ಢಾಕಾ: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಕಾಯ್ದೆಯನ್ನು ಭಾರತ ಸರ್ಕಾರ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ 445 ಬಾಂಗ್ಲಾದೇಶಿ ಪ್ರಜೆಗಳು ಭಾರತಕ್ಕೆ ವಾಪಸ್ ಆಗಿದ್ದಾರೆಂದು ಬಾಂಗ್ಲಾದೇಶದ ಅರೆಸೇನಾಪಡೆ ಮುಖ್ಯಸ್ಥ ತಿಳಿಸಿದ್ದಾರೆ.
ಗುರುವಾರ ಬಾಂಗ್ಲಾದೇಶ ಗಡಿ ಭದ್ರತಾ ಪಡೆಯ(ಬಿಜಿಬಿ) ನಿರ್ದೇಶಕ ಮೇಜರ್ ಜನರಲ್ ಮೊಹಮ್ಮದ್ ಶಫೀನುಲ್ ಇಸ್ಲಾಂ ಪತ್ರಿಕಾಗೋಷ್ಠಿಯಲ್ಲಿ ಅಂಕಿಅಂಶವನ್ನು ಬಹಿರಂಗಗೊಳಿಸಿದ್ದಾರೆ.
2019ರಲ್ಲಿ ಭಾರತದಿಂದ ಬಾಂಗ್ಲಾದೇಶದೊಳಕ್ಕೆ ಕಾನೂನು ಬಾಹಿರವಾಗಿ ಗಡಿದಾಟಿ ಬಂದ ಸುಮಾರು ಒಂದು ಸಾವಿರಕ್ಕೂ ಅಧಿಕ ಜನರನ್ನು ಬಂಧಿಸಲಾಗಿತ್ತು. ಇದರಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ 445 ಮಂದಿ ಭಾರತಕ್ಕೆ ವಾಪಸ್ ತೆರಳಿರುವುದಾಗಿ ತಿಳಿಸಿದರು.
ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಗಡಿನುಸುಳಿ ಬಂದ ಜನರ ಗುರುತುಪತ್ತೆ ಹಚ್ಚಲಾಗಿತ್ತು. ಕಾನೂನು ಬಾಹಿರವಾಗಿ ಗಡಿನುಸುಳಿ ಬಂದ ಘಟನೆಯಲ್ಲಿ 253 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇವರಲ್ಲಿ ಕೆಲವರು ಮಾನವ ಕಳ್ಳಸಾಗಣೆಗೆ ಒಳಗಾದವರು ಎಂದು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಅತಿಕ್ರಮ ಪ್ರವೇಶ ಘಟನೆ ಬಾಂಗ್ಲಾದೇಶ ಮತ್ತು ಭಾರತದ ಗಡಿ ಭದ್ರತಾ ಪಡೆ ನಡುವೆ ಯಾವುದೇ ಘರ್ಷಣೆಗೆ ಕಾರಣವಾಗಿಲ್ಲ ಎಂದು ಇಸ್ಲಾಂ ಈ ಸಂದರ್ಭದಲ್ಲಿ ಹೇಳಿದರು. ಕಳೆದ ವಾರ ಮೇಜರ್ ಜನರಲ್ ಇಸ್ಲಾಂ ಭಾರತಕ್ಕೆ ಭೇಟಿ ನೀಡಿದ್ದು, ಎನ್ ಆರ್ ಸಿ ಜಾರಿ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರವಾಗಿದೆ. ಉಭಯ ದೇಶಗಳ ಗಡಿ ಭದ್ರತಾ ಪಡೆಗಳ ನಡುವೆ ಉತ್ತಮ ಸಹಕಾರ ಇದೆ ಎಂದು ಪ್ರತಿಕ್ರಿಯೆ ನೀಡಿದ್ದರು.