನ್ನು ತಲಾ 6 ಕೋಟಿ ರೂ.ಗೆ ಖರೀದಿಸಿದೆ. ಇದಕ್ಕೆಲ್ಲ ಸರಕಾರದಿಂದಲೇ ಹಣ ನೀಡಲಾಗಿದೆ ಎಂದು ಮಾಕೆನ್ ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ದೂರು ದಾಖಲಿಸುವುದಾಗಿಯೂ ಹೇಳಿದ್ದಾರೆ.